ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಾನು ಪಾಕ್ ಸೊಸೆಯಲ್ಲ, ಶೋಯಿಬ್ ಪತ್ನಿ ಮಾತ್ರ: ಸಾನಿಯಾ (Shoaib Malik | Sania Mirza | Pakistan | India)
Bookmark and Share Feedback Print
 
PR
ನಾನು ಪಾಕಿಸ್ತಾನೀಯನನ್ನು ಮದುವೆಯಾಗಿಲ್ಲ, ನಾನು ಮದುವೆಯಾಗಿರುವುದು ಓರ್ವ ವ್ಯಕ್ತಿಯನ್ನು. ಹಾಗಾಗಿ ನಾನು ಪಾಕಿಸ್ತಾನದ ಸೊಸೆಯಲ್ಲ, ಶೋಯಿಬ್ ಮಲಿಕ್ ಪತ್ನಿ ಮಾತ್ರ ಎಂದು ಮದುವೆಯ ನಂತರ ನೀಡಿರುವ ಮೊದಲ ಸಂದರ್ಶನದಲ್ಲಿ ಸಾನಿಯಾ ಮಿರ್ಜಾ ತಿಳಿಸಿದ್ದಾರೆ.

ಸಾಂಪ್ರದಾಯಿಕ ಎದುರಾಳಿ ರಾಷ್ಟ್ರದ ಆಟಗಾರನನ್ನು ಮದುವೆಯಾಗುವ ತೀರ್ಮಾನ, ಶೋಯಿಬ್ ಮೊದಲ ಪತ್ನಿ ಆಯೇಶಾ ಸಿದ್ಧಿಕಿ ಪ್ರಕರಣಗಳನ್ನು ದಾಟಿ ಮದುವೆ, ಮೆಹೆಂದಿ, ಸಂಗೀತ್ ಮತ್ತು ಆರತಕ್ಷತೆ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಪಾಕಿಸ್ತಾನಕ್ಕೆ ಹೊರಡಲು ಸಿದ್ಧತೆ ನಡೆಸುತ್ತಿರುವ ಸಾನಿಯಾ - ಶೋಯಿಬ್ ದಂಪತಿ ಶುಕ್ರವಾರ ಮಾಧ್ಯಮ ಮಂದಿಗೆ ಮುಖಾಮುಖಿಯಾದರು.

ತಮ್ಮ ಮದುವೆ ಬಗ್ಗೆ ಪಾಕಿಸ್ತಾನದಲ್ಲಿ ಗರಿಗೆದರಿರಬಹುದಾದ ಸಂತೋಷ ಮತ್ತು ಪಾಕಿಸ್ತಾನಿ ಸೊಸೆಗೆ ಲಾಹೋರ್‌ನಲ್ಲಿ ಏರ್ಪಾಡಾಗುತ್ತಿರುವ ಅದ್ಧೂರಿ ಆರತಕ್ಷತೆ ಬಗ್ಗೆ ಏನನ್ನಿಸುತ್ತಿದೆ ಎಂಬ ಪ್ರಶ್ನೆಗೆ, 'ನಾನು ಪಾಕಿಸ್ತಾನದ ಸೊಸೆಯಲ್ಲ, ಕೇವಲ ಶೋಯಿಬ್ ಪತ್ನಿ ಮಾತ್ರ. ನಾನು ಪಾಕಿಸ್ತಾನೀಯನನ್ನು ಮದುವೆಯಾಗಿಲ್ಲ, ನಾನೊಬ್ಬ ವ್ಯಕ್ತಿಯನ್ನಷ್ಟೇ ಮದುವೆಯಾಗಿದ್ದೇನೆ. ಜನ ರಾಜಕೀಯ ಹೇಳಿಕೆಗಳನ್ನು ನೀಡುತ್ತಾರೆ, ಆದರೆ ಮಾನವೀಯತೆಯನ್ನು ಮರೆತು ಬಿಡುತ್ತಾರೆ' ಎಂದು ತುಸು ಖಾರವಾಗಿಯೇ ಉತ್ತರಿಸಿದರು.

ಭಾರತಕ್ಕೆ ಬೆಂಬಲ, ಶೋಯಿಬ್ ಸೆಂಚುರಿ ಮಾಡ್ಬೇಕು...
ಭಾರತ -ಪಾಕಿಸ್ತಾನದ ನಡುವೆ ಪಂದ್ಯ ನಡೆಯುತ್ತಿರುವಾಗ ಯಾರನ್ನು ಬೆಂಬಲಿಸುತ್ತೀರಿ ಎಂಬ ಪ್ರಶ್ನೆಗೆ ನೀಡಿದ ಉತ್ತರವಿದು. ಖಂಡಿತಾ ಭಾರತವನ್ನೇ ಬೆಂಬಲಿಸುತ್ತೇನೆ, ಆದರೆ ಶೋಯಿಬ್ ಶತಕ ಬಾರಿಸುವುದನ್ನು ನಾನು ಬಯಸುತ್ತೇನೆ ಎಂದಿದ್ದಾರೆ.

ಭಾರತವನ್ನು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪ್ರತಿನಿಧಿಸುತ್ತೇನೆ, ಮುಂದಿನ ಎಲ್ಲಾ ಕ್ರೀಡಾಕೂಟಗಳಲ್ಲೂ ನಾನು ಭಾರತವನ್ನೇ ಪ್ರತಿನಿಧಿಸುತ್ತೇನೆ. ನಾವಿಬ್ಬರೂ ನಮ್ಮ-ನಮ್ಮ ದೇಶಗಳನ್ನು ಪ್ರತಿನಿಧಿಸುವುದನ್ನು ಮುಂದುವರಿಸುತ್ತೇವೆ. ಒಬ್ಬ ಭಾರತೀಯಳಾಗಿ ನನಗೆ ಮುಂದಿನ ಗೇಮ್ಸ್ ವಿಶೇಷವಾಗಿದೆ ಎಂದರು.

ಆಯೇಶಾ ವಿವಾದ...
ನಮಗೆ ಸತ್ಯ ಗೊತ್ತಿತ್ತು, ವಾಸ್ತವ ಏನೆಂಬುದು ನಮಗೆ ಆರಂಭದಿಂದಲೇ ತಿಳಿದಿತ್ತು. ನನಗೆ ಶೋಯಿಬ್ ಬಗ್ಗೆ ಭರವಸೆಯಿತ್ತು. ನಮ್ಮ ಮದುವೆಯ 25 ವರ್ಷಗಳಲ್ಲಿ ನಡೆಯಬೇಕಾಗಿರುವುದು ಕೇವಲ 10-12 ದಿನಗಳಲ್ಲಿ ನಡೆದು ಹೋಯಿತು. ಆದರೆ ಇಷ್ಟೂ ದಿನಗಳಲ್ಲಿ ನಮ್ಮ ನಡುವೆ ಒಂದೇ ಒಂದು ಚಿಕ್ಕ ವಾದವಾಗಲೀ, ಗಲಾಟೆಯಾಗಲೀ ಅಥವಾ ಕಿರಿಕಿರಿ ಪ್ರಸಂಗಗಳಾಗಲೀ ನಡೆದಿಲ್ಲ ಎಂದು ಶೋಯಿಬ್ ಮೊದಲ ಪತ್ನಿ ಆಯೇಶಾ ಸಿದ್ಧಿಕಿ ಪ್ರಕರಣದ ಕುರಿತು ಸಾನಿಯಾ ವಿವರಣೆ ನೀಡಿದರು.

ಆದರೂ ಈ ನಡುವೆ ಮದುವೆ ರದ್ದಾಗುತ್ತದೆ ಎಂಬ ಭಾವನೆ ನನಗೆ ಬಂದಿರಲಿಲ್ಲ. ಆದರೆ ಮುಂದಕ್ಕೆ ಹೋಗಬಹುದು ಎಂಬ ಸಂಶಯಗಳು ಬಂದಿದ್ದವು. ಅಷ್ಟಕ್ಕೂ ನಾವೂ ಕೂಡ ಮನುಷ್ಯರಲ್ಲವೇ? ಹಾಗಾಗಿ ಭಾವನಾತ್ಮಕವಾಗಿ ತೀರಾ ನೊಂದುಕೊಂಡಿದ್ದೆ. ಆದರೆ ಈ ಘಟನೆಗಳಿಂದಾಗಿ ನಮ್ಮ ನಡುವಿನ ಸಂಬಂಧ ಗಟ್ಟಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
PR

2004ರಲ್ಲೇ ಭೇಟಿಯಾಗಿದ್ದೆವು..
ನಾವು ಮೊದಲ ಬಾರಿ ಭೇಟಿಯಾಗಿದ್ದು ಆಸ್ಟ್ರೇಲಿಯಾದಲ್ಲಿ. ಆದರೆ ಆಗ ಪ್ರೀತಿ ಹುಟ್ಟಿರಲಿಲ್ಲ. ನಂತರ ಇಡೀ ಪಾಕಿಸ್ತಾನ ತಂಡದ ಜತೆಗೂ ಅವರನ್ನು ಭೇಟಿ ಮಾಡಿದ್ದೆ.

ನಂತರ ನಮ್ಮ ಮೂರನೇ ಭೇಟಿ ನಡೆದಿತ್ತು. ನನ್ನ ತಂದೆಯ ಜತೆ ಭಾರತೀಯ ರೆಸ್ಟಾರೆಂಟ್ ಒಂದರಲ್ಲಿ ಊಟ ಮಾಡುತ್ತಿದ್ದಾಗ ಅವರು ಅಲ್ಲಿಗೆ ತನ್ನ ಗೆಳೆಯನ ಜತೆ ಬಂದಿದ್ದರು. ಅದೇ ಬೀದಿಯ ಹೊಟೇಲ್ ಒಂದರಲ್ಲಿ ಅವರು ಉಳಿದುಕೊಂಡಿದ್ದರು ಎಂದಷ್ಟೇ ಸಾನಿಯಾ ತಮ್ಮ ನಡುವೆ ಪ್ರೀತಿ ಹುಟ್ಟಿಕೊಂಡ ಕ್ಷಣಗಳ ಕುರಿತು ವಿವರಣೆ ನೀಡಿದ್ದಾರೆ.

ಅವರು ನನ್ನ ತಂದೆಯ ಬಳಿ ಬಂದು ಮಾತನಾಡಿದ್ದರು. ನಂತರ ಇದ್ದಕ್ಕಿದ್ದಂತೆ ಟೆನಿಸ್‌ನಲ್ಲಿ ಆಸಕ್ತಿ ತೋರಿಸಿದ ಶೋಯಿಬ್, ನನ್ನಲ್ಲೂ ಆಸಕ್ತಿ ಹುಟ್ಟಿಸಿದರು ಎನ್ನುತ್ತಾ ಗಂಡನತ್ತ ಕುಡಿ ನೋಟ ಬೀರಿದರು ಸಾನಿಯಾ.

ಗಂಡನಿಗೆ ತಾಳ್ಮೆಯಿಲ್ಲವಂತೆ..
ಅದೇ ಹೊತ್ತಿಗೆ ತನ್ನ ಗಂಡನಿಗೆ ತಾಳ್ಮೆಯಿಲ್ಲ ಎಂದೂ ಮಾಧ್ಯಮಗಳ ಜತೆ ಸಾನಿಯಾ ದೂರಿಕೊಂಡಿದ್ದಾರೆ. ಒಂದೇ ಕಡೆ ಕುಳಿತುಕೊಳ್ಳುವ ಸ್ವಭಾವ ಅವರದಲ್ಲ. ಗಂಟೆ ಅಥವಾ ಅರ್ಧ ಗಂಟೆಗೊಮ್ಮೆ ಎಲ್ಲಾದರೂ ಹೋಗಬೇಕು. ನಿನ್ನ ಅತ್ತಿಗೆಯನ್ನು ಬೋರ್ ಆಗದಂತೆ ನೋಡಿಕೋ ಅಂತ ತನ್ನ ಸಹೋದರನಿಗೆ ಹೇಳುತ್ತಾರೆ ಎಂದು ಗಂಡನ ಬಗ್ಗೆ ಹುಸಿ ಮುನಿಸು ತೋಡಿಕೊಂಡರು.

ಅದೇ ಹೊತ್ತಿಗೆ ಶೋಯಿಬ್ ಒಬ್ಬ ಶ್ರೇಷ್ಠ ಆಟಗಾರನಾಗಿರುವ ಹೊರತಾಗಿಯೂ ಅವರ ಸರಳತೆ ಸಾನಿಯಾಗೆ ತುಂಬಾ ಹಿಡಿಸಿದೆಯಂತೆ.
ಸಂಬಂಧಿತ ಮಾಹಿತಿ ಹುಡುಕಿ