ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಾನಿಯಾ ಆರತಕ್ಷತೆ ಮುಗೀತು; ಹನಿಮೂನ್ ಮಾಲ್ಡೀವ್ಸ್‌ನಲ್ಲಂತೆ!
(Sania-Shoaib reception | Sania Mirza | Shoaib Malik | Marriage)
ಸಾನಿಯಾ ಮಿರ್ಜಾ ತನ್ನ ಮದುವೆಯ ಪ್ರಯುಕ್ತ ನಿನ್ನೆ ಹೈದರಾಬಾದ್‌ನ ತಾಜ್ ಕೃಷ್ಣಾ ಪಂಚತಾರಾ ಹೊಟೇಲಿನಲ್ಲಿ ಏರ್ಪಡಿಸಿದ್ದ ಆರತಕ್ಷತೆಗೆ ಗಣ್ಯಾತಿಗಣ್ಯರು ಬಂದು ಶೋಯಿಬ್ ಮಲಿಕ್ ದಂಪತಿಯನ್ನು ಹರಸಿದ್ದು, ಶೀಘ್ರದಲ್ಲೇ ಇವರು ಮಧುಚಂದ್ರಕ್ಕಾಗಿ ಮಾಲ್ಡೀವ್ಸ್‌ಗೆ ತೆರಳಲಿದ್ದಾರೆ ಎಂದು ಮೂಲಗಳು ಹೇಳಿವೆ.
ನಿನ್ನೆ ರಾತ್ರಿ ನಡೆದ ಭವ್ಯ ಸಮಾರಂಭದಲ್ಲಿ ತೆಲುಗು ದೇಶಂ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಚಿತ್ರನಟರಾದ ನಾಗಾರ್ಜುನ, ಅವರ ಪತ್ನಿ ಅಮಲಾ, ಜಗಪತಿ ಬಾಬು, ವೆಂಕಟೇಶ್, ವಿಷ್ಣುವರ್ದನ್, ಡೇವಿಸ್ ಕಪ್ ಮಾಜಿ ಆಟಗಾರರಾದ ಎಸ್.ಪಿ. ಮಿಶ್ರಾ, ವಾಸುದೇವ ರೆಡ್ಡಿ ಸೇರಿದಂತೆ ಸುಮಾರು 600ರಷ್ಟು ಅತಿ ಗಣ್ಯರು ತಾಜ್ ಕೃಷ್ಣಾಕ್ಕೆ ಆಗಮಿಸಿ ದಂಪತಿಯನ್ನು ಹರಸಿದ್ದಾರೆ.
ಈ ಸಂದರ್ಭದಲ್ಲಿ ಭಾರೀ ಭದ್ರತೆಯನ್ನು ಹೊಟೇಲ್ ಹೊರಗಡೆ ಏರ್ಪಡಿಸಲಾಗಿತ್ತು. ಅತಿಥಿಗಳನ್ನು ಕೂಡ ಕೂಲಂಕಷ ತಪಾಸಣೆ ನಡೆಸಿಯೇ ಹೊಟೇಲ್ ಒಳಗಡೆ ಬಿಡಲಾಗುತ್ತಿತ್ತು. ಸಂಶಯಿತರನ್ನು ಬೇರೆಡೆಗೆ ಕರೆದು ವಿಚಾರಣೆ ನಡೆಸಲಾಗುತ್ತಿತ್ತು ಎಂದು ಮೂಲಗಳು ಹೇಳಿವೆ.
ಮುಂದಿನ ವಾರ ಪಾಕಿಸ್ತಾನಕ್ಕೆ... ಸಾನಿಯಾ-ಶೋಯಿಬ್ ದಂಪತಿ ಮುಂದಿನ ವಾರ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆಗಳಿವೆ. ಆದರೆ ಇದು ಶೋಯಿಬ್ ಪಾಸ್‌ಪೋರ್ಟ್ ಸಿಕ್ಕ ಮೇಲಷ್ಟೇ ನಿರ್ಧಾರವಾಗಬಹುದು.
ಲಾಹೋರ್‌ನಲ್ಲಿ ಶೋಯಿಬ್ ತನ್ನ ಆಪ್ತರಿಗಾಗಿ ಆರತಕ್ಷತೆಯೊಂದನ್ನು ಏರ್ಪಡಸಲಿದ್ದು, ಅದರಲ್ಲಿ ಸಾನಿಯಾ ತನ್ನ ಗಂಡನೊಂದಿಗೆ ಭಾಗವಹಿಸಲಿದ್ದಾರೆ. ಇದಕ್ಕೆ ಸಾನಿಯಾ ಕುಟುಂಬದ ಸದಸ್ಯರು ಕೂಡ ತೆರಳುವ ಸಾಧ್ಯತೆಗಳಿವೆ.
ಇದರ ಬಳಿಕ ಸಾನಿಯಾ ಮತ್ತು ಶೋಯಿಬ್ ಹನಿಮೂನ್‌ಗೆ ತೆರಳಲಿದ್ದಾರೆ. ಹನಿಮೂನ್‌ಗೆ ಎಲ್ಲಿಗೆ ಹೋಗುವುದು ಎಂಬ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ, ಆದರೂ ಮಾಲ್ದೀವ್ಸ್‌ಗೆ ತೆರಳುವ ಸಾಧ್ಯತೆಗಳು ಹೆಚ್ಚಿವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಹಲವು ಪೂರ್ವ ನಿರ್ಧರಿತ ಕಾರ್ಯಕ್ರಮಗಳಿಂದಾಗಿ ಇದೇ ಮಾಸಾಂತ್ಯದಲ್ಲಿ ಸಾನಿಯಾ ಭಾರತಕ್ಕೆ ಮರಳಲಿದ್ದಾರೆ. ಬಳಿಕ ಅವರು ತನ್ನ ಟೆನಿಸ್ ಪ್ರವಾಸವನ್ನು ಮುಂದುವರಿಸಲಿದ್ದಾರೆ.
ನಾನು ಭಾರತಕ್ಕೆ ಬಂದ ನಂತರದ ಕೆಲವು ದಿನಗಳ ಕಹಿ ಅನುಭವಗಳ ಬಳಿಕದ ಇತ್ತೀಚಿನ ಕೆಲವು ದಿನಗಳು ಸಂತೋಷವಾಗಿ ಪರಿಣಮಿಸಿವೆ. ಈಗ ನಾನು ಪತ್ನಿ ಸಾನಿಯಾಳನ್ನು ಪಾಕಿಸ್ತಾನದಲ್ಲಿ ನಡೆಯಲಿರುವ ಆರತಕ್ಷತೆಯಲ್ಲಿ ನನ್ನ ಆತ್ಮೀಯರಿಗೆ ಪರಿಚಯಿಸಲು ಕಾತರದಿಂದ ಕಾಯುತ್ತಿದ್ದೇನೆ. ನಾವು ಪಾಕಿಸ್ತಾನಕ್ಕೆ ಒಂದು ಬಾರಿ ಹೋಗಿ ಬಂದ ನಂತರ ಸಾನಿಯಾ ಕಾರ್ಯಕ್ರಮಗಳೆಲ್ಲವೂ ಸುಸೂತ್ರವಾಗಲಿದೆ. ಆಕೆ ಯಾವತ್ತೂ ಭಾರತಕ್ಕಾಗಿ ಆಡುತ್ತಾಳೆ ಎಂದು ಶೋಯಿಬ್ ಪ್ರತಿಕ್ರಿಯೆ ನೀಡಿದ್ದಾರೆ.
ಸಾನಿಯಾ ಪೋಸ್ಟರ್‌ಗಳನ್ನು ಹರಿದರು... ಸಾನಿಯಾ ಜಾಹೀರಾತುಗಳನ್ನು ಹೊಂದಿದ್ದ ಪೋಸ್ಟರುಗಳನ್ನು ಇದೀಗ ಅಲ್ಲಲ್ಲಿ ಹರಿದು ಹಾಕಲಾಗುತ್ತಿದೆ. ಬೆಂಗಳೂರಿನಲ್ಲೂ ಇಂತಹ ಹಲವು ಪ್ರಕರಣಗಳು ನಡೆದಿರುವುದು ವರದಿಯಾಗಿವೆ.
ಸಾನಿಯಾರನ್ನು ಜಾಹೀರಾತುಗಳಲ್ಲಿ ಬಳಸಿಕೊಂಡಿದ್ದ ಪೆಟ್ರೋಲ್ ಪಂಪುಗಳ ಕಂಪನಿಯೊಂದು ಇದೀಗ ಆಕೆ ಪಾಕಿಸ್ತಾನಿ ಆಟಗಾರನನ್ನು ಮದುವೆಯಾಗಿರುವುದರಿಂದ ಅಸಮಾಧಾನಗೊಂಡಿದ್ದು, ಪೋಸ್ಟರುಗಳನ್ನು ಹರಿದು ಹಾಕಲಾರಂಭಿಸಿದೆ.
ಇಲ್ಲಿ ಅಕೆಯ ಮುಖವನ್ನು ತೋರಿಸುವ ಜಾಹೀರಾತುಗಳಿರುವ ಎಲ್ಲಾ ಭಿತ್ತಿಪತ್ರಗಳನ್ನು ತೆಗೆದಿದ್ದೇವೆ. ಆಕೆ ಪಾಕಿಸ್ತಾನೀಯನನ್ನು ಮದುವೆಯಾಗಿರುವುದು ನಮಗೆ ಸರಿಯೆಂದು ಅನ್ನಿಸುತ್ತಿಲ್ಲ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೆಟ್ರೋಲ್ ಪಂಪ್ ಸಿಬ್ಬಂದಿಯೊಬ್ಬ ತಿಳಿಸಿದ್ದಾನೆ.
ಮತ್ತೊಂದು ಪೆಟ್ರೋಲ್ ಪಂಪ್ ಹೊಂದಿರುವ ಉದ್ಯಮಿಯೊಬ್ಬರು ರಿಸ್ಕ್ ಬೇಡ ಎಂಬ ಕಾರಣಕ್ಕೆ ಸಾನಿಯಾ ಭಿತ್ತಿಪತ್ರಗಳನ್ನು ತೆಗಿಸಿದ್ದಾರೆ.
ನಾವು ಸುರಕ್ಷಿತವಾಗಿರಬೇಕೆಂಬ ಕಾರಣಕ್ಕೆ ಈ ನಿಲುವಿಗೆ ಬಂದಿದ್ದೇವೆ. ದುಷ್ಕರ್ಮಿಗಳು ಕಲ್ಲೆಸೆತ ಮುಂತಾದ ಕುಕೃತ್ಯಗಳನ್ನು ನಡೆಸುವ ಸಾಧ್ಯತೆಗಳಿರುವುದರಿಂದ ನಾವು ಆ ಪರಿಸ್ಥಿತಿಯನ್ನು ತಪ್ಪಿಸಲು ನಿರ್ಧರಿಸಿದೆವು. ಪೋಸ್ಟರುಗಳನ್ನು ಕಿತ್ತಿರುವುದರಿಂದ ನಾವು ಸುರಕ್ಷಿತರು ಎಂದುಕೊಂಡಿದ್ದೇವೆ. ಅಪಾಯವನ್ನು ಆಹ್ವಾನಿಸಲು ನಾವು ಸಿದ್ಧರಿಲ್ಲ. ಈಗಾಗಲೇ ಹಲವು ಗ್ರಾಹಕರು ಸಾನಿಯಾ ಭಿತ್ತಿ ಪತ್ರಗಳನ್ನು ತೆಗೆಯುವಂತೆ ನಮಗೆ ಸಲಹೆ ನೀಡಿದ್ದರು ಎಂದಿದ್ದಾರೆ.