ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಾನೇನೂ ತಪ್ಪು ಮಾಡಿಲ್ಲ: ಲೋಕಸಭೆಯಲ್ಲಿ ತರೂರ್ ಸಮರ್ಥನೆ (IPL | Kerala franchise | Shashi Tharoor | Lok Sabha)
Bookmark and Share Feedback Print
 
ವಿದೇಶಾಂಗ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ಸ್ಥಾನದ ರಾಜೀನಾಮೆಗಾಗಿ ಆಗ್ರಹಿಸುತ್ತಿರುವ ವಿರೋಧಪಕ್ಷಗಳ ನಿರಂತರ ಬೇಡಿಕೆಯನ್ನು ಲೋಕಸಭೆಯಲ್ಲಿ ತಳ್ಳಿ ಹಾಕಿರುವ ಶಶಿ ತರೂರ್, ನನ್ನ ವಿರುದ್ಧ ಮಾಡಲಾಗಿರುವ ಐಪಿಎಲ್ ಕುರಿತ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ, ಇವು ದುರುದ್ದೇಶಪೂರಿತವಾದುದು ಎಂದು ಸ್ಪಷ್ಟಪಡಿಸಿದ್ದಾರೆ.

ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳು ನಿನ್ನೆ ದಾಂತೇವಾಡ ನಕ್ಸಲರ ನರಮೇಧಕ್ಕೆ ಬಲಿಯಾಗಿದ್ದರೆ, ಇಂದು ತರೂರ್ ರಾಜೀನಾಮೆಗೆ ಮೀಸಲಾಗಿತ್ತು. ತರೂರ್ ಭಾಷಣಕ್ಕೆ ಅವಕಾಶ ನೀಡುವುದಿಲ್ಲ ಎಂಬ ವಿರೋಧ ಪಕ್ಷಗಳ ತೀವ್ರ ಗದ್ದಲದ ನಡುವೆಯೇ ಸ್ಪಷ್ಟನೆ ನೀಡಲು ತರೂರ್ ಯತ್ನಿಸಿದರೂ, ನಂತರ ಅವರ ಹೇಳಿಕೆಯ ಪ್ರತಿಯನ್ನು ಸ್ಪೀಕರ್ ಅವರಿಗೆ ಒಪ್ಪಿಸಿದರು. ಕೋಲಾಹಲ ಹಿನ್ನೆಲೆಯಲ್ಲಿ ಲೋಕಸಭೆ ಕಲಾಪವನ್ನು ಅಪರಾಹ್ನಕ್ಕೆ ಮುಂದೂಡಲಾಗಿದ್ದರೆ, ರಾಜ್ಯಸಭೆ ಕಲಾಪನ್ನು ಸೋಮವಾರದವರೆಗೆ ಮುಂದೂಡಲಾಗಿದೆ.

ಕೊಚ್ಚಿ ತಂಡವನ್ನು ನಿಷ್ಕ್ರಿಯಗೊಳಿಸುವುದು ಮತ್ತು ಐಪಿಎಲ್ ಫ್ರಾಂಚೈಸಿಯನ್ನು ಕೇರಳದಿಂದ ಬೇರೆಡೆಗೆ ವರ್ಗಾಯಿಸಲು ನನ್ನ ಸುತ್ತ ಭಾರೀ ವಿವಾದವನ್ನು ಸೃಷ್ಟಿಸಲಾಯಿತು. ವಿವಾದದ ಹಿಂದಿನ ನಿಜವಾದ ಕಾರಣ ಇದು ಎಂದು ತನ್ನನ್ನು ವಜಾಗೊಳಿಸಬೇಕೆಂದು ಲೋಕಸಭೆಯಲ್ಲಿ ಆಗ್ರಹಿಸುತ್ತಿರುವ ವಿರೋಧ ಪಕ್ಷಗಳಿಗೆ ತರೂರ್ ಉತ್ತರಿಸಿದರು.

ತನ್ನ ವಿರುದ್ಧ ಮಾಡಲಾಗಿರುವ ಎಲ್ಲಾ ಆರೋಪಗಳನ್ನೂ ತಳ್ಳಿ ಹಾಕಿರುವ ಅವರು, 'ನನ್ನ ಸಚಿವ ಸ್ಥಾನವನ್ನು ಐಪಿಎಲ್‌ಗಾಗಿ ನಾನು ದುರುಪಯೋಗಪಡಿಸಿಕೊಂಡಿಲ್ಲ. ಈ ಪ್ರಕರಣಕ್ಕೂ ನನ್ನ ಸಚಿವಾಲಯಕ್ಕೂ ಯಾವುದೇ ಸಂಬಂಧವಿಲ್ಲ. ಬಿಡ್ ಪ್ರಕ್ರಿಯೆಯಲ್ಲಿ ಕೊಚ್ಚಿ ತಂಡ ಗೆಲ್ಲುವಲ್ಲಿ ನಾನು ಯಾವುದೇ ರೀತಿಯ ಪ್ರಭಾವವನ್ನು ಬೀರಿಲ್ಲ' ಎಂದಿದ್ದಾರೆ.

ಕೊಚ್ಚಿ ಐಪಿಎಲ್ ತಂಡವನ್ನು ಪ್ರೋತ್ಸಾಹಿಸುವುದಷ್ಟೇ ಇಲ್ಲಿ ನನ್ನ ಪಾತ್ರವಿದೆ. ಇದರಲ್ಲಿನ ಯಾವುದೇ ಸದಸ್ಯರ ಪರವಾಗಿ ನಾನು ಯಾವುದೇ ನಿಲುವನ್ನು ಹೊಂದಿಲ್ಲ. ಕೇರಳ ತಂಡಕ್ಕೆ ಸಹಾಯ ಮಾಡಿರುವುದಕ್ಕೆ ನನಗೆ ಹೆಮ್ಮೆಯಿದೆ ಎಂದು ತಿಳಿಸಿದ್ದಾರೆ.

ಸುನಂದಾ ಪುಷ್ಕರ್ ಎಂಬ ಕಾಶ್ಮೀರಿ ಮಹಿಳೆಯೊಂದಿಗೆ ರಸಮಯ ಸಂಬಂಧವನ್ನು ತರೂರ್ ಹೊಂದಿದ್ದಾರೆ ಎಂದು ಹೇಳಲಾಗುತ್ತಿದ್ದು, ಅದೇ ಕಾರಣದಿಂದಾಗಿ ಐಪಿಎಲ್ ಕೊಚ್ಚಿ ತಂಡದಲ್ಲಿ ತರೂರ್ ಪರವಾಗಿ ಆಕೆಗೆ 70 ಕೋಟಿ ರೂಪಾಯಿ ಮೊತ್ತದ ಪಾಲನ್ನು ನೀಡಲಾಗಿತ್ತು. ಇದರಲ್ಲಿ ತರೂರ್ ಅವರು ಸಾಕಷ್ಟು ಶ್ರಮವಹಿಸಿದ್ದರು. ಅದಕ್ಕಾಗಿ ಅವರು ಸಚಿವಾಲಯವನ್ನೂ ದುರುಪಯೋಗಪಡಿಸಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು.

ಅದೇ ಹೊತ್ತಿಗೆ ತನ್ನ ಗೆಳತಿ ಸುನಂದಾ ಅವರ ಹೆಸರನ್ನು ಹೇಳಿಕೆಯಲ್ಲಿ ಎಲ್ಲೂ ಬಾರದಂತೆ ನೋಡಿಕೊಂಡಿರುವ ತರೂರ್, ಆಕೆ ಕೂಡ ಯಾವುದೇ ತಪ್ಪು ಮಾಡಿಲ್ಲ ಎಂಬಂತೆ ಬಿಂಬಿಸಲು ಹೇಳಿಕೆಯಲ್ಲಿ ಯತ್ನಿಸಿದ್ದಾರೆ.

ಮಹಿಳೆ ಎಂಬ ಕಾರಣಕ್ಕೆ ಯಶಸ್ವಿ ಉದ್ಯಮಿಯೊಬ್ಬರನ್ನು ಈ ರೀತಿ ನಡೆಸಿಕೊಳ್ಳುತ್ತಿರುವುದು ಉಚಿತವಲ್ಲ ಎಂದು ಅವರು ತನ್ನ ಹೇಳಿಕೆಯಲ್ಲಿ ಯಾರನ್ನೂ ಉಲ್ಲೇಖಿಸದೆ ತಿಳಿಸಿದ್ದಾರೆ.

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರನ್ನು ಈಗಾಗಲೇ ಭೇಟಿ ಮಾಡಿರುವ ತರೂರ್, ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಮೂಲಗಳ ಪ್ರಕಾರ ಪ್ರಧಾನಿ ಸ್ವದೇಶಕ್ಕೆ ವಾಪಸ್ ಬಂದ ನಂತರ ಕೆಲವೇ ದಿನಗಳಲ್ಲಿ ತರೂರ್ ಅವರ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ