ಗಂಡನಿಗೆ 86, ಹೆಂಡತಿಗೆ 81, ಮದುವೆಯಾಗಿ ಈಗಾಗಲೇ 66 ವರ್ಷಗಳು ಕಳೆದಿವೆ. ತಮ್ಮ ಮದುವೆ ಫೋಟೋಗಳಿದ್ದರೆ ನೋಡಿಕೊಂಡೋ, ಮೊಮ್ಮಕ್ಕಳನ್ನು ಮುದ್ದಾಡಿಕೊಂಡೋ ಇರಬೇಕಾದ ವಯಸ್ಸದು. ಆದರೆ ಕಳೆದ ಮೂರು ದಶಕಗಳಿಂದ ಒಬ್ಬರ ಮೇಲೊಬ್ಬರು ಆರೋಪ ಹೊರಿಸುತ್ತಾ ಪ್ರತ್ಯೇಕವಾಗಿ ಬದುಕುತ್ತಿದ್ದವರು ಈ ವಯಸ್ಸಲ್ಲೂ ವಿಚ್ಛೇದನ ಬಯಸುತ್ತಿದ್ದಾರೆ!
ಈ ವೃದ್ಧ ದಂಪತಿಯ ಹೆಸರು ರಮೇಶ್ ಮತ್ತು ಸುಧಾ (ಹೆಸರುಗಳನ್ನು ಬದಲಾಯಿಸಲಾಗಿದೆ) ಎಂದು. 1977ರಲ್ಲಿ ಪ್ರತ್ಯೇಕಗೊಂಡಿದ್ದ ಈ ದಂಪತಿಯನ್ನು ಜತೆಯಾಗಿ ವಾಸಿಸಬೇಕೆಂದು 2005ರಲ್ಲಿ ಕೌಟುಂಬಿಕ ನ್ಯಾಯಾಲಯವು ಆದೇಶ ನೀಡಿತ್ತು. ಆದರೆ ಇದನ್ನು ರಮೇಶ್ ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಪತ್ನಿ ಸುಧಾ ತನ್ನ ರಾಜಕೀಯವನ್ನೇ ಹಚ್ಚಿಕೊಂಡು ಕುಟುಂಬವನ್ನು ನಿರ್ಲಕ್ಷಿಸಿದ್ದರಿಂದ ನಾನು ಆಕೆಯ ಮೇಲಿನ ಮೋಹವನ್ನು ಕಳೆದುಕೊಂಡಿದ್ದೇನೆ ಎಂದು ರಮೇಶ್ ತನ್ನ ಅರ್ಜಿಯಲ್ಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಸುಧಾ ಅವರು ಮಹಾರಾಷ್ಟ್ರ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು ಎಂದು ರಮೇಶ್ ಅವರ ವಕೀಲ ಸಂಜೀವ್ ಕದಂ ತಿಳಿಸಿದ್ದಾರೆ. ಅವರ ಪ್ರಕಾರ ಸುಧಾ ಕೌಟುಂಬಿಕ ವಿಚಾರಗಳಲ್ಲಿ ಯಾವತ್ತೂ ಆಸಕ್ತಿಯನ್ನು ತೋರಿಸಿರಲಿಲ್ಲ ಮತ್ತು ಗಂಡನ ಬಗ್ಗೆ ಕಾಳಜಿ ವಹಿಸಿರಲಿಲ್ಲ.
ರಮೇಶ್ - ಸುಧಾ ದಂಪತಿ 1944ರ ಹೊತ್ತಿನಲ್ಲಿ ಪುಣೆಯಲ್ಲಿ ಮದುವೆಯಾದ ನಂತರ 1950ರಲ್ಲಿ ಮುಂಬೈಗೆ ಸ್ಥಳಾಂತರಗೊಂಡಿದ್ದರು. ಬಳಿಕ 1973ರಲ್ಲಿ ರಮೇಶ್ ತನ್ನ ಮನೆಯನ್ನು ಥಾಣೆಗೆ ಸ್ಥಳಾಂತರಗೊಳಿಸಲು ನಿರ್ಧರಿಸಿದರೂ, ಸುಧಾ ಮುಂಬೈ ತೊರೆಯಲು ನಿರಾಕರಿಸಿದ್ದರು. ತನ್ನ ರಾಜಕೀಯ ಜೀವನಕ್ಕೆ ಇದು ತೊಡಕಾಗುವುದರಿಂದ ತಾನು ಥಾಣೆಗೆ ಬರಲು ಸಿದ್ಧಳಿಲ್ಲ ಎಂದು ಸುಧಾ ಹೇಳಿದ್ದರು.
ಬಳಿಕ 1976ರಲ್ಲಿ ಇಬ್ಬರೂ ಪ್ರತ್ಯೇಕವಾಗಿ ವಾಸಿಸಲಾರಂಭಿಸಿದ್ದರು. ಸುಧಾ ಮುಂಬೈಯಲ್ಲೇ ಉಳಿದುಕೊಂಡಿದ್ದರೆ, ರಮೇಶ್ ಇಂಡ್ಗಾನ್‌ನಲ್ಲಿ ಕೋಳಿ ಸಾಕಣಿಕೆ ಉದ್ಯಮವನ್ನು ನಡೆಸುತ್ತಿದ್ದರು.
ಪ್ರತ್ಯೇಕವಾಗಿ ವಾಸಿಸುತ್ತಿದ್ದ 20 ವರ್ಷಗಳ ಬಳಿಕ ತನ್ನ ದಾಂಪತ್ಯ ಹಕ್ಕುಗಳನ್ನು ಮರು ಜಾರಿಗೊಳಿಸಬೇಕು ಎಂದು ಸುಧಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರೂ, ಅದನ್ನು ನ್ಯಾಯಾಲಯ ಮಾನ್ಯ ಮಾಡಿರಲಿಲ್ಲ. ಆದರೆ ವಿಚ್ಛೇದನ ಅರ್ಜಿ ಇನ್ನೂ ಥಾಣೆ ನ್ಯಾಯಾಲಯದಲ್ಲಿ ಬಾಕಿ ಉಳಿದಿದೆ. 2006ರಲ್ಲಿ ಕೌಟುಂಬಿಕ ನ್ಯಾಯಾಲಯವು ಜೀವನ ನಿರ್ವಹಣೆಗಾಗಿ ಸುಧಾರಿಗೆ ರಮೇಶ್ ಪ್ರತಿ ತಿಂಗಳು 3,500 ರೂಪಾಯಿಗಳನ್ನು ನೀಡಬೇಕೆಂದು ಆದೇಶ ನೀಡಿತ್ತು.
ಇವರ ವಿಚ್ಛೇದನ ಪ್ರಕರಣದ ಮುಂದಿನ ವಿಚಾರಣೆ ಇದೇ ತಿಂಗಳಿನಲ್ಲಿ ಬಾಂಬೆ ಹೈಕೋರ್ಟ್ ಹೈಕೋರ್ಟ್ ನಡೆಸಲಿದೆ.