ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೊಚ್ಚಿಯೂ ಇಲ್ಲ, ಸಚಿವ ಸ್ಥಾನವೂ ಇಲ್ಲ; ತರೂರ್ ರಾಜೀನಾಮೆ (Shashi Tharoor | Sunanda Pushkar | IPL | Kochi IPL)
Bookmark and Share Feedback Print
 
ಇಂಡಿಯನ್ ಪ್ರೀಮಿಯರ್ ಲೀಗ್ ಕೊಚ್ಚಿ ಫ್ರಾಂಚೈಸಿ ಮತ್ತು ಸುನಂದಾ ಪುಷ್ಕರ್ ಜತೆಗಿನ ಸಂಬಂಧದಿಂದ ತೀವ್ರ ವಿವಾದಕ್ಕೆ ತುತ್ತಾಗಿದ್ದ ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಶಶಿ ತರೂರ್ ಕೊನೆಗೂ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅತ್ತ ಅವರ ಗೆಳತಿ ಸುನಂದಾ ಕೊಚ್ಚಿ ಶೇರುಗಳನ್ನು ಕೂಡ ತ್ಯಜಿಸಿದ್ದಾರೆ.

ನಿನ್ನೆ ರಾತ್ರಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಜತೆ ಚರ್ಚಿಸಿದ ನಂತರ ಈ ನಿರ್ಧಾರಕ್ಕೆ ಬರಲಾಯಿತು. ನಿನ್ನೆ ರಾತ್ರಿಯೇ ತರೂರ್ ತನ್ನ ರಾಜೀನಾಮೆಯನ್ನು ಸಲ್ಲಿಸಿದ್ದು, ರಾಷ್ಟ್ರಪತಿಯವರು ಅಂಗೀಕರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ತನ್ನ ನಿಲುವನ್ನು ತಿಳಿಸಲು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭಾನುವಾರ ಅಪರಾಹ್ನ ಭೇಟಿಯಾಗಿದ್ದ ತರೂರ್, ರಾಜೀನಾಮೆ ಸಲ್ಲಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಈ ಪ್ರಸ್ತಾಪವನ್ನು ಸೋನಿಯಾ ಮತ್ತು ಪ್ರಧಾನಿ ಕೂಡ ಒಪ್ಪಿಕೊಂಡು, ಪ್ರಧಾನಿಯವರ ನಿವಾಸಕ್ಕೆ ಮತ್ತೆ ತರೂರ್ ಅವರನ್ನು ತಡ ರಾತ್ರಿ ಕರೆಸಿಕೊಂಡರು.

ಸಭೆಯ ನಂತರ ತರೂರ್ ಯಾವುದೇ ಪ್ರತಿಕ್ರಿಯೆ ನೀಡದೆ ಹೊರಟು ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ತರೂರ್ ರಾಜೀನಾಮೆ ನೀಡಿದ್ದಾರೆ, ಅದನ್ನು ನಂತರ ರಾಷ್ಟ್ರಪತಿಯವರು ಅಂಗೀಕರಿಸಿದ್ದಾರೆ.

ರಾತ್ರಿ ಮತ್ತೆ ಪ್ರಧಾನಿಯವರ ನಿವಾಸಕ್ಕೆ ತರೂರ್ ತೆರಳುವಾಗಲೇ ದಟ್ಟವಾಗಿದ್ದ ರಾಜೀನಾಮೆ ವದಂತಿ ಖಚಿತವಾಗಲು ಮೂಲಕ ಕಾರಣ ಅವರು ತನ್ನ ಸರಕಾರಿ ಕಾರಿನ ಬದಲು ಖಾಸಗಿ ಕಾರು ಮಾರುತಿ 1000ನಲ್ಲಿ ತೆರಳಿದ್ದು. ಈ ಸಭೆ ಸುಮಾರು 45 ನಿಮಿಷಗಳ ಕಾಲ ನಡೆದಿತ್ತು.

ಐಪಿಎಲ್ ಕೊಚ್ಚಿ ತಂಡದ ತವರು ಕೇರಳ ಅಥವಾ ಕ್ರಿಕೆಟ್ ಅಥವಾ ರೆಂಡೆಜ್ವಾಸ್ ಸ್ಪೋರ್ಸ್ಟ್ ವರ್ಲ್ಡ್ ಜತೆ ಯಾವುದೇ ರೀತಿಯ ಸಂಬಂಧ ಹೊಂದಿಲ್ಲದ ಕಾಶ್ಮೀರ ಮೂಲದ ಪ್ರಸಕ್ತ ದುಬೈಯಲ್ಲಿ ನೆಲೆಸಿರುವ ಬ್ಯೂಟೀಷಿಯನ್‌ ಸುನಂದಾ ಪುಷ್ಕರ್‌ಗೆ ಕೊಚ್ಚಿ ತಂಡದ ಮಾಲಕ ರೆಂಡೆಜ್ವಾಸ್ ಸ್ಪೋರ್ಸ್ಟ್ ವರ್ಲ್ಡ್ ತನ್ನ ಫ್ರೀ ಶೇರು ವಿಭಾಗದಿಂದ ಶೇ.19 ಅಂದರೆ ಸುಮಾರು 70 ಕೋಟಿ ರೂಪಾಯಿಗಳ ಉಚಿತ ಶೇರುಗಳನ್ನು ಕೊಡುಗೆಯಾಗಿ ನೀಡಿತ್ತು.

ಇದರ ಹಿಂದೆ ಸುನಂದಾ ಅವರ ಗೆಳೆಯ ತರೂರ್ ಇದ್ದಾರೆ ಎಂದು ಐಪಿಎಲ್ ಆಯುಕ್ತ ಲಲಿತ್ ಮೋದಿ ಬಹಿರಂಗಪಡಿಸಿದ್ದರು. ತರೂರ್ ಅವರ ವಶೀಲಿಬಾಜಿ ಕಾರಣದಿಂದ ಭಾರೀ ಪ್ರಮಾಣದ ಶೇರುಗಳನ್ನು ಉಚಿತವಾಗಿ ನೀಡಲಾಗಿದೆ ಎಂದು ಆರೋಪಿಸಲಾಗಿತ್ತು. ಪ್ರತಿಪಕ್ಷಗಳು ಕೂಡ ಇಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಮತ್ತು ಸಚಿವಾಲಯವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ತರೂರ್ ರಾಜೀನಾಮೆಗೆ ಆಗ್ರಹಿಸಿದ್ದವು.

ಆದರೆ ಆರಂಭದಿಂದಲೂ ನಾನೇನು ತಪ್ಪು ಮಾಡಿಲ್ಲ, ರಾಜೀನಾಮೆ ಪ್ರಶ್ನೆಯೇ ಇಲ್ಲ ಎಂದು ತರೂರ್ ತನ್ನನ್ನು ಸಮರ್ಥಿಸಿಕೊಂಡು ಬಂದಿದ್ದರು. ಸ್ವತಃ ಕಾಂಗ್ರೆಸ್ ಒಳಗಿನಿಂದಲೇ ತೀವ್ರ ಒತ್ತಡಗಳು ಬಂದಾಗ ಮತ್ತೊಂದು ತಂತ್ರವನ್ನು ಹೆಣೆಯಲಾಯಿತು. ಆದರೆ ಅದು ತರೂರ್ ಅವರಿಗೆ ಮುಳುವಾಯಿತೇ ಹೊರತು ಯಾವುದೇ ಲಾಭವಾಗಿ ಪರಿಣಮಿಸಲಿಲ್ಲ.

ಸುನಂದಾ ಅವರು ತನ್ನ ಕೊಚ್ಚಿ ಶೇರುಗಳನ್ನು ಕೈ ಬಿಡುವುದೇ ಆ ತಂತ್ರ. ಇದರಿಂದ ಕಾಂಗ್ರೆಸ್ ಕೃಪೆ ತರೂರ್ ಮೇಲೆ ಉಳಿದುಕೊಳ್ಳಬಹುದು, ಆ ಮೂಲಕ ಸಚಿವ ಸ್ಥಾನಕ್ಕೆ ಯಾವುದೇ ಧಕ್ಕೆಯಾಗದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಇದು ಯಾವುದೇ ಫಲ ಕೊಡಲಿಲ್ಲ. ಅತ್ತ ಸುನಂದಾ ಕೊಚ್ಚಿ ತಂಡದ ತನ್ನ ಶೇರುಗಳನ್ನು ತ್ಯಜಿಸಿದ ಕೆಲವೇ ಗಂಟೆಗಳೊಳಗೆ ತರೂರ್ ಅವರ ಸಚಿವ ಸ್ಥಾನವೂ ಹೋಗಿದೆ.

ಇದರೊಂದಿಗೆ ಯುಪಿಎ ಸರಕಾರದ ಎರಡನೇ ಅವಧಿಯಲ್ಲಿ ಭ್ರಷ್ಟಾಚಾರದ ಕಾರಣದಿಂದ ಸ್ಥಾನ ತ್ಯಜಿಸಿದ ಮೊದಲ ಸಚಿವ ಎಂಬ ಅಪಖ್ಯಾತಿ ತರೂರ್ ಅವರಿಗೆ ಸಲ್ಲುವುದರೊಂದಿಗೆ, ಅತ್ತ ಐಪಿಎಲ್ ಕೊಚ್ಚಿಯೂ ಇಲ್ಲ, ಇತ್ತ ಸಚಿವ ಸ್ಥಾನವೂ ಇಲ್ಲ ಎಂಬ ಸ್ಥಿತಿಗೆ ತಲುಪಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ