ಬಿಹಾರ್ ರಾಜ್ಯದ ಕೈಮೂರ್ ಜಿಲ್ಲೆಯಲ್ಲಿ ಮೂರು ಸರಕಾರಿ ಕಟ್ಟಡಗಳನ್ನು ಶಂಕಿತ ಮಾವೋವಾದಿಗಳು ಸ್ಫೋಟಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶಂಕಿತ ಮಾವೋವಾದಿಗಳು ಕೈಮೂರ್ ಜಿಲ್ಲೆಯ ಸರೋದಗ್ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ, ಸರಕಾರಿ ಶಾಲೆ ಹಾಗೂ ಸಮುದಾಯ ಕೇಂದ್ರವನ್ನು ಸ್ಫೋಟಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಫೋಟದಲ್ಲಿ ಮೂರು ಕಟ್ಟಡಗಳು ಸಂಪೂರ್ಣವಾಗಿ ನಾಶವಾಗಿದ್ದು,ಮಾವೋವಾದಿಗಳು ಡೈನಾಮೈಟ್ ಬಳಸಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ. ಆದರೆ ಯಾವುದೇ ಸಾವು ನೋವುಗಳಾದ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ, ಬಿಹಾರ್‌ನ ಔರಂಗಾಬಾದ್ ಜಿಲ್ಲೆಯ ಕಾಂಚನ್‌ಪುರ್ ಗ್ರಾಮದಲ್ಲಿರುವ ಸರಕಾರಿ ಶಾಲೆಯನ್ನು ಕೂಡಾ ಶಂಕಿತ ಮಾವೋವಾದಿಗಳು ಸ್ಫೋಟಿಸಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.