ಐಸ್‌ಲೆಂಡ್ ಜ್ವಾಲಾಮುಖಿ ಸ್ಫೋಟದಿಂದಾಗಿ ಆಕಾಶದಲ್ಲಿ ಭಾರೀ ಪ್ರಮಾಣದ ಬೂದಿ ಆವರಿಸಿರುವುದರಿಂದ ಉತ್ತರ ಯೂರೋಪ್ ವ್ಯಾಪ್ತಿಯಲ್ಲಿನ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದ್ದು ಬ್ರಿಟನ್, ಅಮೆರಿಕಾ, ಕೆನಡಾ ಮತ್ತು ಇತರ ಕೆಲವು ಐರೋಪ್ಯ ರಾಷ್ಟ್ರಗಳನ್ನು ಸಂಪರ್ಕಿಸುವ ಹಲವು ವಿಮಾನಗಳನ್ನು ಭಾರತ ರದ್ದುಪಡಿಸಿದೆ.
ವಾಯು ಪ್ರದೇಶ ಸಂಪೂರ್ಣವಾಗಿ ದಟ್ಟವಾದ ಮೋಡಗಳಿಂದ ಆವೃತ್ತವಾಗಿರುವ ಕಾರಣ ಈ ಪ್ರದೇಶದ ಅಂತಾರಾಷ್ಟ್ರೀಯ ಸೇವೆಗಳನ್ನು ರದ್ದುಪಡಿಸಲಾಗಿದೆ ಎಂದು ಏರ್ ಇಂಡಿಯಾ, ಜೆಟ್ ಏರ್‌ವೇಸ್ ಮತ್ತು ಕಿಂಗ್‌ಫಿಶರ್ ಏರ್‌ಲೈನ್ಸ್‌ಗಳ ವಕ್ತಾರರು ತಿಳಿಸಿದ್ದಾರೆ.
ಪಶ್ಚಿಮದತ್ತ ತೆರಳುವ ಏರ್ ಇಂಡಿಯಾ ವಿಮಾನಗಳ ಸೇವೆಯನ್ನು ಇಂದು ಅಪರಾಹ್ನದಿಂದ ಮುಂದಿನ 48 ಗಂಟೆಗಳ ಅವಧಿಗೆ ಅಮಾನತು ಮಾಡಲಾಗಿದೆ ಎಂದು ರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ಲಂಡನ್‌ನ ಹೀತ್ರೂ ವಿಮಾನ ನಿಲ್ದಾಣ, ಇದರ ಯೂರೋಪಿಯನ್ ಹಬ್ ಬ್ರೂಸೆಲ್ಸ್, ನ್ಯೂಯಾರ್ಕ್‌ನ ಜೆಎಫ್‌ಕೆ ವಿಮಾನ ನಿಲ್ದಾಣ, ನೆವಾರ್ಕ್ ಮತ್ತು ಟೊರೊಂಟೊಗಳಲ್ಲಿನ ವಿಮಾನ ನಿಲ್ದಾಣ, ಫ್ರಾಂಕ್‌ಫರ್ಟ್, ಪ್ಯಾರಿಸ್‌ಗಳಲ್ಲಿನ ವಿಮಾನ ನಿಲ್ದಾಣಗಳನ್ನು ಸದ್ಯಕ್ಕೆ ಮುಚ್ಚಲಾಗಿದ್ದು, ಎಲ್ಲಾ ವೈಮಾನಿಕ ಸೇವೆಗಳನ್ನು ರದ್ದು ಪಡಿಸಲಾಗಿದೆ. ಹಾಗಾಗಿ ಭಾರತದ ಯಾವುದೇ ವೈಮಾನಿಕ ಸಂಸ್ಥೆಗಳು ಪಾಶ್ಚಾತ್ಯ ಪ್ರದೇಶಗಳಿಗೆ ಹಾರಾಟ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಐಸ್‌ಲೆಂಡ್‌ನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಪ್ರಮಾಣದಲ್ಲಿ ಜ್ವಾಲಾಮುಖಿಗಳು ಸ್ಫೋಟಗೊಳ್ಳುತ್ತಿವೆ. ಇದರ ಪರಿಣಾಮ ಆಕಾಶದಲ್ಲಿ ಬೃಹತ್ ಪ್ರಮಾಣದಲ್ಲಿ ಮೋಡದ ರೀತಿಯಲ್ಲಿ ಹೊಗೆ ತುಂಬಿಕೊಂಡಿದೆ. ಈ ಪರಿಸ್ಥಿತಿಯಲ್ಲಿ ವಿಮಾನಗಳ ಹಾರಾಟ ತೀರಾ ಅಪಾಯಕಾರಿಯಾಗಿರುವುದರಿಂದ ವೈಮಾನಿಕ ಸೇವೆಗಳನ್ನು ರದ್ದು ಮಾಡಲಾಗಿದೆ.
ಇದೇ ಕಾರಣದಿಂದ ಅಮೆರಿಕಾದಿಂದ ಬ್ರೆಜಿಲ್‌ಗೆ ತೆರಳಿದ್ದ ಪ್ರಧಾನಿ ಮನಮೋಹನ್ ಸಿಂಗ್ ಅವರು ದಕ್ಷಿಣ ಆಫ್ರಿಕಾಕ್ಕೆ ತೆರಳಿ, ಜೋಹಾನ್ಸ್‌ಬರ್ಗ್ ಮೂಲಕ ಭಾರತಕ್ಕೆ ಮರಳಲಿದ್ದಾರೆ. ಈ ಹಿಂದಿನ ನಿಗದಿಯಂತೆ ಅವರು ಜರ್ಮನಿಯ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದ ಮೂಲಕ ಪ್ರಯಾಣ ಬೆಳೆಸಬೇಕಿತ್ತು.
ಅಂತಾರಾಷ್ಟ್ರೀಯ ಪ್ರಯಾಣಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಮನೆಯಿಂದ ಹೊರಡುವ ಮೊದಲು ಪ್ರಯಾಣಿಕರು ವಿಮಾನ ನಿಲ್ದಾಣಗಳಿಗೆ ದೂರವಾಣಿ ಕರೆ ಮಾಡಿ ವಿಮಾನ ಸೇವೆಗಳನ್ನು ಖಚಿತಪಡಿಸಿಕೊಳ್ಳುವಂತೆ ವಿಮಾನ ಯಾನ ಸಂಸ್ಥೆಗಳು ಮನವಿ ಮಾಡಿವೆ.