ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಿಂದುತ್ವ ಬಿಜೆಪಿಯ ಆಸ್ತಿಯಲ್ಲ ಎಂದವರನ್ನು ಶ್ಲಾಘಿಸಿದ ಅಡ್ವಾಣಿ!
(Hindutva | secularism | L K Advani | Ram Jethmalani)
ಹಿಂದುತ್ವ ಬಿಜೆಪಿ ಆಸ್ತಿಯಲ್ಲ ಎಂದು ಹಿರಿಯ ವಕೀಲ ರಾಮ್ ಜೇಠ್ಮಲಾನಿ ಜರೆದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಎಲ್.ಕೆ. ಅಡ್ವಾಣಿ, ಅವರು ಹೇಳಿರುವಂತೆ ಹಿಂದುತ್ವ ಮತ್ತು ಜಾತ್ಯತೀತೆ ಎರಡೂ ಒಂದೇ ಎನ್ನುವುದನ್ನು ಜನತೆಗೆ ಅರ್ಥ ಮಾಡಿಸಬೇಕಾಗಿದೆ ಎಂದು ಹೇಳಿದ್ದಾರೆ.
'ಹಿಂದುತ್ವವು ಬಿಜೆಪಿಯ ಆಸ್ತಿಯಲ್ಲ' ಎನ್ನುವ ಲೇಖನದ ಶೀರ್ಷಿಕೆಯು ಪ್ರಚೋದನಾಕಾರಿ ಸಂದೇಶವನ್ನು ರವಾನಿಸುತ್ತದೆ ಎಂದು ರಾಮ್ ಜೇಠ್ಮಲಾನಿಯವರು ನಿಯತಕಾಲಿಕವೊಂದಕ್ಕೆ ಬರೆದಿರುವ ಲೇಖನವನ್ನು ಉಲ್ಲೇಖಿಸುತ್ತಾ ತನ್ನ ಬ್ಲಾಗಿನಲ್ಲಿ ಅಡ್ವಾಣಿ ಅಭಿಪ್ರಾಯಪಟ್ಟಿದ್ದಾರೆ.
ಜೇಠ್ಮಲಾನಿಯವರ ಲೇಖನವು ಗಂಭೀರ ಸ್ವರೂಪದ್ದಾಗಿರುವುದರಿಂದ ನಮ್ಮ ಪಕ್ಷದ ಕೆಲವು ನಾಯಕರು ಅಸಮಾಧಾನಗೊಳ್ಳಬಹುದು. ಆದರೆ ಲೇಖನವು ಸರಿಯಾಗಿದೆ. ಲೇಖನವನ್ನು ಶ್ಲಾಘಿಸಬೇಕಾಗಿದೆ ಎಂದಿರುವ ಅಡ್ವಾಣಿಯವರು, ಹಿಂದುತ್ವ ಮತ್ತು ಭಾರತದ ಜಾತ್ಯತೀತತೆಯು ಸಮಾನಾರ್ಥವನ್ನು ಹೊಂದಿದೆ ಎಂಬುದನ್ನು ಜನತೆಗೆ ವಿವರಿಸಲು ಬಿಜೆಪಿಗೆ ಸಾಧ್ಯವಾಗದೇ ಇರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಬರೆದುಕೊಂಡಿದ್ದಾರೆ.
ಹಿಂದುತ್ವ ಎನ್ನುವುದು ಜೀವನ ಶೈಲಿ ಅಥವಾ ಮಾನಸಿಕ ಸ್ಥಿತಿಯಾಗಿದ್ದು, ಹಿಂದೂ ಧಾರ್ಮಿಕ ಮೂಲಭೂತವಾದ ಎಂದು ಅಂದುಕೊಳ್ಳಬಾರದು ಎಂದು ಹಿಂದುತ್ವದ ಕುರಿತು ನ್ಯಾಯಾಲಯದ ಐತಿಹಾಸಿಕ ತೀರ್ಪು ನೀಡಿದ್ದು ಜೇಠ್ಮಲಾನಿಯವರಿಂದಾಗಿ ಎಂದು ಇದೇ ಸಂದರ್ಭದಲ್ಲಿ ಅಡ್ವಾಣಿಯವರು ಸ್ಮರಿಸಿಕೊಂಡಿದ್ದಾರೆ.
ತನ್ನ ಬ್ಲಾಗ್‌ನ ಇತ್ತೀಚಿನ ಪೋಸ್ಟ್ 'ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯ ಬೇರುಗಳು' ಎಂಬ ಲೇಖನದಲ್ಲಿ ಹಿಂದುತ್ವದ ಕುರಿತು ಹಲವು ವಿಚಾರಗಳನ್ನು ಅಡ್ವಾಣಿಯವರು ಪ್ರಸ್ತಾಪಿಸಿದ್ದಾರೆ.
ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಜಾತ್ಯತೀತೆಯ ಯಶಸ್ಸಿಗೆ ಹಿಂದೂ ಮೌಲ್ಯಗಳು ಜವಾಬ್ದಾರಿಯುತ ಪಾತ್ರವಹಿಸಿದ್ದವು ಎಂದೂ ಅಡ್ವಾಣಿಯವರು ತಿಳಿಸಿದ್ದಾರೆ.