ತಮ್ಮದಲ್ಲದ ತಪ್ಪಿಗಾಗಿ ಸಮಾಜದ ಮೂರನೇ ಸ್ತರದಲ್ಲಿ ದೂಷಣೆಗೊಳಗಾಗುತ್ತಾ ಬದುಕುತ್ತಿರುವ ಹಿಜಿಡಾಗಳಿಗಾಗಿಯೇ ನಡೆಯುವ ಮಿಸ್ ಇಂಡಿಯಾ 2010 ಸ್ಪರ್ಧೆಯಲ್ಲಿ ಕೇರಳ ಮೊದಲನೇ, ತಮಿಳುನಾಡು ಎರಡನೇ ಹಾಗೂ ಕರ್ನಾಟಕ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.
'ಟ್ಸಾನ್ಸ್‌ಜೆಂಡರ್ ಮಿಸ್ ಇಂಡಿಯಾ 2010' ಸ್ಪರ್ಧೆಯಲ್ಲಿ ದೇಶದಾದ್ಯಂತದ 19 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಇದರಲ್ಲಿ ಮೊದಲನೇ ಸ್ಥಾನದ 23ರ ಹರೆಯದ ಕೇರಳದ ಸಬೀತಾ ಪಾಲಾಯಿತು. ಆಕೆ/ಆತನಿಗೆ ಮಿಸ್ ಇಂಡಿಯಾ ಕಿರೀಟವನ್ನು ತೊಡಿಸಲಾಯಿತು ಎಂದು ಆಯೋಜಕರು ತಿಳಿಸಿದ್ದಾರೆ.
ತಮಿಳುನಾಡಿನ ಸೇಲಂನ ಮನಿಮೇಕಲ ಎಂಬವರು ಎರಡನೇ ಸ್ಥಾನ ಪಡೆದುಕೊಂಡರು. ಮೂರನೇ ಸ್ಥಾನ ಬೆಂಗಳೂರಿನ ರಮ್ಯಾ ಅವರಿಗೆ ಒಲಿದಿದೆ. ಖೋಜಾಗಳ ಜೀವನ ಮಟ್ಟವನ್ನು ವೃದ್ಧಿಸುವ ನಿಟ್ಟಿನಲ್ಲಿ ಸೇಲಂ ಟ್ರಸ್ಟ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ತಮಿಳಿನ ಖ್ಯಾತ ನಟಿ ಸ್ನೇಹ ವಿಜೇತರಿಗೆ ಬಹುಮಾನವನ್ನು ಹಂಚಿದರು. ಪ್ರಥಮ ಸ್ಥಾನಿಗೆ 10,000 ರೂ., ದ್ವಿತೀಯ ಸ್ಥಾನಿಗೆ 6,000 ಹಾಗೂ ತೃತೀಯ 4,000 ರೂಪಾಯಿ ಬಹುಮಾನಗಳನ್ನು ಹಂಚಲಾಯಿತು.
ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಈ ಸಂಭ್ರಮದ ಕಾರ್ಯಕ್ರಮ ಭಾನುವಾರ ಚಿತ್ರನಟಿಯ ಉಪಸ್ಥಿತಿಯಲ್ಲಿ ಕೊನೆಗೊಂಡಿತು.
ಈ ಕಾರ್ಯಕ್ರಮದಲ್ಲಿ ಲಿಂಗ ಬದಲಾವಣೆ ಮಾಡಿಕೊಂಡವರು, ಹುಟ್ಟಿನಿಂದಲೇ ನಪುಂಸಕರಾಗಿ ಗುರುತಿಸಿಕೊಂಡವರು ಹಾಗೂ ದೇಹ ಮತ್ತು ಮನಸ್ಸಿಗೆ ಸಂಬಂಧವೇ ಇರದ ಸ್ಥಿತಿಯನ್ನು ಅನುಭವಿಸುತ್ತಿರುವವರು ಪಾಲ್ಗೊಂಡಿದ್ದರು.