ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕರ್ನಾಟಕದ ಮರಾಠಿಗರಿಗೆ ಮಹಾರಾಷ್ಟ್ರ ಬೆಂಬಲ; ಭಾರೀ ಗದ್ದಲ (Belgaum | Maharashtra Assembly | Karnataka | B.S. Yeddyurappa)
Bookmark and Share Feedback Print
 
ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಬೆಳಗಾವಿ ವಿವಾದ ಮತ್ತೆ ತಾರಕಕ್ಕೇರುತ್ತಿದ್ದು, ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕನ್ನಡ ನಾಡಿನ ಮರಾಠಿಗರಿಗೆ ಪಕ್ಷ-ಬೇಧವಿಲ್ಲದೆ ಬೆಂಬಲ ನೀಡಲಾಗಿದೆ. ಇದರ ಜತೆಗೆ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಘೋಷಣೆಗಳನ್ನು ಕೂಗಿದ್ದಲ್ಲದೆ, ಸರಕಾರವನ್ನು ವಜಾಗೊಳಿಸುವಂತೆಯೂ ಆಗ್ರಹಿಸಲಾಗಿದೆ.

ಬೆಳಗಾವಿಯನ್ನು ಕರ್ನಾಟಕದ ಎರಡನೇ ರಾಜಧಾನಿಯನ್ನಾಗಿ ಮಾಡುವ ಚಿಂತನೆಯಿದೆ ಎಂದು ಇತ್ತೀಚೆಗಷ್ಟೇ ಯಡಿಯೂರಪ್ಪನವರು ನೀಡಿದ್ದ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಮಹಾರಾಷ್ಟ್ರ ವಿಧಾನಸಭಾ ಸದಸ್ಯರು, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಘೋಷಣೆ ಕೂಗಿದ್ದಲ್ಲದೆ, ಯಡಿಯೂರಪ್ಪ ಸರಕಾರವನ್ನು ಅಮಾನತುಗೊಳಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಆಕ್ರೋಶಿತರನ್ನು ಸಮಾಧಾನಗೊಳಿಸಿದ ಮುಖ್ಯಮಂತ್ರಿ ಅಶೋಕ್ ಚೌಹಾನ್, ಈ ಸಂಬಂಧ ಸರ್ವಪಕ್ಷದ ನಿಯೋಗವೊಂದನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರಲ್ಲಿಗೆ ಕರೆದುಕೊಂಡು ಹೋಗುವ ಭರವಸೆ ನೀಡಿದರು.

ಬೆಳಗಾವಿ, ಕಾರವಾರಗಳಲ್ಲಿ ಮರಾಠಿ ಭಾಷಿಗರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದ್ದು, ಈ ವಿಚಾರವನ್ನು ಚರ್ಚೆಗೆ ಸ್ವೀಕರಿಸಬೇಕು ಎಂದು ಒತ್ತಾಯಿಸಿದ ಶಿವಸೇನೆಯ ಸುಭಾಷ್ ದೇಸಾಯಿ, ಇಲ್ಲಿನ ಆಜಾದ್ ಮೈದಾನದಲ್ಲಿ ನಡೆಯುತ್ತಿರುವ ಸತ್ಯಾಗ್ರಹವನ್ನು ಕೂಡ ವಿಧಾನಸಭೆಯ ಗಮನಕ್ಕೆ ತಂದರು. ಇದಕ್ಕೆ ವಿರೋಧ ಪಕ್ಷಗಳ ಶಾಸಕರು ಕೂಡ ಬೆಂಬಲ ಸೂಚಿಸಿ ಚರ್ಚೆಗೆ ಆಗ್ರಹಿಸುತ್ತಾ ಸಭಾಧ್ಯಕ್ಷರತ್ತ ನುಗ್ಗಲಾರಂಭಿಸಿದರು. ಕೋಲಾಹಲದಿಂದಾಗಿ ಕಲಾಪವನ್ನು ಎರಡು ಬಾರಿ ಮುಂದೂಡಬೇಕಾಯಿತು.

ಬಳಿಕ ಸ್ಪಷ್ಟನೆ ನೀಡಿದ ಮುಖ್ಯಮಂತ್ರಿ, ಗಡಿ ವಿವಾದ ರಾಜಕೀಯವನ್ನು ಮೀರಿದ್ದು; ಈ ವಿಚಾರದಲ್ಲಿ ಮಹಾರಾಷ್ಟ್ರದ ಭಾವನೆಗಳು ಬಹಳ ಕಠಿಣವಾಗಿದೆ. ಉಪವಾಸ ನಿರತರನ್ನು ನಾನೇ ಖುದ್ದಾಗಿ ಭೇಟಿ ಮಾಡುತ್ತೇನೆ ಎಂದು ಹೇಳಿಕೆ ನೀಡಿದರು.

ಇದೇ ಹೊತ್ತಿಗೆ ಸಂಕಷ್ಟ ಎದುರಿಸುತ್ತಿರುವ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಎಂದು ಕೇಂದ್ರ ಸರಕಾರ ಘೋಷಿಸಬೇಕೆಂದು ಶಿವಸೇನೆಯ ರಾಮದಾಸ್ ಕದಂ ಆಗ್ರಹಿಸಿದ್ದಾರೆ.

ಪ್ರಕರಣ ನ್ಯಾಯಾಯಲದಲ್ಲಿರುವುದರಿಂದ ವಿವಾದಗ್ರಸ್ತ ಪ್ರದೇಶಗಳು ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸುವುದು ಉತ್ತಮ. ಇದೇ ಹೊತ್ತಿಗೆ ವಿರೋಧಪಕ್ಷದ ನಾಯಕ ಪಾಂಡುರಂಗ ಪುಂಡುಕರ್ ಕೂಡ ಕದಂ ಅವರಿಗೆ ಬೆಂಬಲಿಸಿದ್ದಲ್ಲದೆ, ಮರಾಠಿಗರಿಗೆ ಕರ್ನಾಟಕದಲ್ಲಾಗುತ್ತಿರುವ ಅವಮಾನವನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು ಎಂದರು.

ನಂತರ ಇಲ್ಲಿನ ಆಜಾದ್ ಮೈದಾನ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಸದಸ್ಯರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಚೌಹಾನ್, ಉಪಮುಖ್ಯಮಂತ್ರಿ ಛಗನ್ ಭುಜಬಲ್, ಗೃಹಸಚಿವ ಆರ್.ಆರ್. ಪಾಟೀಲ್, ಬಿಜೆಪಿ ಮುಖ್ಯಸ್ಥ ವಿನೋದ್ ತಾವ್ಡೆ, ಸಂಸದೀಯ ವ್ಯವಹಾರಗಳ ಸಚಿವ ಹರ್ಷವರ್ದನ್ ಪಾಟೀಲ್ ಮತ್ತಿತರರು ಸಂಪೂರ್ಣ ಬೆಂಬಲ ಘೋಷಿಸಿದರು. ಬೆಳಗಾವಿ ಮಹಾರಾಷ್ಟ್ರದ ಅವಿಭಾಜ್ಯ ಅಂಗ ಎಂದು ಘೋಷಿಸಬೇಕು ಎಂದು ಎಂಇಎಸ್ ಸುದೀರ್ಘ ಕಾಲದಿಂದ ಹೋರಾಟ ನಡೆಸುತ್ತಾ ಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ