ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಫ್ಜಲ್ ಗುರು ಅಮಾಯಕ, ಸ್ವಾತಂತ್ರ್ಯ ಹೋರಾಟಗಾರ: ಗಿಲಾನಿ
(Hurriyat Conference | Syed Ali Shah Geelani | Parliament attack | Mohammad Afzal Guru)
ರಾಷ್ಟ್ರದ ಶಕ್ತಿಕೇಂದ್ರ ಸಂಸತ್ತಿನ ಮೇಲೆ ದಾಳಿ ನಡೆಸಿ ಮರಣ ದಂಡನೆಗಾಗಿ ಕಾಯುತ್ತಿರುವ ಭಯೋತ್ಪಾದಕ ಮೊಹಮ್ಮದ್ ಅಫ್ಜಲ್ ಗುರು ಒಬ್ಬ ಅಮಾಯಕನಾಗಿದ್ದು, ಆತ ಸ್ವಾತಂತ್ರ್ಯ ಹೋರಾಟಗಾರ ಎಂದು ಪ್ರತ್ಯೇಕತಾವಾದಿ ಸಂಘಟನೆ ಹುರಿಯತ್ ಕಾನ್ಫರೆನ್ಸ್ ಮುಖ್ಯಸ್ಥ ಸೈಯದ್ ಆಲಿ ಶಾಹ್ ಗಿಲಾನಿ ಹೇಳಿದ್ದಾರೆ.
2001ರಲ್ಲಿ ಸಂಸತ್ತಿನ ಮೇಲೆ ನಡೆಸಿದ ದಾಳಿಯ ಸಂಬಂಧ ಮರಣದಂಡನೆ ಎದುರಿಸುತ್ತಿರುವ ಗುರು ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದ್ದು, ಪ್ರಸಕ್ತ ರಾಷ್ಟ್ರಪತಿಯವರ ಅಂತಿಮ ಅಂಕಿತಕ್ಕಾಗಿ ಆತ ಕಾಯುತ್ತಿದ್ದಾನೆ.
ಅಫ್ಜಲ್ ಮರಣದಂಡನೆಯನ್ನು ರದ್ದು ಮಾಡಿ ಕ್ಷಮಾದಾನ ನೀಡಬೇಕೆಂದು ಆತನ ಪತ್ನಿ ತಬಾಸಂ ಮತ್ತು ಪುತ್ರ ಘಾಲಿಬ್ ಕೆಲ ವರ್ಷಗಳ ಹಿಂದೆ ಆಗಿನ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಲ್ಲಿ ಕೇಳಿಕೊಂಡಿದ್ದಾರೆ. ಆದರೆ ಕೇಂದ್ರ ಸರಕಾರ ಈ ಕುರಿತು ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.
PR
ಈತನನ್ನು ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಗಿಲಾನಿ ಮೊನ್ನೆ ಗುರುವಾರ ದೆಹಲಿಯಲ್ಲಿನ ತಿಹಾರ್ ಜೈಲಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಅಫ್ಜಲ್ ಮತ್ತು ಗಿಲಾನಿ ಇಬ್ಬರೂ ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ಸೋಪೋರ್ ಗ್ರಾಮದ ನಿವಾಸಿಗಳಾಗಿದ್ದು, ಮಾತುಕತೆ ಸಂದರ್ಭದಲ್ಲಿ ಕಾಶ್ಮೀರಿ ಹೋರಾಟಗಾರರು ಧೃತಿಗೆಡಬಾರದು ಎಂದು ಆತ ಸ್ಫೂರ್ತಿ ತುಂಬಿದ್ದಾನೆ ಎಂದು ಭೇಟಿಯ ನಂತರ ಗಿಲಾನಿ ತಿಳಿಸಿದ್ದಾರೆ.
ಅಮಾಯಕರ ವಿರುದ್ಧ ತನ್ನ ಎಲ್ಲಾ ರೀತಿಯ ತಂತ್ರಗಳನ್ನು ಬಳಸುವ ಮೂಲಕ ಆಡಳಿತವು ಕೆಟ್ಟು ಹೋಗಿದೆ. 14 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ ನಂತರ ಎಲ್ಲಾ ಆರೋಪಗಳಿಂದಲೂ ಖುಲಾಸೆಗೊಳ್ಳುವ ಈ ನ್ಯಾಯಾಂಗದಿಂದ ನಾವು ಏನನ್ನು ನಿರೀಕ್ಷಿಸಬಹುದಾಗಿದೆ ಎಂದು ಗಿಲಾನಿ ತನ್ನ ಕಠಿಣ ಪ್ರತ್ಯೇಕತಾವಾದವನ್ನು ಮಂಡಿಸಿದ್ದಾರೆ.
ಅಫ್ಜಲ್ ಜೈಲಿನಲ್ಲಿ ಧೃತಿಗೆಟ್ಟಿಲ್ಲ. ಕಾಶ್ಮೀರಕ್ಕೆ ಸ್ವಾತಂತ್ರ್ಯ ಸಿಗುವವರೆಗೆ ತಮ್ಮ ಹೋರಾಟವನ್ನು ಮುಂದುವರಿಸುವಂತೆ ಆತ ನನ್ನಲ್ಲಿ ಸಂದೇಶವನ್ನು ರವಾನಿಸಿದ್ದಾನೆ ಎಂದಿರುವ ಗಿಲಾನಿ, ಕೇಂದ್ರ ಸರಕಾರವು ಅಫ್ಜಲ್ ಗುರುವನ್ನು ನೇಣಿಗೆ ಹಾಕುವ ಮೂಲಕ ಮತ್ತೊಂದು ಮಕ್ಬೂಲ್ ಭಟ್ ಪ್ರಕರಣವನ್ನು ನಡೆಸಿದಂತಾಗಬಹುದು. ಆದರೆ ಆತ ಜನತೆಯ ಹೃದಯದಿಂದ ಎಂದೂ ಮಾಸಲಾರ. ಆತನನ್ನು ಗಲ್ಲಿಗೇರಿಸುವುದನ್ನು ನಾವು ಯಾವ ಕಾರಣಕ್ಕೂ ಸಹಿಸಲಾರೆವು ಎಂದರು.
ಅದೇ ಹೊತ್ತಿಗೆ ಸ್ವಾತಂತ್ರ್ಯ ಪರ ಹಾಗೂ ಭಾರತ ವಿರೋಧಿ ಘೋಷಣೆಗಳನ್ನು ಕೂಗುವ ಯುವಕರು ತೀರಾ ಪ್ರಚೋದನಾಕಾರಿ ಘೋಷಣೆಗಳಿಗೆ ಮುಂದಾಗಬಾರದು ಎಂದು ಮನವಿ ಮಾಡಿಕೊಂಡಿರುವ ಗಿಲಾನಿ, 'ನಮ್ಮ ಗುರಿ ಸ್ಪಷ್ಟವಾಗಿದೆ. ಜೀವನವನ್ನು ಮುನ್ನಡೆಸಲು ಇಸ್ಲಾಂ ಅತ್ಯುತ್ತಮ ಹಾದಿಯಾಗಿರುವುದರಿಂದ ನಮಗೆ ಇಸ್ಲಾಮಿಕ್ ರಾಜ್ಯ ಬೇಕಾಗಿದೆ. ನಮಗೆ ಶಾಂತಿ ಬೇಕು' ಎಂದು ತಿಳಿಸಿದ್ದಾರೆ.
ನಮ್ಮ ಪ್ರಕಾರ ಅಫ್ಜಲ್ ಒಬ್ಬ ಮುಗ್ಧ, ಅಮಾಯಕ. ಸರಕಾರದ ವಶದಲ್ಲಿರುವ ಆತನನ್ನು ಭೇಟಿ ಮಾಡಲು ಗಿಲಾನಿಯವರು ಹಲವು ಸಮಯದಿಂದ ಕಾಯುತ್ತಿದ್ದರು. ಕೊನೆಗೂ ಆ ಅವಕಾಶ ಸಿಕ್ಕಿದೆ ಎಂದು ಹುರಿಯತ್ ಸಂಘಟನೆಯ ಮತ್ತೊಬ್ಬ ಮುಖ್ಯಸ್ಥರು ಹೇಳಿದ್ದಾರೆ.