ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದಾಂತೇವಾಡದಲ್ಲಿ ಪೊಲೀಸರ ಮೇಲೆ ನಕ್ಸಲರಿಂದ ಮತ್ತೆ ದಾಳಿ (Naxals | Dantewada | CRPF uniform | E N Rammohan)
Bookmark and Share Feedback Print
 
ಇತ್ತೀಚೆಗಷ್ಟೇ ನಕ್ಸಲರು ನಡೆಸಿದ ಭೀಕರ ನರಮೇಧದ ಕುರಿತು ತನಿಖೆ ನಡೆಸಲು ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಗೆ ಹೋಗಿದ್ದ ಅಧಿಕಾರಿಗಳ ಮೇಲೆ ಸಿಆರ್‌ಪಿಎಫ್ ಸಿಬ್ಬಂದಿಗಳ ಸಮವಸ್ತ್ರದಲ್ಲಿದ್ದ ಮಾವೋವಾದಿಗಳು ಏಕಾಏಕಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಆದರೆ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಮಾವೋವಾದಿಗಳು ದಂತೇವಾಡದ ಅರಣ್ಯ ಪ್ರದೇಶದಲ್ಲಿ 75 ಸಿಆರ್‌ಪಿಎಫ್ ಹಾಗೂ ಒಬ್ಬ ರಾಜ್ಯ ಪೊಲೀಸ್ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದು ಹಾಕಿದ್ದರು. ಈ ಕುರಿತು ತನಿಖೆ ನಡೆಸಲೆಂದು ಜಿಲ್ಲೆಗೆ ಬಿಎಸ್‌ಎಫ್ ಮಾಜಿ ಮಹಾ ನಿರ್ದೇಶಕ ಇ.ಎನ್. ರಾಮಮೋಹನ್ ನೇತೃತ್ವದ ತಂಡ ತೆರಳಿತ್ತು.

ದಾಂತೇವಾಡ ಜಿಲ್ಲೆಯ ಚಿಂತಾಲ್ನಾರ್ ಪ್ರದೇಶದಲ್ಲಿ ರಾಮಮೋಹನ್ ಅವರಿಗೆ ಭದ್ರತೆ ಒದಗಿಸುತ್ತಿದ್ದ ಸ್ಥಳೀಯ ಪೊಲೀಸರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿಗಳತ್ತ ನಕ್ಸಲರು ಮನಬಂದಂತೆ ಗುಂಡು ಹಾರಿಸಿದರೂ, ಯಾರೂ ಗಾಯಗೊಂಡಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ತಾವು ಓಡಿ ಹೋಗಿಲ್ಲ, ಮತ್ತೆ ದಾಳಿಗೆ ಸಮರ್ಥರಿದ್ದೇವೆ ಎಂಬ ಸಂದೇಶವನ್ನು ನೀಡುವ ಉದ್ದೇಶದಿಂದ ನಕ್ಸಲರು ಭದ್ರತಾ ಪಡೆಗಳತ್ತ ಗುಂಡು ಹಾರಿಸಿವೆ ಎಂದು ಹೇಳಲಾಗಿದೆ.

69ರ ಹರೆಯ ರಾಮಮೋಹನ್ ಅವರು ನಕ್ಸಲರ ದಾಳಿಯ ಮೊದಲಿನ ಪರಿಸ್ಥಿತಿ ಮತ್ತು ನಂತರದ ರಕ್ಷಣಾ ಕಾರ್ಯಗಳು ಸೇರಿದಂತೆ ಘಟನೆಗೆ ಕಾರಣವಾದ ಅಂಶಗಳೇನು ಎಂಬುದನ್ನು ವಿಸ್ತೃತವಾಗಿ ತನಿಖೆ ನಡೆಸಿ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಲಿದ್ದಾರೆ.

ಏಪ್ರಿಲ್ 6ರಂದು ಮುಂಜಾನೆ ಹೊತ್ತಿಗೆ ಕರ್ತವ್ಯ ಮುಗಿಸಿ ಮರಳುತ್ತಿದ್ದ ಸಿಆರ್‌ಪಿಎಫ್ ಮತ್ತು ರಾಜ್ಯ ಪೊಲೀಸರ ವಾಹನಗಳ ಮೇಲೆ ಅರಣ್ಯ ಪ್ರದೇಶದಲ್ಲಿ ಅಡಗಿ ಕುಳಿತಿದ್ದ 1,000ದಷ್ಟು ನಕ್ಸಲರು ಮುಗಿ ಬಿದ್ದು, ಯದ್ವಾತದ್ವಾ ಗುಂಡು ಹಾರಿಸಿದ್ದರು. ಘಟನೆಯಲ್ಲಿ 76 ಮಂದಿ ಸಾವನ್ನಪ್ಪಿದ್ದರೆ, ಹಲವು ಮಂದಿ ಗಾಯಗೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ