ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರೆಡ್ಡಿಗಳ ಗಣಿ ನಿಷೇಧ ವಿಸ್ತರಣೆ; ಸಮೀಕ್ಷಾ ವರದಿಗೆ ಸುಪ್ರೀಂ ಗಡುವು (Supreme Court | Reddys' mining | Andhra Pradesh | Karnataka)
Bookmark and Share Feedback Print
 
ಬಳ್ಳಾರಿ ರೆಡ್ಡಿಗಳು ಆಂಧ್ರಪ್ರದೇಶದಲ್ಲಿ ನಡೆಸುತ್ತಿರುವ ಗಣಿಗಾರಿಕೆಯ ಮೇಲಿನ ನಿಷೇಧವನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಸ್ತರಿಸಿದ್ದು, ಇವರ ಒಡೆತನದ ಎರಡು ಗಣಿಗಳಲ್ಲಿನ ಒತ್ತುವರಿ ಕುರಿತ ಅಂತಿಮ ವರದಿಯನ್ನು ಏಪ್ರಿಲ್ 22ರೊಳಗೆ ಸಲ್ಲಿಸಬೇಕು ಎಂದು ಸರ್ವೇ ಆಫ್ ಇಂಡಿಯಾಕ್ಕೂ ಆದೇಶ ನೀಡಿದೆ.

ಸುಪ್ರೀಂ ಕೋರ್ಟ್‌ನಿಂದ ನೇಮಕಗೊಂಡಿರುವ ಸರ್ವೇ ಆಫ್ ಇಂಡಿಯಾ ಶುಕ್ರವಾರ ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಿತ್ತು. ಈ ಸಂದರ್ಭದಲ್ಲಿ ಸಮೀಕ್ಷೆಯ ವಿವರಣೆ ನೀಡಿದ್ದ ಸಮಿತಿಯು, ಹೆಚ್ಚಿನ ಅತಿಕ್ರಮಣ ನಡೆದಿಲ್ಲ ಎಂದು ತಿಳಿಸಿತ್ತು.

ಈ ವರದಿಯ ಪ್ರಕಾರ ಕರ್ನಾಟಕದ ಸಚಿವರುಗಳಾದ ಜನಾರ್ದನ ರೆಡ್ಡಿ ಮತ್ತು ಕರುಣಾಕರ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿಯ ಆಧೀನದಲ್ಲಿರುವ ಒಂದು ಗಣಿಯ ವಿಸ್ತಾರ 68.5 ಹೆಕ್ಟೇರುಗಳು. ಇಲ್ಲಿ 66 ಹೆಕ್ಟೇರುಗಳಲ್ಲಿ ಮಾತ್ರ ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿತ್ತು. ಉಳಿದ 2.5 ಹೆಕ್ಟೇರ್ ಪ್ರದೇಶವನ್ನು ರಸ್ತೆಗಾಗಿ ಉಳಿಸಬೇಕಿತ್ತು. ಆದರೆ ಪೂರ್ತಿಯಾಗಿ ಅಂದರೆ 68.5 ಹೆಕ್ಟೇರ್ ಪ್ರದೇಶದಲ್ಲೂ ಗಣಿಗಾರಿಕೆ ನಡೆಸಲಾಗಿದೆ ಎಂದು ನ್ಯಾಯಾಲಯದಲ್ಲಿ ತನ್ನ ಮಧ್ಯಂತರ ವರದಿಯಲ್ಲಿ ಭಾರತೀಯ ಸರ್ವೇಕ್ಷಣಾ ಇಲಾಖೆ ತಿಳಿಸಿತ್ತು.

ಇಂದು ಪ್ರಕರಣದ ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯವು, ಏಪ್ರಿಲ್ 22ರೊಳಗೆ ಇದೇ ವ್ಯಾಪ್ತಿಗೆ ಸೇರಿದ ಇನ್ನೆರಡಗಣಿಗಾರಿಕೆಗಳ ಕುರಿತ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಭಾರತೀಯ ಸರ್ವೇಕ್ಷಣಾ ಇಲಾಖೆಗೆ ಸೂಚನೆ ನೀಡಿದೆ. ಅಲ್ಲದೆ ಅಲ್ಲಿಯ ತನಕ ಈ ಗಣಿಗಳಲ್ಲಿ ಗಣಿಗಾರಿಕೆ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಮುಂದಿನ ವಿಚಾರಣೆ ಏಪ್ರಿಲ್ 23ರಂದು ನಡೆಯಲಿದೆ.

ಕರ್ನಾಟಕ-ಆಂಧ್ರಪ್ರದೇಶ ಗಡಿಯಲ್ಲಿನ ಮಲಪ್ಪನಗುಡಿ ಗ್ರಾಮದಲ್ಲಿನ ಎರಡು ಗಣಿಗಳು ಅತಿಕ್ರಮಣಕ್ಕಿಳಿದಿದ್ದ ಪರಿಣಾಮ ಇಲ್ಲಿ ವಿವಾದ ತಲೆದೋರಿತ್ತು.

ರೆಡ್ಡಿ ಸಹೋದರರ ಮಾಲಕತ್ವದ ಓಬಳಾಪುರಂ ಮೈನಿಂಗ್ ಕಂಪನಿ ವಿರುದ್ಧ ಇಲ್ಲಿ ಹೋರಾಡುತ್ತಿರುವವರು ತುಮ್ಟಿ ಐರನ್ ಓರ್ ಕಂಪನಿ ಮಾಲಕ ಟಪಾಲ್ ಗಣೇಶ್. ಗಣೇಶ್ ಅವರ ಗಣಿ ಕರ್ನಾಟಕ ಗಡಿಯೊಳಗಿದ್ದರೆ, ರೆಡ್ಡಿಗಳ ಗಣಿ ಆಂಧ್ರಪ್ರದೇಶ ಗಡಿ ಭಾಗದಲ್ಲಿದೆ. ಎರಡೂ ಗಣಿಗಳು ಪರಸ್ಪರ ಅಂಟಿಕೊಂಡೇ ಇವೆ.

2009ರ ನವೆಂಬರ್ ತಿಂಗಳಲ್ಲಿ ಆಂಧ್ರಪ್ರದೇಶ ನೂತನ ಮುಖ್ಯಮಂತ್ರಿ ಕೆ. ರೋಸಯ್ಯ ಅವರು ರಾಜ್ಯದಲ್ಲಿ ನಡೆಸುತ್ತಿದ್ದ ಎಲ್ಲಾ ಗಣಿಗಾರಿಕೆಯ ಮೇಲೂ ನಿಷೇಧ ಹೇರಿದ್ದರು. ಇದನ್ನು ರೆಡ್ಡಿಗಳು ಆಂಧ್ರ ಹೈಕೋರ್ಟ್‌ನಲ್ಲಿ ಪ್ರಶ್ನಿಸಿ, ಗೆಲುವು ಪಡೆದುಕೊಂಡಿದ್ದರು.

ಬಳಿಕ ಆಂಧ್ರಪ್ರದೇಶ ರಾಜ್ಯ ಸರಕಾರವು ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿತ್ತು. ಪ್ರಕರಣವನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಗಣಿಗಾರಿಕೆ ಸ್ಥಗಿತಗೊಳಿಸಬೇಕೆಂದು ಆದೇಶ ನೀಡಿ, ಸಮಿತಿಯೊಂದನ್ನು ರಚಿಸಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿತ್ತು. ಅದರಂತೆ ಭಾರತೀಯ ಸರ್ವೇಕ್ಷಣಾ ಇಲಾಖೆಯು ಗಣಿಗಾರಿಕೆಯ ಸಮೀಕ್ಷೆ ನಡೆಸುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ