ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕ್ರಿಮಿನಲ್ ಸಹೋದರರನ್ನು ಕೊನೆಗೂ ವಜಾಗೊಳಿಸಿದ ಮಾಯಾ (BSP | Bahujan Samaj Party | Mukhtar Ansari | Mayawati)
Bookmark and Share Feedback Print
 
ಕೊಲೆ ಮತ್ತು ಅಪಹರಣ ಸೇರಿದಂತೆ 30ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಪ್ರಸಕ್ತ ಜೈಲಿನಲ್ಲಿರುವ ಶಾಸಕ ಮುಖ್ತಾರ್ ಅನ್ಸಾರಿ ಮತ್ತು ಅವರ ಸಹೋದರ ಸಂಸದ ಅಫ್ಜಲ್ ಅನ್ಸಾರಿಯವರನ್ನು ಕ್ರಿಮಿನಲ್ ಕೃತ್ಯದಲ್ಲಿ ಮುಂದುವರಿದಿದ್ದಾರೆ ಎಂದು ಆರೋಪಿಸಿ ಬಹುಜನ ಸಮಾಜ ಪಕ್ಷದಿಂದ ಉಚ್ಛಾಟನೆಗೊಳಿಸಲಾಗಿದೆ.

2007ರಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಅನ್ಸಾರಿ ಸಹೋದರರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಹಾಗೂ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿಯವರು ತಕ್ಷಣದಿಂದಲೇ ಜಾರಿಗೆ ಬರುವಂತೆ ವಜಾಗೊಳಿಸಿದ್ದಾರೆ ಎಂದು ಪಕ್ಷದ ವಕ್ತಾರರು ಲಕ್ನೋದಲ್ಲಿ ತಿಳಿಸಿದ್ದಾರೆ.

ಮುಂಬರುವ ದಿನಗಳಲ್ಲಿ ತಾವು ಕ್ರಿಮಿನಲ್ ಕೃತ್ಯಗಳಿಂದ ದೂರ ಉಳಿಯುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅನ್ಸಾರಿ ಸಹೋದರರನ್ನು ಸೇರಿಸಿಕೊಳ್ಳಲಾಗಿತ್ತು. ಆದರೆ ಮುಖ್ತಾರ್ ಇದ್ದ ಘಾಜಿಪುರ್ ಜೈಲಿನ ಮೇಲೆ ಇತ್ತೀಚೆಗೆ ದಾಳಿಯಿಂದಾಗಿ ಅವರು ಕ್ರಿಮಿನಲ್ ಕೃತ್ಯಗಳನ್ನು ಕೈ ಬಿಟ್ಟಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಬಿಎಸ್‌ಪಿ ತಿಳಿಸಿದೆ.

ಇದರ ಜತೆಗೆ ಅನ್ಸಾರಿ ಮತ್ತೊಬ್ಬ ಸಹೋದರ ಸಿಬ್ಗಾತುಲ್ಲಾಹ್ ಅನ್ಸಾರಿಯವರ ಬೆಂಬಲವನ್ನೂ ಪಡೆದುಕೊಳ್ಳದೇ ಇರಲು ಪಕ್ಷ ನಿರ್ಧರಿಸಿದೆ. ಅವರು ಘಾಜಿಪುರದ ಮೊಹಮ್ಮದಾಬಾದ್ ವಿಧಾನಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದಿಂದ ಆಯ್ಕೆಯಾಗಿದ್ದರೂ, ವಿಧಾನಸಭೆಯಲ್ಲಿ ಬಿಎಸ್‌ಪಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ.

ಬಿಜೆಪಿ ಶಾಸಕ ಕೃಷ್ಣಾನಂದ ರೈ ಹತ್ಯೆ ಪ್ರಕರಣ ಸೇರಿದಂತೆ ಹತ್ತಾರು ಕೊಲೆ ಪ್ರಕರಣಗಳನ್ನು ಎದುರಿಸುತ್ತಿರುವ ಮುಖ್ತಾರ್ ಅವರನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿಯಿಂದ ಬಿಎಸ್‌ಪಿ ಟಿಕೆಟ್ ನೀಡಿದ್ದರೂ ಗೆಲ್ಲಿಸಲು ವಿಫಲವಾಗಿತ್ತು.

ಅನ್ಸಾರಿ ಸಹೋದರರನ್ನು ಕಾನೂನು ರೀತಿಯಲ್ಲಿ ಸರಿಯಾದ ಪಥದಲ್ಲಿ ಸಾಗಿಸುವ ನಿಟ್ಟಿನಲ್ಲಿ ಪಕ್ಷವು ಯತ್ನಿಸಿತ್ತು. 2007ರಲ್ಲಿ ಉತ್ತರ ಪ್ರದೇಶದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಈ ಯತ್ನವನ್ನು ನಡೆಸಲಾಗಿತ್ತು. ಆದರೆ ಅದು ಸಾಧ್ಯವಾಗದೇ ಇರುವ ಕಾರಣ ಅವರನ್ನು ಕೈಬಿಡಲು ನಿರ್ಧರಿಸಲಾಗಿದೆ ಎಂದು ಪಕ್ಷ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ