ಸತ್ಯಾಸತ್ಯತೆ ಪರಿಶೀಲಿಸಿ ಅಗತ್ಯ ಬಿದ್ದರೆ ತರೂರ್ ಮೇಲೆ ಕ್ರಮ: ಸಿಂಗ್
ವಾಷಿಂಗ್ಟನ್, ಬುಧವಾರ, 14 ಏಪ್ರಿಲ್ 2010( 18:26 IST )
PTI
ಕೊಚ್ಚಿ ಐಪಿಎಲ್ ತಂಡದ ಮಾಲೀಕತ್ವಕ್ಕೆ ಸಂಬಂಧಿಸಿ ಭುಗಿಲೆದ್ದಿರುವ ವಿವಾದದ ಹಿನ್ನೆಲೆಯಲ್ಲಿ ವಿದೇಶಾಂಗ ಖಾತೆ ರಾಜ್ಯಸಚಿವ ಶಶಿ ತರೂರ್ ಅವರನ್ನು ಸಂಪುಟದಿಂದ ಉಚ್ಚಾಟಿಸಬೇಕೆಂಬ ಒತ್ತಾಯ ಕೇಳಿಬರುತ್ತಿರುವಂತೆಯೇ ಸ್ಪಷ್ಟನೆ ನೀಡಿರುವ ಪ್ರಧಾನಿ ಮನಮೋಹನ್ ಸಿಂಗ್, ತಾನು ವದಂತಿಗಳಿಗೆ ಕಿವಿಗೊಡುವುದಿಲ್ಲ, ಎಲ್ಲವನ್ನೂ ಪರಿಶೀಲಿಸಿ ಅಗತ್ಯವಿದ್ದರೆ ತಕ್ಕ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಬುಧವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ, ತರೂರ್ ಮೇಲಿರುವ ಆಪಾದನೆಗಳ ಬಗ್ಗೆ ಕೇಳಿ ತಿಳಿದಿದ್ದೇನೆ. ಆದರೆ ಯಾವುದೇ ಸತ್ಯಾಂಶಗಳು ನನ್ನೆದುರಲ್ಲಿಲ್ಲ. ಹೀಗಾಗಿ ಎಲ್ಲವನ್ನೂ ಪರಿಶೀಲಿಸಿದ ಬಳಿಕವಷ್ಟೇ, ಅವಶ್ಯಕತೆಯಿದೆ ಎಂದಾದರೆ ತಕ್ಕ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದರು.
ದೇಶಕ್ಕೆ ಮರಳಿದ ಬಳಿಕ ಸತ್ಯಾಸತ್ಯತೆ ಪರಿಶೀಲಿಸುವೆ. ಪತ್ರಿಕೆಗಳ ವಿಭಿನ್ನ ಅಂಕಣಗಳನ್ನೆಲ್ಲಾ ನೋಡಿ ಅಥವಾ ಗಾಳಿಸುದ್ದಿ ಕೇಳಿ ಮುಂದುವರಿಯುವುದು ಸೂಕ್ತವಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಸಿಂಗ್ ನುಡಿದರು.
ಕೊಚ್ಚಿ ಐಪಿಎಲ್ ತಂಡದಲ್ಲಿ ಸುಮಾರು 70 ಕೋಟಿ ರೂಪಾಯಿ ಮೊತ್ತದ ಈಕ್ವಿಟಿ ಶೇರುಗಳನ್ನು ಸುನಂದಾ ಪುಷ್ಕರ್ ಎಂಬಾಕೆಗೆ ಉಚಿತವಾಗಿ ಕೊಡಿಸುವಲ್ಲಿ ವಿದೇಶಾಂಗ ಸಹಾಯಕ ಸಚಿವ ತರೂರ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಖ್ಯಸ್ಥ ಲಲಿತ್ ಮೋದಿ ಆಪಾದಿಸುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದರು. ಮೋದಿ ಅವರು ಐಪಿಎಲ್ ಬಿಡ್ಡುದಾರರ ವಿವರಗಳನ್ನು ಬಹಿರಂಗಪಡಿಸಿ ಕ್ರಿಕೆಟ್ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಮತ್ತು ತನ್ನ ಖಾಸಗಿ ವಿಷಯಗಳನ್ನು ಬಯಲುಗೊಳಿಸಿದ್ದಾರೆ ಎಂದು ತರೂರ್ ಆರೋಪಿಸಿದ್ದರು. ಸುನಂದಾ ಪುಷ್ಕರ್ ಅವರು ಬ್ಯೂಟೀಷಿಯನ್ ಕಮ್ ಸಮಾಜ ಸೇವಕಿಯಾಗಿದ್ದು, ಅವರನ್ನು ತರೂರ್ ತನ್ನ ಮೂರನೇ ಪತ್ನಿಯನ್ನಾಗಿ ಸ್ವೀಕರಿಸಲಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಇದು ವಿವಾದಕ್ಕೆ ಮೂಲ ಕಾರಣವಾಗಿತ್ತು.