ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದಾಂತೇವಾಡ, ತರೂರ್, ಬೆಲೆಯೇರಿಕೆ; ಸಂಸತ್‌ನಲ್ಲಿ ಭಾರೀ ಗದ್ದಲ (Parliament | Dantewada | P Chidambaram | Shashi Tharoor)
Bookmark and Share Feedback Print
 
ಐಪಿಎಲ್‌- ಶಶಿ ತರೂರ್ ವಿವಾದ, ಗಗನಕ್ಕೇರುತ್ತಿರುವ ಅಗತ್ಯ ವಸ್ತುಗಳ ಬೆಲೆ ಮತ್ತು ನಕ್ಸಲರಿಂದ ದಾಂತೇವಾಡದಲ್ಲಿ 76 ಭದ್ರತಾ ಸಿಬ್ಬಂದಿಗಳ ಹತ್ಯೆ -- ಈ ಮೂರು ವಿಚಾರಗಳನ್ನು ಮುಂದಿಟ್ಟ ವಿರೋಧಪಕ್ಷಗಳು ಪಕ್ಷಭೇದ ಮರೆತು ಯುಪಿಎ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ತೀವ್ರ ಕೋಲಾಹಲದ ಹಿನ್ನೆಲೆಯಲ್ಲಿ ಸಂಸತ್ತಿನ ಉಭಯ ಸದನಗಳ ಕಲಾಪಗಳನ್ನು ಆಗಾಗ ಮುಂದೂಡಲಾಗುತ್ತಿದೆ.

ದಂತೇವಾಡ ನಕ್ಸಲರ ನರಮೇಧದ ಕುರಿತು ಚರ್ಚೆಗೆ ಅವಕಾಶ ಕಲ್ಪಿಸಬೇಕು ಮತ್ತು ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಶಶಿ ತರೂರ್ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿ ಗದ್ದಲ ಎಬ್ಬಿಸುತ್ತಿವೆ. ಇದೇ ಹಿನ್ನೆಲೆಯಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯ ಕಲಾಪಗಳನ್ನು ಅಪರಾಹ್ನ ಎರಡು ಗಂಟೆಯವರೆಗೆ ಇದೀಗ ಮುಂದೂಡಲಾಗಿದೆ.

ಅಪರಾಹ್ನ ಒಂದು ಗಂಟೆಗೆ ಗೃಹ ಸಚಿವರು ತನ್ನ ಹೇಳಿಕೆಯನ್ನು ನೀಡಲಿದ್ದಾರೆ ಎಂದು ಸ್ಪೀಕರ್ ಮೀರಾ ಕುಮಾರ್ ಹೇಳಿದ ನಂತರ ಸಂಸದೀಯ ವ್ಯವಹಾರಗಳ ಸಚಿವ ಪಿ.ಕೆ. ಬನ್ಸಾಲ್, ಪ್ರಶ್ನೋತ್ತರ ಅವಧಿಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರೂ ವಿರೋಧ ಪಕ್ಷಗಳು ಒಪ್ಪಿಗೆ ಸೂಚಿಸಲಿಲ್ಲ.

ದಾಂತೇವಾಡದಲ್ಲಿ ನಕ್ಸಲ್ ನರಮೇಧ ಪ್ರಕರಣವನ್ನು ರಾಜಕೀಕರಣಗೊಳಿಸಬೇಡಿ ಎಂದು ಕಾಂಗ್ರೆಸ್ ಸತತ ಮನವಿ ಮಾಡಿದರೂ ಕಿವಿಗೊಡದ ಪ್ರತಿಪಕ್ಷಗಳಿಗೆ ಆರ್‌ಜೆಡಿ, ಸಮಾಜವಾದಿ ಪಕ್ಷ, ಜೆಡಿಯು ಮುಂತಾದ ಪಕ್ಷಗಳಿಗೆ ಬೆಂಬಲ ನೀಡಿದ್ದು, ಚರ್ಚೆಗೆ ಅವಕಾಶ ನೀಡಬೇಕೆಂದು ಬೇಡಿಕೆ ಮುಂದಿಡುತ್ತಿವೆ.

ಶಶಿ ತರೂರ್ ವಿಚಾರದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಿಗೆ ಎಡಪಕ್ಷಗಳು ಕೂಡ ಬೆಂಬಲ ನೀಡಿದ್ದು, ತರೂರ್ ರಾಜೀನಾಮೆ ಬೇಡಿಕೆಯನ್ನು ಮುಂದಿಟ್ಟಿವೆ. ಐಪಿಎಲ್ ಕೊಚ್ಚಿ ತಂಡದ ವಿಚಾರದಲ್ಲಿ ಅವರು ಭ್ರಷ್ಟಾಚಾರ ನಡೆಸಿರುವುದು ಸ್ಪಷ್ಟವಾಗಿದ್ದು, ಸಚಿವರು ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿಯುತ್ತಿವೆ. ಇದು ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿದೆ.

ಇದೇ ಹಿನ್ನೆಲೆಯಲ್ಲಿ ತರೂರ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಕರೆಸಿಕೊಂಡಿದ್ದು, ಅಪರಾಹ್ನ ಮಾತುಕತೆ ನಡೆಸಲಿದೆ. ಮೂಲಗಳ ಪ್ರಕಾರ ಕಾಂಗ್ರೆಸ್ ತರೂರ್ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲಿದೆ ಎಂದು ಹೇಳಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ