ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾರತದ ಬಹುನಿರೀಕ್ಷಿತ 'ಜಿಎಸ್‌ಎಲ್‌ವಿ-ಡಿ3' ಉಡಾವಣೆ ವಿಫಲ (ISRO | Sriharikota space centre | cryogenic engine | GSLV-D3)
Bookmark and Share Feedback Print
 
ವಿಶ್ವವನ್ನೇ ನಿಬ್ಬೆರಗಾಗಿಸಬಹುದಾಗಿದ್ದ ಬಹುನಿರೀಕ್ಷಿತ ಸ್ವದೇಶಿ ನಿರ್ಮಿತ ಕ್ರಯೋಜನಿಕ್ ತಂತ್ರಜ್ಞಾನವನ್ನು ಬಳಸಿಕೊಂಡು ಉಡಾವಣೆ ಮಾಡಲಾಗಿರುವ 'ಜಿ ಸ್ಯಾಟ್-4' ಉಪಗ್ರಹ ನಿಗದಿತ ಕಕ್ಷೆಯನ್ನು ತಲುಪುವಲ್ಲಿ ವಿಫಲವಾಗಿದ್ದು, ಇಸ್ರೋ ತೀವ್ರ ನಿರಾಸೆ ಅನುಭವಿಸಿದೆ.

ಇಂದು ಸಂಜೆ 4.27ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾದ ಕ್ರಯೋಜನಿಕ್ ತಂತ್ರಜ್ಞಾನವನ್ನು ಹೊಂದಿದ ಜಿಎಸ್‌ಎಲ್‌ವಿ-ಡಿ3 ಉಪಗ್ರಹ ಉಡಾವಣೆ ಮೊದಲ ಹಂತದಲ್ಲಿ ಯಶಸ್ವಿಯಾದರೂ, ನಂತರ ನಿಗದಿತ ಪಥದಲ್ಲಿ ಸಾಗಲಿಲ್ಲ ಎಂದು ಮೂಲಗಳು ಹೇಳಿವೆ.
GSLV-D3
PR

ಉಪಗ್ರಹ ಎರಡನೇ ಘಟ್ಟದವರೆಗೂ ಸರಿಯಾಗಿಯೇ ಸಾಗಿತ್ತು. ಆದರೆ ನಂತರದ ಹಂತದಲ್ಲಿ ಎರಡು ಚಿಕ್ಕ ಇಂಜಿನ್‌ಗಳು ಚಾಲನೆಗೊಳ್ಳದ ಕಾರಣ ಉಪಗ್ರಹ ತನ್ನ ಪಥವನ್ನು ಬದಲಿಸಿತು. ಬಾಹ್ಯಾಕಾಶ ಕೇಂದ್ರದಿಂದ ಉಡ್ಡಯನಗೊಂಡ 500 ಸೆಕುಂಡುಗಳ ನಂತರ ಉಪಗ್ರಹದಿಂದ ಸಂಕೇತಗಳು ಕೂಡ ಸ್ಥಗಿತಗೊಂಡವು. ಆ ಬಳಿಕ ಉಪಗ್ರಹ ವಾಹಕದ ವೇಗ, ನಿಲುವು ಸೇರಿದಂತೆ ಯಾವುದೇ ಮಾಹಿತಿಗಳನ್ನು ಪಡೆಯಲು ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ.

ಮರಳಿ ಯತ್ನಿಸುತ್ತೇವೆ..
ಹೀಗೆಂದು ಹೇಳಿರುವುದು ಇಸ್ರೋ ಅಧ್ಯಕ್ಷ ಕೆ. ರಾಧಾಕೃಷ್ಣನ್. ನಿಗದಿತ ಗುರಿಯನ್ನು ಸಾಧಿಸಲು ಸಾಧ್ಯವಾಗಿಲ್ಲ ಎಂಬುದನ್ನು ಒಪ್ಪಿಕೊಂಡಿರುವ ಅವರು, ಈ ಹಿಂದೆಯೂ ನಾವು ಇಂತಹ ಪರಿಸ್ಥಿತಿಗಳನ್ನು ಎದುರಿಸಿದ್ದೇವೆ. ಖಂಡಿತಾ ನಾವು ಒಂದು ವರ್ಷದೊಳಗೆ ಇದು ನಮ್ಮಿಂದ ಸಾಧ್ಯ ಎಂದು ತೋರಿಸಿಕೊಡುತ್ತೇವೆ ಎಂದು ಹೇಳಿದ್ದಾರೆ.

ಎರಡು ಚಿಕ್ಕ ಯಂತ್ರಗಳು ಚಾಲನೆಗೊಳ್ಳದ ಪರಿಣಾಮ ನಾವು ಉಪಗ್ರಹದ ನಿಯಂತ್ರಣವನ್ನು ಕಳೆದುಕೊಂಡೆವು ಎಂದು ಅವರು ತಿಳಿಸಿದ್ದಾರೆ.

ಇದು 18 ವರ್ಷಗಳ ಯತ್ನ....
ನಮಗೆ ಕ್ರಯೋಜನಿಕ್ ತಂತ್ರಜ್ಞಾನವನ್ನು ನೀಡಿ ಎಂದು 90ರ ದಶಕದಲ್ಲಿ ಭಾರತ ಅಮೆರಿಕಾ ಮತ್ತು ರಷ್ಯಾ ದೇಶಗಳಲ್ಲಿ ಗೋಗರೆದಿತ್ತು. ಆದರೆ ಆ ಸಂದರ್ಭದಲ್ಲಿ ಒಪ್ಪಂದವೊಂದನ್ನು ಮುಂದಿಟ್ಟಿದ್ದ ಈ ದೇಶಗಳು ತಂತ್ರಜ್ಞಾನ ಹಸ್ತಾಂತರಕ್ಕೆ ನಿರಾಕರಿಸಿದ್ದವು.

ರಷ್ಯಾ ಮತ್ತು ಅಮೆರಿಕಾ ದೇಶಗಳು ಈ ತಂತ್ರಜ್ಞಾನವನ್ನು ಬೇರೆ ಯಾವುದೇ ದೇಶಗಳಿಗೆ ನೀಡದಂತೆ ಒಪ್ಪಂದ ಮಾಡಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ನಿರಾಸೆಗೊಂಡಿದ್ದ ಭಾರತ ಧೃತಿಗೆಡದೆ 1999ರಿಂದ ಸ್ವಂತ ಕ್ರಯೋಜೆನಿಕ್ ತಂತ್ರಜ್ಞಾನ ಸಿದ್ಧಪಡಿಸಲು ಪಣತೊಟ್ಟಿತ್ತು. ಅದರ ಫಲವೇ ಇಂದು ನಭಕ್ಕೆ ನೆಗೆದ ಕ್ರಯೋಜನಿಕ್ ತಂತ್ರಜ್ಞಾನದ ಉಪಗ್ರಹ ವಾಹಕ ಜೆಎಸ್‌ಎಲ್‌ವಿ-ಡಿ3.

ಇಂದು ಇಸ್ರೋ ನಿರೀಕ್ಷಿತ ಯಶಸ್ಸು ಗಳಿಸಲು ಸಾಧ್ಯವಾಗದೇ ಇದ್ದರೂ, ಇಂತಹ ಸಾಧನೆ ಮಾಡುವ ಮೂಲಕ ಭಾರತ ವಿಶ್ವದ ಗಮನ ಸೆಳೆದಿರುವುದಂತೂ ಸತ್ಯ. ಒಂದು ವರ್ಷದೊಳಗೆ ಯಶಸ್ವಿ ಉಡ್ಡಯನ ನಡೆಸುವ ಮೂಲಕ ಪ್ರಸಕ್ತ ಕ್ರಯೋಜನಿಕ್ ತಂತ್ರಜ್ಞಾನ ಹೊಂದಿರುವ ಐದು ದೇಶಗಳಾದ ಅಮೆರಿಕಾ, ರಷ್ಯಾ, ಯೂರೋಪ್, ಜಪಾನ್ ಮತ್ತು ಚೀನಾಗಳನ್ನು ಸರಿಗಟ್ಟುವ ಭರವಸೆಯನ್ನು ಇಸ್ರೋ ನೀಡಿದ್ದು, ನಿರಾಸೆಗೊಳ್ಳಬೇಕಾಗಿಲ್ಲ ಎಂಬ ಸಂದೇಶವನ್ನು ಜನತೆಗೆ ರವಾನಿಸಿದೆ.

1,000 ಕೋಟಿ ವೆಚ್ಚದ ಯೋಜನೆಯಿದು...
ಸ್ವದೇಶಿ ಕ್ರಯೋಜನಿಕ್ ತಂತ್ರಜ್ಞಾನವನ್ನು ಹೊಂದಿದ ಜಿಎಸ್‌ಎಲ್‌ವಿ-ಡಿ3 ಉಪಗ್ರಹಕ್ಕೆ 1,000 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿತ್ತು.

ಸುಮಾರು 416 ಟನ್ ತೂಕವಿರುವ ಈ ಉಪಗ್ರಹ ಪ್ರತಿ ಸೆಕುಂಡಿಗೆ 10.2 ಕಿಲೋ ಮೀಟರ್ ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಕ್ರಯೋಜನಿಕೆ ಇಂಜಿನ್‌ಗೆ 335 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಯೋಜನೆಯ ಹಿಂದೆ ದುಡಿದ ವಿಜ್ಞಾನಿಗಳು ಬರೋಬ್ಬರಿ ಎರಡು ಸಾವಿರ ಮಂದಿ.
ಸಂಬಂಧಿತ ಮಾಹಿತಿ ಹುಡುಕಿ