ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲಲಿತ್ ಮೋದಿ ಕಚೇರಿಯಲ್ಲಿದ್ದ ನಿಗೂಢ ಮಹಿಳೆ ಮಲ್ಯ ಪುತ್ರಿ..! (Income Tax department | Vijay Mallya | Laila Mahmood | Lalit Modi)
Bookmark and Share Feedback Print
 
ಇಂಡಿಯನ್ ಪ್ರೀಮಿಯರ್ ಲೀಗ್ ಆಯುಕ್ತ ಲಲಿತ್ ಮೋದಿ ಕಚೇರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುವ ಕೆಲವೇ ಕ್ಷಣಗಳ ಮೊದಲು ಅಲ್ಲಿಗೆ ಹೋಗಿ ಹಲವು ಫೈಲುಗಳನ್ನು ಎತ್ತಿಕೊಂಡು ಹೋಗಿದ್ದ ನಿಗೂಢ ಮಹಿಳೆ ಯಾರೆಂಬ ಗುಟ್ಟು ಇದೀಗ ಬಯಲಾಗಿದೆ. ಅದು ವಿಜಯ ಮಲ್ಯ ಅವರ ಪುತ್ರಿ!

ಹೌದು, ವಿಜಯ ಮಲ್ಯ ಅವರ ಮಲ ಪುತ್ರಿ ಲೈಲಾ ಮಹಮ್ಮದ್ ಈ ನಿಗೂಢ ಮಹಿಳೆ. ಆಕೆಯನ್ನು ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಆದರೆ ಆಕೆಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ತನಿಖೆ ಏನಿದ್ದರೂ ಐಪಿಎಲ್ ಫ್ರಾಂಚೈಸಿಗಳ ಅವ್ಯವಹಾರಗಳ ಕುರಿತು ಮಾತ್ರ ಎಂದು ಆದಾಯ ತೆರಿಗೆ ಇಲಾಖೆಯ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯ ಮಲ್ಯರ ಮೊದಲ ಪತ್ನಿ ಏರ್ ಇಂಡಿಯಾದ ಮಾಜಿ ಗಗನಸಖಿ ಸಮೀರಾ ಅವರ ಪುತ್ರಿ ಲೈಲಾ ಮಹಮ್ಮದ್. ಸಮೀರಾ ಅವರನ್ನು ತೊರೆದ ನಂತರ ಮಲ್ಯ ರೇಖಾ ಎನ್ನುವ ಬೆಂಗಳೂರು ಮಹಿಳೆಯನ್ನು ವಿವಾಹವಾಗಿದ್ದರು. ಪ್ರಸಕ್ತ ಮಲ್ಯ ಅವರ ಜತೆ ಐಪಿಎಲ್ ಪಂದ್ಯಗಳ ಸಂದರ್ಭಗಳಲ್ಲಿ ಭಾರೀ ಸುದ್ದಿಯಾಗುತ್ತಿರುವ ಯುವಕ ಸಿದ್ಧಾರ್ಥ್ ಮಲ್ಯ, ಸಮೀರಾ ಮತ್ತು ಮಲ್ಯ ಅವರ ಸಂಬಂಧದಲ್ಲಿ ಹುಟ್ಟಿದ ಮಗ ಎಂದು ಹೇಳಲಾಗಿದೆ.

ಮುಂಬೈಯ 'ಫೋರ್ ಸೀಸನ್ಸ್' ಹೊಟೇಲ್‌ನ ಲಲಿತ್ ಮೋದಿ ಕಚೇರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುವ 30 ನಿಮಿಷಗಳ ಮೊದಲು ಮಹಿಳೆಯೊಬ್ಬರು ಕಚೇರಿಯಿಂದ ಹಲವು ಫೈಲುಗಳೊಂದಿಗೆ ಹೊರಗೆ ಹೋಗಿದ್ದನ್ನು ಸಿಸಿಟಿವಿ ಮೂಲಕ ಅಧಿಕಾರಿಗಳು ಪತ್ತೆ ಹಚ್ಚಿದ್ದರು.

ಬೆಂಗಳೂರು ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿಯ ಮಾಲಕರಾಗಿರುವ ಮಲ್ಯ ಅವರ ಪುತ್ರಿ ಲೈಲಾ ಮಹಮ್ಮದ್ ಲಲಿತ್ ಮೋದಿಯವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ತೆಗೆದುಕೊಂಡು ಹೋಗಿರುವ ಫೈಲುಗಳಿಗೂ, ಐಪಿಎಲ್ ಫ್ರಾಂಚೈಸಿ ತನಿಖೆಗೂ ಯಾವುದೇ ಸಂಬಂಧವಿಲ್ಲ. ಅವರನ್ನು ನಾವು ವಿಚಾರಣೆ ನಡೆಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಪ್ರತಿಕ್ರಿಯೆ ನೀಡಿರುವ ವಿಜಯ ಮಲ್ಯ, ಲೈಲಾ ನನ್ನ ಮಲ ಮಗಳು. ಆಕೆ ಲಲಿತ್ ಮೋದಿಯವರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಇದಕ್ಕಿಂತ ಹೆಚ್ಚು ನನಗೇನೂ ತಿಳಿದಿಲ್ಲ. ಈ ಸಂಬಂಧ ನಾನು ಮೋದಿಗೆ ಕರೆ ಮಾಡಿದ್ದೇನೆ. ಆಕೆ ಆದಾಯ ತೆರಿಗೆ ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದಾಳೆ ಎಂದು ಅವರು ಖಚಿತಪಡಿಸಿದ್ದಾರೆ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ