ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್‌ಗೆ ಲಘು ಹೃದಯಾಘಾತ
(Sadhvi Pragya Singh Thakur | 2008 Malegaon blast | heart attack | Nashik)
2008ರ ಮಾಲೆಗಾಂವ್ ಸ್ಫೋಟದ ಪ್ರಧಾನ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಕಳೆದ ರಾತ್ರಿ ಲಘು ಹೃದಯಾಘಾತವಾಗಿದ್ದು, ಪ್ರಸಕ್ತ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ನಿನ್ನೆ ರಾತ್ರಿ 11 ಗಂಟೆಗೆ ಹೊಟ್ಟೆನೋವು ಮತ್ತು ಇತರೆ ದೈಹಿಕ ಅನಾರೋಗ್ಯ ತೋಡಿಕೊಂಡ ಬಳಿಕ 37ರ ಹರೆಯ ಠಾಕೂರ್ ಅವರನ್ನು ನಾಸಿಕ್ ಸಿವಿಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಅದಕ್ಕೂ ಮೊದಲು ಅವರು ಆಯುರ್ವೇದ ಸೇವಾ ಸಂಘ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ನಾಸಿಕ್ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ಅವರನ್ನು ದಾಖಲಿಸಿದ ನಂತರ ಹೃದ್ರೋಗ ತಜ್ಞ ಡಾ. ಅವಿನಾಶ್ ಧರ್ಮಾಧಿಕಾರಿ ಎಂಬ ವೈದ್ಯರು ತಪಾಸಣೆ ನಡೆಸಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆಂದು ಮೂಲಗಳು ಹೇಳಿವೆ.
ಸಾಧ್ವಿಯವರ ವಕೀಲ ಗಣೇಶ್ ಸೋವಾನಿಯವರ ಪ್ರಕಾರ, ಕಳೆದ ಕೆಲವು ದಿನಗಳಿಂದ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾಧ್ವಿಯವರನ್ನು ಎರಡು ದಿನಗಳ ಹಿಂದಷ್ಟೇ ಆಯುರ್ವೇದ ಆಸ್ಪತ್ರೆಗೆ ದಾಖಲಿಸಲಾಗಿತ್ತು; ನಿನ್ನೆ ರಾತ್ರಿ ಸುಮಾರು 9.30ರ ಹೊತ್ತಿಗೆ ಎದೆ ನೋವು ಕಾಣಿಸಿಕೊಂಡ ಸ್ವಲ್ವವೇ ಹೊತ್ತಿನಲ್ಲಿ ಅವರು ಪ್ರಜ್ಞೆ ಕಳೆದುಕೊಂಡರು. ಅವರನ್ನು ಪರೀಕ್ಷೆಗೊಳಪಡಿಸಿದಾಗ ಲಘು ಹೃದಯಾಘಾತವಾಗಿರುವುದು ಬೆಳಕಿಗೆ ಬಂದಿತ್ತು. ನಂತರ ಅವರನ್ನು ನಾಸಿಕ್ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ತಿಳಿಸಿದ್ದಾರೆ.
ಅವರಿಗಿನ್ನೂ ಪ್ರಜ್ಞೆ ಬಂದಿಲ್ಲ, ಆದರೆ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆಂದು ವಕೀಲ ಗಣೇಶ್ ವಿವರಣೆ ನೀಡಿದ್ದಾರೆ.
ಠಾಕೂರ್, ಮೇಜರ್ ಪ್ರಸಾದ್ ಪುರೋಹಿತ್ ಸೇರಿದಂತೆ 11 ಮಾಲೆಗಾಂವ್ ಸ್ಫೋಟ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಠಾಕೂರ್ ಹೊರತುಪಡಿಸಿ ಉಳಿದೆಲ್ಲರೂ ನಾಸಿಕ್ ಕೇಂದ್ರೀಯ ಕಾರಾಗೃಹದಲ್ಲಿದ್ದಾರೆ.