ವಿಶೇಷ ವಿಮಾನದಿಂದ, ಶನಿವಾರ, 17 ಏಪ್ರಿಲ್ 2010( 18:36 IST )
ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಶಶಿ ತರೂರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾಗರೂಕತೆಯಿಂದ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮನಮೋಹನ್ ಸಿಂಗ್, ರಾಜಕೀಯವೆಂದರೆ ಏಳು-ಬೀಳುಗಳಿರುತ್ತವೆ ಎಂದಿದ್ದಾರೆ.
ಅಮೆರಿಕಾ ಮತ್ತು ಬ್ರೆಜಿಲ್ ಪ್ರವಾಸ ಮುಗಿಸಿ ವಿಶೇಷ ವಿಮಾನದಲ್ಲಿ ಭಾರತಕ್ಕೆ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಸಿಂಗ್ ಮಾತಿಗಿಳಿದಿದ್ದರು.
ಈ ಸಂದರ್ಭದಲ್ಲಿ ಐಪಿಎಲ್ ಕೊಚ್ಚಿ ಫ್ರಾಂಚೈಸಿ ಜತೆಗಿನ ತರೂರ್ ಸಂಬಂಧ ವಿವಾದವಾಗಿರುವುದರ ಕುರಿತು ಪ್ರಧಾನಿಯವರ ಗಮನ ಸೆಳೆದಾಗ, ರಾಜಕೀಯವೆಂದರೆ ಅಲ್ಲಿ ಏಳು-ಬೀಳುಗಳಿರುತ್ತವೆ ಎಂದರು.
ಹಗರಣದ ಕುರಿತು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ವಿರೋಧ ಪಕ್ಷಗಳು ಭಾರೀ ಕೋಲಾಹಲ ಎಬ್ಬಿಸಿದ್ದಲ್ಲದೆ, ತರೂರ್ ರಾಜೀನಾಮೆಗೆ ಆಗ್ರಹಿಸಿದ್ದವು. ಆದರೆ ಎಲ್ಲಾ ಆರೋಪಗಳನ್ನೂ ತಳ್ಳಿ ಹಾಕಿದ್ದ ಸಚಿವರು, ತಾನು ತನ್ನ ಸಚಿವ ಸ್ಥಾನದ ದುರ್ಬಳಕೆ ಮಾಡಿಲ್ಲ ಮತ್ತು ತಂಡದ ಜತೆ ನನಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ತರೂರ್ ಹೇಳಿಕೆ ನೀಡಲು ಅವಕಾಶ ನೀಡುವುದಿಲ್ಲ, ಅವರು ಮೊದಲು ರಾಜೀನಾಮೆ ನೀಡಲಿ ಎಂದು ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದ ನಂತರ ಹೇಳಿಕೆ ನೀಡಲು ಯತ್ನಿಸಿದರೂ ನಂತರ ಸಾಧ್ಯವಾಗದೇ ಇದ್ದಾಗ ಸ್ಪೀಕರ್ ಅವರಿಗೆ ಲಿಖಿತ ಹೇಳಿಕೆಯನ್ನು ತರೂರ್ ಒಪ್ಪಿಸಿದ್ದರು. ಐಪಿಎಲ್ ಕೊಚ್ಚಿ ಫ್ರಾಂಚೈಸಿಯಲ್ಲಿ 70 ಕೋಟಿ ರೂಪಾಯಿಗಳ ಶೇರು ಹೊಂದಿರುವ ತನ್ನ ಗೆಳತಿ ಸುನಂದಾ ಪುಷ್ಕರ್ ಅವರಿಗಾಗಿ ಸಚಿವಾಲಯವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಎಲ್ಲಾ ಆರೋಪಗಳನ್ನೂ ಈ ಸಂದರ್ಭದಲ್ಲಿ ಅವರು ನಿರಾಕರಿಸಿದ್ದರು.
ಅದೇ ಹೊತ್ತಿಗೆ ತರೂರ್ ಸ್ಪಷ್ಟನೆಯಿಂದ ಕಾಂಗ್ರೆಸ್ ನಾಯಕತ್ವವು ಸಮಾಧಾನಗೊಂಡಿಲ್ಲ ಎಂದು ಮೂಲಗಳು ಹೇಳಿದ್ದು, ಪುಷ್ಕರ್ ಮತ್ತು ಐಪಿಎಲ್ ವಿವಾದದ ಕುರಿತು ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ಅಥವಾ ಕ್ರಮಗಳನ್ನು ಕೈಗೊಳ್ಳದೇ ಇರಲು ನಿರ್ಧರಿಸಿದೆ.
ತರೂರ್ ಅವರನ್ನು ಸಮರ್ಥಿಸಿಕೊಳ್ಳುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ. ಇಂತಹ ಒಂದು ಪ್ರಕರಣದ ಕುರಿತು ಸಂಸತ್ತಿನಲ್ಲಿ ತರೂರ್ ಅವರನ್ನು ಪ್ರಧಾನ ಮಂತ್ರಿಯವರು ಸಮರ್ಥನೆ ಮಾಡಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಸರಕಾರ ಬಂದಲ್ಲಿ ಅದು ಪಕ್ಷಕ್ಕೆ ಅಪಮಾನ ಎಂದೂ ಭಾವಿಸಲಾಗುತ್ತಿದೆ ಎಂದು ಕಾಂಗ್ರೆಸ್‌ನ ಹೆಸರು ಹೇಳಲಿಚ್ಛಿಸದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಪಕ್ಷದ ಮೂಲಗಳ ಪ್ರಕಾರ ಈ ಪ್ರಕರಣದಲ್ಲಿ ತರೂರ್ ಭವಿಷ್ಯವನ್ನು ಪ್ರಧಾನಿಯವರೇ ನಿರ್ಧರಿಸಲಿ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಕೈ ತೊಳೆದುಕೊಂಡಿದ್ದಾರೆ.