ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದಲಿತ ರಾಜಕೀಯ; ಮಾಯಾವತಿ, ರಾಹುಲ್ ಗಾಂಧಿ ಮೇಲಾಟ (Dalit memorials | Mayawati | BR Ambedkar | Rahul Gandhi)
Bookmark and Share Feedback Print
 
ಅಂಬೇಡ್ಕರ್ ಜಯಂತಿಯಂದು ಉತ್ತರ ಪ್ರದೇಶದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಯುದ್ಧ ಆರಂಭವಾಗಿದೆ. ದಲಿತರ ಸ್ಮಾರಕ ನಿರ್ಮಾಣಗಳು ಮುಂದುವರಿಯುತ್ತವೆ ಎಂದು ಮುಖ್ಯಮಂತ್ರಿ ಮಾಯಾವತಿ ಘೋಷಿಸಿದ್ದರೆ, ಕೇಂದ್ರದ ನಿಧಿಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಅತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ದಲಿತರು ಮತ್ತು ಇತರ ಹಿಂದುಳಿದ ವರ್ಗಗಳ ಗಣ್ಯರ ಹೆಸರಿನಲ್ಲಿ ಸ್ಮಾರಕಗಳು ಮತ್ತು ಉದ್ಯಾನವನಗಳನ್ನು ನಾವು ನಿರ್ಮಿಸುತ್ತಿರುವುದು ಅವರಿಗೆ ಗೌರವ ನೀಡಲು. ಹಾಗಾಗಿ ಇಂತಹ ಕಾರ್ಯಕ್ರಮಗಳು ಮುಂದುವರಿಯುತ್ತವೆ ಎಂದು ಸಂವಿಧಾನ ಕರ್ತೃ ಡಾ. ಬಿ.ಆರ್. ಅಂಡೇಡ್ಕರ್ ಅವರ 119ನೇ ಜಯಂತಿಯಂದು ಮಾಯಾವತಿ ತಿಳಿಸಿದ್ದಾರೆ.

ಅದೇ ಹೊತ್ತಿಗೆ ಕಾಂಗ್ರೆಸ್ ಮೇಲೆ ಹರಿಹಾಯ್ದಿರುವ ಮುಖ್ಯಮಂತ್ರಿ, ದಲಿತರನ್ನು ಆ ಪಕ್ಷವು ಮೂಲೆಗುಂಪು ಮಾಡುತ್ತಿದೆ ಎಂದು ದೂರಿದ್ದಾರೆ.

ದಲಿತರು ಮತ್ತು ಇತರೆ ಹಿಂದುಳಿದ ವರ್ಗಗಳ ನಾಯಕರತ್ತ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ನಿರ್ಲಕ್ಷ್ಯ ವಹಿಸಿದ ಕಾರಣ ಅವರ ಹೆಸರಿನಲ್ಲಿ ಸ್ಮಾರಕಗಳು, ಪಾರ್ಕುಗಳು ಮತ್ತು ಮೂರ್ತಿಗಳನ್ನು ನಿರ್ಮಿಸುವ ಮೂಲಕ ಚರಿತ್ರಾರ್ಹ ನಿರ್ಧಾರಕ್ಕೆ ಬಿಎಸ್‌ಪಿ ಬರಬೇಕಾಯಿತು. ಈ ಹಾದಿಯಲ್ಲಿ ಎಷ್ಟೇ ಒತ್ತಡಗಳು ಬಂದರೂ, ಇಂತಹ ಯೋಜನೆಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷವು ದಲಿತ ವಿರೋಧಿ ನೀತಿಯನ್ನು ಮುಂದುವರಿಸುತ್ತಿದೆ ಎಂದು ಆರೋಪಿಸಿರುವ ಮಾಯಾವತಿ, ಕೇಂದ್ರದಲ್ಲಿ 50ರಷ್ಟು ವರ್ಷಗಳ ಕಾಲ ಅಧಿಕಾರ ನಡೆಸಿದರೂ ಭಾರತದ ಸಂವಿಧಾನದ ನಿರ್ಮಾತೃ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಬೇಕೆಂದು ಅದಕ್ಕೆ ಅನ್ನಿಸಿಲ್ಲ. ಉತ್ತರ ಪ್ರದೇಶವನ್ನು ಸರಿಸುಮಾರು 38 ವರ್ಷಗಳ ಕಾಲ ಆಳಿದರೂ ಇಲ್ಲೂ ಮಾಡಿದ್ದು ಅದನ್ನೇ. ದಲಿತರ ಏಳ್ಗೆಗಾಗಿ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ. ಇದು ದಲಿತರು ಮತ್ತು ಇತರ ಹಿಂದುಳಿದ ವರ್ಗಗಳ ಕಡೆಗಿನ ಕಾಂಗ್ರೆಸ್ ಪ್ರೀತಿಯನ್ನು ತೋರಿಸುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಕೇಂದ್ರದ ನಿಧಿ ದುರ್ಬಳಕೆ: ರಾಹುಲ್
ಅತ್ತ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ 'ಚೇತನಾ ಯಾತ್ರಾ' ಎಂಬ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಹುಲ್ ಗಾಂಧಿಯವರು ಉತ್ತರ ಪ್ರದೇಶ ಸರಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ಬಿಎಸ್‌ಪಿ ಸರಕಾರವು ದಲಿತರನ್ನು ನಿರ್ಲಕ್ಷಿಸುತ್ತಿದೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಮನ್ನಣೆ ನೀಡುತ್ತಿಲ್ಲ ಎಂದಿರುವ ರಾಹುಲ್, ಕೇಂದ್ರ ಸರಕಾರದ ಹಲವು ಯೋಜನೆಗಳ ನಿಧಿಯನ್ನು ರಾಜ್ಯವು ದುರುಪಯೋಗಪಡಿಸಿಕೊಳ್ಳುತ್ತಿದೆ ಮತ್ತು ಕೆಲವನ್ನು ತನಗೆ ಉಪಯೋಗಕ್ಕೆ ಬರುತ್ತಿಲ್ಲ ಎಂದು ವಾದಿಸುತ್ತಿದೆ. ಇಂತಹ ಸರಕಾರದಿಂದ ಯಾವ ರೀತಿಯ ಅಭಿವೃದ್ಧಿ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಬಂದೇಲ್‌ಖಂಡ್‌ಗಾಗಿ ಕೇಂದ್ರ ಸರಕಾರವು ಕೋಟಿಗಟ್ಟಲೆ ಮೊತ್ತದ ಯೋಜನೆಯನ್ನು ಪ್ರಕಟಿಸಿದೆ. ಆದರೆ ಇಲ್ಲಿನ ತಳಮಟ್ಟದ ಜನರಿಗೆ ಅದು ತಲುಪಿಯೇ ಇಲ್ಲ. ಯಾಕೆಂದರೆ ಹಣ ಬರುತ್ತಿರುವುದು ಲಕ್ನೋಗೆ, ಅದು ಇಲ್ಲಿನ ಜನರನ್ನು ತಲುಪುತ್ತಿಲ್ಲ. ಹಾಗಾದರೆ ಆ ಹಣ ಎಲ್ಲಿ ಹೋಗುತ್ತಿದೆ ಎಂದು ಮಾಯಾವತಿಯವರ ಹೆಸರನ್ನು ಪ್ರಸ್ತಾಪಿಸದೆ ರಾಹುಲ್ ಪ್ರಶ್ನೆ ಎಸೆದರು.

2012ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಿರುವ ರಾಜಕೀಯ ಪಕ್ಷಗಳು ಈಗಲೇ ವೇದಿಕೆಯನ್ನು ಸಿದ್ಧಪಡಿಸುತ್ತಿವೆ.
ಸಂಬಂಧಿತ ಮಾಹಿತಿ ಹುಡುಕಿ