ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚಿದಂಬರಂ ಟೀಕಿಸಿದ ದಿಗ್ವಿಜಯ್‌ಗೆ ಕಾಂಗ್ರೆಸ್ ತೀಕ್ಷ್ಣ ಎಚ್ಚರಿಕೆ (Congress | Digvijay Singh | P Chidambaram | Naxal)
Bookmark and Share Feedback Print
 
ನಕ್ಸಲ್ ಸಮಸ್ಯೆಯನ್ನು ಪರಿಹರಿಸುವಲ್ಲಿ ಗೃಹ ಸಚಿವ ಪಿ. ಚಿದಂಬರಂ ವಿಫಲವಾಗಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಟೀಕಿಸಿರುವುದಕ್ಕೆ ಕಾಂಗ್ರೆಸ್ ಅಸಮಾಧಾನಗೊಂಡಿದ್ದು, ಪಕ್ಷದೊಳಗಿನ ಸಮಸ್ಯೆಗಳನ್ನು ಬಹಿರಂಗವಾಗಿ ಚರ್ಚಿಸದಂತೆ ಫರ್ಮಾನು ಹೊರಡಿಸಿದೆ.

ಚಿದಂಬರಂ ಅವರನ್ನು ಹಠಮಾರಿ ಎಂದು ಪತ್ರಿಕೆಯೊಂದರ ಅಂಕಣದಲ್ಲಿ ಜರೆದಿದ್ದ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ, ನಕ್ಸಲ್ ಸಮಸ್ಯೆ ವಿಚಾರದಲ್ಲಿ ಅವರೊಂದಿಗೆ ತಾನು ಸಹಮತ ಹೊಂದಿಲ್ಲ ಎಂದಿದ್ದರು.

ಮಾವೋವಾದಿಗಳ ವಿಚಾರದಲ್ಲಿ ನಾನು ಚಿದಂಬರಂ ಅವರ ಕಾರ್ಯತಂತ್ರದೊಂದಿಗೆ ಭಿನ್ನಮತ ಹೊಂದಿದ್ದೇನೆ. ಅವರು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸ್ಥಳೀಯರನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಬುಡಕಟ್ಟು ಜನರ ಸಮಸ್ಯೆಗಳನ್ನು ಗಮನಕ್ಕೆ ತೆಗೆದುಕೊಳ್ಳದೆ ಎಲ್ಲವನ್ನೂ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಎಂದು ಅವರು ಪರಿಗಣಿಸುತ್ತಾರೆ. ಈ ವಿಚಾರವನ್ನು ಅವರ ಜತೆ ನಾನು ಚರ್ಚಿಸಲು ಮುಂದಾದಾಗ, ಇದು ನನ್ನ ಜವಾಬ್ದಾರಿಯಲ್ಲ ಎಂದು ಹೇಳುತ್ತಾರೆ ಎಂದು ಸಿಂಗ್ ಪತ್ರಿಕೆಗೆ ಬರೆದಿದ್ದರು.

ನನಗೆ ಚಿದಂಬರಂ ಅವರು 1985ರಿಂದಲೇ ಗೊತ್ತು. ಅವರು ನಿಜಕ್ಕೂ ಬುದ್ಧಿವಂತ, ಪ್ರಾಮಾಣಿಕ ವಾಕ್ಚಾತುರ್ಯ ಹೊಂದಿರುವ ಬದ್ಧತೆಯುಳ್ಳ ರಾಜಕಾರಣಿ. ಆದರೆ ಅವರ ಆಳಮನಸ್ಸಿನ ನಿರ್ಧಾರವನ್ನು ಯಾವತ್ತೂ ಬದಲಿಸುವುದಿಲ್ಲ. ಅವರ ಬೌದ್ಧಿಕ ಹಠಮಾರಿತನಕ್ಕೆ ನಾನು ಹಲವಾರು ಸಲ ಬಲಿಯಾಗಿದ್ದೇನೆ. ಆದರೂ ನಾವು ಈಗಲೂ ಅತ್ಯುತ್ತಮ ಗೆಳೆಯರಾಗಿ ಮುಂದುವರಿಯುತ್ತಿದ್ದೇವೆ ಎಂದು ಸಿಂಗ್ ಬರೆದಿದ್ದಾರೆ.

ಇದು ಕಾಂಗ್ರೆಸ್ ವಲಯದಲ್ಲಿ ಭಾರೀ ಕೋಲಾಹಲ ಸೃಷ್ಟಿಸುತ್ತಿರುವಂತೆಯೇ ಪಕ್ಷದ ವಕ್ತಾರ ಜನಾರ್ದನ ದ್ವಿವೇದಿಯವರು ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ಒಂದು ಪ್ರಜಾಪ್ರಭುತ್ವವನ್ನು ಹೊಂದಿರುವ ಪಕ್ಷ. ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ಹೊಂದಿದ್ದಾರೆ. ಆದರೆ ಇಂತಹ ಅಭಿಮತಗಳು ಪಕ್ಷದ ವೇದಿಕೆಯಲ್ಲೇ ಹೊರಗೆ ಬರಬೇಕು ಎಂದು ಅವರು ದಿಗ್ವಿಜಯ್ ಸಿಂಗ್ ಅವರನ್ನು ಉದ್ದೇಶಿಸಿ ತಿಳಿಸಿದ್ದಾರೆ.

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಚಿದಂಬರಂ ಮತ್ತು ಇತರ ಹಿರಿಯ ನಾಯಕರ ಜತೆ ತುರ್ತು ಸಭೆ ನಡೆಸಿದ ನಂತರ ಪ್ರತಿಕ್ರಿಯೆ ನೀಡಿರುವ ದ್ವಿವೇದಿ, ದಿಗ್ವಿಜಯ್ ಸಿಂಗ್ ಅವರು ನೀಡಿರುವ ಹೇಳಿಕೆ ಅವರ ವೈಯಕ್ತಿಕ ಹೇಳಿಕೆಯಾಗಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ