ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗೌಡರೂ ಸೇರಿದಂತೆ 70 ಸಂಸದರು ಆಸ್ತಿ ವಿವರ ಸಲ್ಲಿಸಿಲ್ಲ!
(Lok Sabha | MPs yet to reveal assets | HD Deve Gowda | Lalu Prasad)
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ರಾಷ್ಟ್ರೀಯ ಜನತಾದಳ ಮುಖಂಡ ಲಾಲೂ ಪ್ರಸಾದ್ ಯಾದವ್, ರಾಜಕಾರಣಿಯಾಗಿರುವ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಸೇರಿದಂತೆ ಸುಮಾರು 70 ಸಂಸದರು ತಮ್ಮ ಆಸ್ತಿ ವಿವರಗಳನ್ನು ನಿಗದಿತ ಅವಧಿಯಲ್ಲಿ ಸಲ್ಲಿಸಿಲ್ಲ ಎಂಬುದು ಬಹಿರಂಗವಾಗಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಲೋಕಸಭಾ ಕಾರ್ಯಾಲಯದಿಂದ ಸುಭಾಷ್ ಚಂದ್ರ ಅಗರ್ವಾಲ್ ಪಡೆದುಕೊಂಡಿರುವ ಮಾಹಿತಿಯಲ್ಲಿ ಇದು ತಿಳಿದು ಬಂದಿದೆ. ತಮ್ಮ ಆಸ್ತಿ ಮತ್ತು ಆರ್ಥಿಕ ವಿವರಗಳನ್ನು ಸ್ಪೀಕರ್ ಅವರಿಗೆ ನೀಡದೇ ಇರುವ ಸದಸ್ಯರ ಹೆಸರುಗಳನ್ನು ತಿಳಿಸುವಂತೆ ಅಗರ್ವಾಲ್ ಅರ್ಜಿ ಸಲ್ಲಿಸಿದ್ದರು.
ಈ ಕುರಿತು ನೇರವಾಗಿ ದೇವೇಗೌಡರನ್ನೇ ಪ್ರಶ್ನಿಸಿದಾಗ, ಹೌದು. ನಾನು ನನ್ನ ಇತ್ತೀಚಿನ ಆಸ್ತಿ ವಿವರಗಳನ್ನು ಸಲ್ಲಿಸಿಲ್ಲ. ಚುನಾವಣೆ ಸಂದರ್ಭದಲ್ಲಿ ನಾನು ಚುನಾವಣಾ ಆಯೋಗದ ಮುಂದೆ ಎಲ್ಲಾ ವಿವರಗಳನ್ನು ನೀಡಿದ್ದೆ. ಆದರೆ ಅನಾರೋಗ್ಯದ ಕಾರಣಗಳಿಂದಾಗಿ ಆಸ್ತಿ ವಿವರಗಳನ್ನು ಸ್ಪೀಕರ್ ಅವರಿಗೆ ಸಲ್ಲಿಸುವುದು ಸಾಧ್ಯವಾಗಿಲ್ಲ ಎಂದಿದ್ದಾರೆ.
ಇದೇ ವರ್ಷದ ಬಜೆಟ್ ಅಧಿವೇಶನ ಫೆಬ್ರವರಿ 22ರಂದು ಆರಂಭವಾಗುವ ಮೊದಲು ಸ್ಪೀಕರ್ ಅವರಿಗೆ ತನ್ನ ಆಸ್ತಿ ಮತ್ತು ಆರ್ಥಿಕ ವಿವರಗಳನ್ನು ಗೌಡರು ಸಲ್ಲಿಸಿದ್ದರು. ಆದರೆ ಅದನ್ನು ಇನ್ನಷ್ಟೇ ಪರಿಗಣನೆಗೆ ತೆಗೆದುಕೊಳ್ಳಬೇಕಿದೆ.
ಉಳಿದಂತೆ ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ, ಅದೇ ಪಕ್ಷದ ಅವತಾರ್ ಸಿಂಗ್ ಭಂದನಾ, ದೀಪಾ ದಾಸ್‌ಮುನ್ಶಿ, ದೀಪೇಂದರ್ ಸಿಂಗ್ ಹೂಡಾ, ರಾವ್ ಇಂದ್ರಜಿತ್ ಸಿಂಗ್ ಮತ್ತು ಶ್ರುತಿ ಚೌಧರಿ, ಬಿಜೆಪಿಯ ಅರ್ಜುನ್ ಮುಂಡಾ, ಅಖಿಲ ಭಾರತ ಮಜ್ಲೀಸ್ ಇ ಇತ್ತೆಹಾದುಲ್ ಮುಸ್ಲೀಮೀನ್ಸ್ ಪಕ್ಷದ ಅಸಾದುದ್ದೀನ್ ಒವಾಯಿಸಿ ಸೇರಿದಂತೆ 70 ಮಂದಿ ತಮ್ಮ ಆಸ್ತಿ ವಿವರಗಳನ್ನು ಲೋಕಸಭಾ ಸ್ಪೀಕರ್ ಅವರಿಗೆ ಸಲ್ಲಿಸಿಲ್ಲ.
ಆಸ್ತಿ ವಿವರಗಳನ್ನು ಸಲ್ಲಿಸದ ಸಂಸದರ ವಿರುದ್ಧ ಯಾವುದೇ ದೂರುಗಳು ಬಂದಿಲ್ಲದಿರುವುದರಿಂದ ಅವರ ವಿರುದ್ಧ ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸಂಬಂಧಪಟ್ಟವರು ಪ್ರತಿಕ್ರಿಯೆ ನೀಡಿದ್ದಾರೆ.