ಕೊಚ್ಚಿ ತಂಡದ ಮಾಲಕಿ ಹಾಗೂ ತನ್ನ ಗೆಳತಿ ಸುನಂದಾ ಪುಷ್ಕರ್‌ಗೆ ಐಪಿಎಲ್ ಫ್ರಾಂಚೈಸಿ ದೊರಕಿಸಿಕೊಡುವಲ್ಲಿ ಸಚಿವಾಲಯವನ್ನು ದುರುಪಯೋಗಪಡಿಸಿಕೊಂಡಿರುವ ವಿದೇಶಾಂಗ ಖಾತೆ ರಾಜ್ಯ ಸಚಿವ ಶಶಿ ತರೂರ್ ವಿರುದ್ಧ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿರುವ ಬಿಜೆಪಿ, ತಕ್ಷಣದಿಂದಲೇ ಅವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದೆ.
ಐಪಿಎಲ್ ವಿವಾದಕ್ಕೆ ಸಂಬಂಧಪಟ್ಟಂತೆ ಸ್ವತಃ ಕಾಂಗ್ರೆಸ್ ವಲಯದಲ್ಲೂ ತರೂರ್ ತೀವ್ರ ಆಕ್ಷೇಪಗಳನ್ನು ಎದುರಿಸುತ್ತಿದ್ದು, ಈ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಮುಖಂಡರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ತರೂರ್ ಸಚಿವಗಿರಿ ಪಡೆದುಕೊಂಡ ನಂತರ ಒಂದಲ್ಲ ಒಂದು ವಿವಾದಗಳಲ್ಲಿ ಸಿಲುಕಿರುವುದರಿಂದ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದರೂ ಅಚ್ಚರಿಯಿಲ್ಲ ಎಂದು ಹೇಳಲಾಗುತ್ತಿದೆ.
ವಜಾಗೊಳಿಸುವಂತೆ ಬಿಜೆಪಿ ಆಗ್ರಹ.. ಇಂದು ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್, ತನ್ನ ಸ್ನೇಹಿತೆಯ ತಂಡ ಬಿಡ್ ಗೆಲ್ಲುವ ಸಲುವಾಗಿ ತರೂರ್ ಸಚಿವಾಲಯವನ್ನು ದುರುಪಯೋಗಪಡಿಸಿಕೊಂಡಿರುವುದು ಸ್ಪಷ್ಟವಾಗಿದೆ. ಇಲ್ಲಿ ಸಾಕಷ್ಟು ಭ್ರಷ್ಟಾಚಾರಗಳು ನಡೆದಿರುವುದು ಕೂಡ ಸ್ಪಷ್ಟ. ಹಾಗಾಗಿ ಇದರ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಶಶಿ ತರೂರ್ ಅವರನ್ನು ಪ್ರಧಾನ ಮಂತ್ರಿಯವರು ತಕ್ಷಣವೇ ವಜಾಗೊಳಿಸಬೇಕು. ಅವರ ಸಂಪೂರ್ಣ ನಡವಳಿಕೆಯನ್ನು ಸಿಬಿಐ ತನಿಖೆಗೊಳಪಡಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.
ಐಪಿಎಲ್ ಕೊಚ್ಚಿ ತಂಡದಲ್ಲಿ ತಾನು ಹಣ ಹೂಡಿಕೆ ಮಾಡಿಲ್ಲ ಎಂದು ತರೂರ್ ಸ್ಪಷ್ಟಪಡಿಸಿದ್ದಾರೆ. ಆದರೆ ಐಪಿಎಲ್ ಆಯುಕ್ತ ಲಲಿತ್ ಮೋದಿ ಪ್ರಕಾರ ತರೂರ್ ಅವರ ಗೆಳತಿ ಸುನಂದಾ (ಸುನಂದಾರನ್ನು ತನ್ನ ಮೂರನೇ ಪತ್ನಿಯನ್ನಾಗಿ ತರೂರ್ ಸ್ವೀಕರಿಸಲಿದ್ದಾರೆ ಎಂದು ವರದಿಗಳು ಹೇಳಿವೆ) ಶೇ.19ರಷ್ಟು ಅಂದರೆ ಸುಮಾರು 70 ಕೋಟಿ ರೂಪಾಯಿಗಳಷ್ಟು ಹೂಡಿಕೆ ಮಾಡಿದ್ದಾರೆ. ಇವೆಲ್ಲವನ್ನೂ ನಿರಾಕರಿಸಿರುವ ತರೂರ್, ತಾನು ಈ ಸಂಬಂಧ ವಿವರಗಳನ್ನು ಬಹಿರಂಗಪಡಿಸದಂತೆ ಮೋದಿಯವರಿಗೆ ಕರೆ ಮಾಡಿದ್ದೇನೆ ಎಂಬ ವಿಚಾರವನ್ನೂ ಅಲ್ಲಗಳೆದಿದ್ದಾರೆ.
ರೆಂಡೆಜಾಸ್ ಸ್ಪೋರ್ಟ್ ವರ್ಲ್ಡ್‌ನಲ್ಲಿ ಶೇ.17ರಿಂದ 18ರಷ್ಟು ಶೇರುಗಳನ್ನು ಗೆಳತಿಗೆ ನೀಡುವಂತೆ ತರೂರ್ ತನ್ನ ಪ್ರಭಾವ ಬಳಸಿದ್ದಾರೆ. ಆಕೆ ತಂಡದಲ್ಲಿ ಪಾಲು ಹೊಂದಿರುವುದನ್ನು ಯಾರೂ ನಿರಾಕರಿಸುತ್ತಿಲ್ಲ. ಆಕೆಗೂ ಕೇರಳಕ್ಕೂ ಅಥವಾ ಕ್ರಿಕೆಟಿಗೂ ಯಾವುದೇ ತೆರನಾದ ಸಂಬಂಧವಿಲ್ಲ. ಸಂಬಂಧ ಇದ್ದರೆ ಅದು ತರೂರ್ ಅವರಿಗೆ ಮಾತ್ರ. ಹಾಗಾಗಿ ಅವರು ಈ ವಿಚಾರದಲ್ಲಿ ಭ್ರಷ್ಟಾಚಾರ ನಡೆಸಿರುವುದು ಸ್ಪಷ್ಟ ಎಂದು ಬಿಜೆಪಿ ಆರೋಪಿಸಿದೆ.
ವಜಾಗೊಳಿಸುವುದಿಲ್ಲ: ಕಾಂಗ್ರೆಸ್ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಕೃಷ್ಣ ಮತ್ತು ಕಾಂಗ್ರೆಸ್ ವಕ್ತಾರ ರಾಜೀವ್ ಶುಕ್ಲಾ ಅವರು ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ತರೂರ್ ವಿಚಾರಕ್ಕೆ ಸಂಬಂಧಪಟ್ಟಂತೆ ಚರ್ಚೆ ನಡೆಸಿದ್ದಾರೆ. ಯಾವುದೇ ಅಂತಿಮ ತೀರ್ಮಾನವನ್ನು ತೆಗೆದುಕೊಂಡಿಲ್ಲವಾದರೂ, ತಕ್ಷಣಕ್ಕೆ ವಜಾಗೊಳಿಸುವ ಯಾವುದೇ ಚಿಂತನೆಯನ್ನು ಪಕ್ಷ ನಡೆಸಿಲ್ಲ ಎಂದು ಹೇಳಲಾಗಿದೆ.
ಕಳೆದ ಹಲವು ಸಮಯದಿಂದ ಹಲವಾರು ವಿವಾದಗಳಿಂದಲೇ ಸುದ್ದಿಯಲ್ಲಿರುವ ತರೂರ್ ಅವರನ್ನು ಸಚಿವಾಲಯದಿಂದ ದೂರ ಇಡುವ ಕುರಿತು ಸೋನಿಯಾ ಒಲವು ತೋರಿಸಿದ್ದಾರೆ. ಆದರೆ ತಕ್ಷಣ ಯಾವುದೇ ಕ್ರಮವನ್ನು ತೆಗೆದುಕೊಳ್ಳದೇ ಇರುವ ನಿಲುವು ಅವರದ್ದು ಎಂದು ಮೂಲಗಳು ತಿಳಿಸಿವೆ.
ಲಲಿತ್ ಮೋದಿ ಡ್ರಗ್ ಕಳ್ಳಸಾಗಣಿಕೆದಾರ... ಹೀಗೆಂದು ಗಂಭೀರ ಆರೋಪ ಮಾಡಿರುವುದು ತರೂರ್ ಅವರ ಸಹಾಯಕ ಜೇಕಬ್ ಜೋಸೆಫ್ ಎಂಬುವವರು. ಟಿವಿ ಚಾನೆಲ್ ಒಂದರ ಜತೆ ಮಾತನಾಡುತ್ತಿದ್ದ ಅವರು, ಲಲಿತ್ ಮೋದಿಯವರು ಡ್ರಗ್ಸ್ ಕಳ್ಳ ಸಾಗಣಿಕೆಯಲ್ಲಿ ಸಿಕ್ಕಿಬಿದ್ದಿದ್ದರು ಎಂದು ಹೇಳಿದ್ದಾರೆ.
ಹಲ್ಲೆ ಮತ್ತು ಅಪಹರಣ ಪ್ರಕರಣ ಸೇರಿದಂತೆ 400 ಗ್ರಾಂ ಕೊಕೈನ್ ಸಾಗಾಟದಲ್ಲಿ ಮೋದಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಈ ಸಂಬಂಧ ಅವರು ಎರಡು ವರ್ಷಗಳ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು. ಅಂತಹ ವ್ಯಕ್ತಿ ದೇಶದಲ್ಲಿ ಕ್ರಿಕೆಟನ್ನು ಪಸರಿಸುವ ಮಹತ್ವದ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ ಎಂದು ಅವರು ಟೀಕಿಸಿದ್ದಾರೆ.