ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಡ್ಡಾಯ ಮತದಾನ ಮಸೂದೆ ವಾಪಸ್; ಮೋದಿಗೆ ತೀವ್ರ ಹಿನ್ನಡೆ (Narendra Modi | Compulsory Voting Bill | Gujarat | Local body elections)
Bookmark and Share Feedback Print
 
ಕಳೆದ ವರ್ಷದ ಡಿಸೆಂಬರ್ ತಿಂಗಳಿನ ಚಳಿಗಾಲದ ಅಧಿವೇಶನದಲ್ಲಿ ಗುಜರಾತ್ ವಿಧಾನಸಭೆಯ ಅಂಗೀಕಾರ ಪಡೆದುಕೊಂಡಿದ್ದ ಕಡ್ಡಾಯ ಮತದಾನ ಮಸೂದೆಗೆ ಸಹಿ ಹಾಕಲು ನಿರಾಕರಿಸಿರುವ ರಾಜ್ಯಪಾಲೆ ಕಮಲಾ ಬೇನಿವಾಲ್, ಮರು ಪರಿಶೀಲನೆಗೆ ನಡೆಸಬೇಕೆಂದು ವಾಪಸ್ ಕಳುಹಿಸಿದ್ದಾರೆ.

ಚುನಾವಣಾ ಆಯೋಗದ ಅನುಮತಿಯಿಲ್ಲದೆ ಯಾವುದೇ ಪುರುಷ ಅಥವಾ ಮಹಿಳೆ ಮತದಾನದಿಂದ ಹೊರಗುಳಿದರೆ, ಅವರನ್ನು ಅಪರಾಧಿ ಎಂದು ಪರಿಗಣಿಸುವುದು ಸೇರಿದಂತೆ ಮಸೂದೆಯಲ್ಲಿರುವ ಕೆಲವು ಅಂಶಗಳ ಬಗ್ಗೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದು ಮುಖ್ಯಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಗಾಗಿರುವ ಹಿನ್ನಡೆಯೆಂದೇ ಪರಿಗಣಿಸಲಾಗುತ್ತಿದೆ. ರಾಜ್ಯದ ಮಹಾನಗರ ಪಾಲಿಕೆ ಚುನಾವಣೆಗಳು, ಪುರಸಭೆ ಚುನಾವಣೆಗಳು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಮತದಾನ ಕಡ್ಡಾಯ ಎಂಬ ಕಾನೂನನ್ನು ಮೋದಿ ಸರಕಾರ ರೂಪಿಸಿತ್ತು.

ಇದರ ಪ್ರಕಾರ ಅನುಮತಿಯಿಲ್ಲದೆ ಮತದಾನ ಮಾಡದೇ ಇರುವವರನ್ನು ಅಪರಾಧಿಗಳೆಂದು ಪರಿಗಣಿಸಲಾಗುತ್ತದೆ. ಅಲ್ಲದೆ ಅವರಿಗೆ ನೊಟೀಸ್ ನೀಡಲಾಗುತ್ತದೆ. ಆದರೆ ಮತದಾನ ಮಾಡದೇ ಇರುವ ತಪ್ಪಿಗಾಗಿ ಅವರಿಗೆ ಯಾವ ಪ್ರಮಾಣದ ಶಿಕ್ಷೆಯನ್ನು ನೀಡಬೇಕು ಎಂಬುದನ್ನು ಮಸೂದೆಯಲ್ಲಿ ಪ್ರಸ್ತಾಪ ಮಾಡಿರಲಿಲ್ಲ.

ರಾಜ್ಯಪಾಲೆ ಈ ಮಸೂದೆಗೆ ಸಹಿ ಹಾಕಲು ನಿರಾಕರಿಸಿ, ಮರು ಪರಿಶೀಲನೆಗೆಂದು ಕಳುಹಿಸಿರುವುದು ನಿಜ. ಆದರೆ ಯಾವ ಕಾರಣಕ್ಕಾಗಿ ಅವರು ಮರಳಿಸಿದ್ದಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಮೂಲಗಳ ಪ್ರಕಾರ ಈ ಕಾನೂನು ಜಾರಿಯಲ್ಲಿರುವ ದೇಶಗಳಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ನಡೆಸುವಂತೆ ರಾಜ್ಯ ಸರಕಾರಕ್ಕೆ ಅವರು ಸೂಚಿಸಿದ್ದಾರೆ.

ರಾಜ್ಯಪಾಲೆ ಈ ರೀತಿ ನಡೆದುಕೊಳ್ಳುವುದರ ಹಿಂದಿನ ಕಾರಣ ಹಲವು ದೇಶಗಳಲ್ಲಿ ಇಂತಹ ಮಸೂದೆ ವಿಫಲವಾಗಿರುವುದು. ಹಾಗಾಗಿ ಸರಕಾರವು ಇಂತಹ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು, ಇತರ ದೇಶಗಳಲ್ಲಿ ಈ ಮಸೂದೆ ವಿಫಲ ಅಥವಾ ಸ್ಥಗಿತಗೊಂಡಿರುವುದರ ಹಿಂದಿನ ಕಾರಣವೇನು ಎಂಬುದನ್ನು ಪತ್ತೆ ಹಚ್ಚಿ ಅದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕು ಎನ್ನುವುದು ಅವರ ಆಸ್ಥೆ ಎಂದು ಹೇಳಲಾಗಿದೆ.

ಕಾಂಗ್ರೆಸ್ ಸದಸ್ಯರ ತೀವ್ರ ವಿರೋಧದ ನಡುವೆಯೂ 2009ರ ಡಿಸೆಂಬರ್ 17ರಂದು ಗುಜರಾತ್ ವಿಧಾನಸಭೆಯು ಬಹುಮತದೊಂದಿಗೆ ಈ ಸಮೂದೆಯನ್ನು ಅಂಗೀಕರಿಸಿತ್ತು.

ಇದರ ಪ್ರಕಾರ ಏಳು ಮಹಾನಗರ ಪಾಲಿಕೆಗಳು, 159 ಪುರಸಭೆಗಳು, 26 ಜಿಲ್ಲಾ ಪಂಚಾಯತ್‌ಗಳು, 223 ತಾಲೂಕು ಪಂಚಾಯತ್‌ಗಳು ಮತ್ತು 13,713 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಕಡ್ಡಾಯ ಮತದಾನ ಮತ್ತು ಮಹಿಳೆಯರಿಗೆ ಶೇ.50ರ ಮೀಸಲಾತಿಯನ್ನು ನೀಡಲಾಗುತ್ತದೆ.

ರಾಜ್ಯಪಾಲೆ ನೀಡಿರುವ ಕಾರಣಗಳು..
** ಮತದಾನ ಕಡ್ಡಾಯ ಮಸೂದೆಯು ಪ್ರಜೆಗಳಿಗೆ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿರುವ ಭಾರತೀಯ ಸಂವಿಧಾನದ 19ನೇ ಪರಿಚ್ಛೇದದ ಉಲ್ಲಂಘನೆಯಾಗಿದೆ. ಹಾಗಾಗಿ ಮತದಾನ ಕಡ್ಡಾಯ ಮಾಡುವುದು ಸಂವಿಧಾನಕ್ಕೆ ವಿರುದ್ಧವಾದ ಮಸೂದೆಯಾಗುತ್ತದೆ.
** ಮತದಾನ ಮಾಡದವರನ್ನು ಶಿಕ್ಷಿಸುವುದು ಪ್ರಜೆಗಳ ಮೂಲಭೂತ ಹಕ್ಕುಗಳ ಉಲ್ಲಂಘನೆ.
** ಇತರ ಹಲವು ದೇಶಗಳಲ್ಲಿ ಕಡ್ಡಾಯ ಮತದಾನ ಮಸೂದೆ ವಿಫಲವಾಗಿರುವುದು.
** ಮಹಿಳೆಯರಿಗೆ ಶೇ.50 ಮೀಸಲಾತಿ ಮತ್ತು ಕಡ್ಡಾಯ ಮತದಾನ -- ಈ ಎರಡನ್ನೂ ಒಂದೇ ಮಸೂದೆಯಲ್ಲಿ ಸೇರಿಸಲಾಗಿದೆ. ಮಹಿಳಾ ಮೀಸಲಾತಿಯನ್ನು ಪ್ರತ್ಯೇಕ ಮಸೂದೆಯನ್ನಾಗಿ ಮಾಡಬೇಕು.
ಸಂಬಂಧಿತ ಮಾಹಿತಿ ಹುಡುಕಿ