ಧಾರ್ಮಿಕ ಗುರುಗಳು ಇತ್ತೀಚಿನ ದಿನಗಳಲ್ಲಿ ತಮ್ಮ ಗೌರವ - ಘನತೆಯನ್ನು ಕಳೆದುಕೊಳ್ಳುತ್ತಿರುವುದು ಹೊಸತಲ್ಲ. ಆ ಸಾಲಿಗೆ ಇತ್ತೀಚಿನ ಸೇರ್ಪಡೆಯಿದು. ವೃದ್ಧ ಧಾರ್ಮಿಕ ಗುರುವೊಬ್ಬ ಐದರ ಹರೆಯದ ಬಾಲಕಿಯನ್ನು ಅತ್ಯಾಚಾರ ನಡೆಸಿ ಪೊಲೀಸರ ಬಂಧನಕ್ಕೊಳಗಾಗಿದ್ದಾನೆ.
ಉತ್ತರ ಪ್ರದೇಶದ ಮುಜಾಫರ ನಗರ ಜಿಲ್ಲೆಯ ಮಿನ್ರಾಂಪುರ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಬಂಧಿತ ಮುಸ್ಲಿಂ ಧರ್ಮಗುರುವನ್ನು 65ರ ಹರೆಯದ ಅಬ್ದುಲ್ ಕರೀಮ್ ಎಂದು ಗುರುತಿಸಲಾಗಿದೆ.
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಪುಟ್ಟ ಬಾಲಕಿಯ ತಂದೆ ನೌಷಾದ್ ಪೊಲೀಸರಿಗೆ ದೂರು ನೀಡಿದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ವೃದ್ಧ ಧರ್ಮಗುರುವಿನಿಂದ ಅತ್ಯಾಚಾರಕ್ಕೀಡಾದ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ಕ್ರಮ ಕೈಗೊಳ್ಳಲು ತಾವು ವೈದ್ಯಕೀಯ ವರದಿಗಳಿಗೆ ಕಾಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.