ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಣಿ ರೆಡ್ಡಿ ಸಹೋದರರ ಬಗ್ಗೆ ಬಿಜೆಪಿ ಏಕೆ ಮೌನ?: ಕಾಂಗ್ರೆಸ್ ಪ್ರಶ್ನೆ (Shashi Tharoor | Reddy brothers | BJP | Karnataka)
Bookmark and Share Feedback Print
 
ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಶಶಿ ತರೂರ್ ರಾಜೀನಾಮೆ ಪಡೆದುಕೊಳ್ಳುವ ಮೂಲಕ ನೈತಿಕವಾಗಿ ಬೀಗುತ್ತಿರುವ ಕಾಂಗ್ರೆಸ್ ಇದೀಗ ಕರ್ನಾಟಕದ ಬಿಜೆಪಿಯ ಕಳಂಕಿತ ಸಚಿವರಾದ ರೆಡ್ಡಿ ಸಹೋದರರ ರಾಜೀನಾಮೆಗೆ ಆಗ್ರಹಿಸುತ್ತಿದೆ.

ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಆರೋಪಗಳನ್ನು ಎದುರಿಸುತ್ತಿರುವ ಪ್ರವಾಸೋದ್ಯಮ ಮತ್ತು ಮೂಲಭೂತ ಸೌಕರ್ಯಗಳ ಸಚಿವ ಜನಾರ್ದನ ರೆಡ್ಡಿ ಮತ್ತು ಅವರ ಹಿರಿಯ ಸಹೋದರ, ಕಂದಾಯ ಸಚಿವ ಕರುಣಾಕರ ರೆಡ್ಡಿಯವರ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸುತ್ತಿದೆ. ಇದರೊಂದಿಗೆ ಐಪಿಎಲ್ ಕೊಚ್ಚಿ ವಿವಾದಕ್ಕೆ ಸಂಬಂಧಪಟ್ಟಂತೆ ತರೂರ್ ರಾಜೀನಾಮೆಗೆ ಭಾರೀ ಒತ್ತಡ ಹೇರಿದ್ದ ಬಿಜೆಪಿ ತೀವ್ರ ಒತ್ತಡಕ್ಕೆ ಸಿಲುಕಿದೆ.

ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ತಮ್ಮ ಓಬಳಾಪುರಂ ಮೈನಿಂಗ್ ಕಂಪನಿ ಮೂಲಕ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಕರ್ನಾಟಕದ ಇಬ್ಬರೂ ಸಚಿವರನ್ನು ಇನ್ನೂ ಯಾಕೆ ಬಿಜೆಪಿ ಇಟ್ಟುಕೊಂಡಿದೆ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಪ್ರಶ್ನಿಸಿದ್ದಾರೆ.

ರೆಡ್ಡಿ ಸಹೋದರರು ನಡೆಸುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಇತ್ತೀಚೆಗಷ್ಟೇ ರಾಷ್ಟ್ರೀಯ ದಿನಪತ್ರಿಕೆಯೊಂದು ಸರಣಿ ಲೇಖನಗಳನ್ನು ಮುಖಪುಟದಲ್ಲೇ ಪ್ರಕಟಿಸಿತ್ತು. ಕಬ್ಬಿಣದ ಅದಿರಿಗಾಗಿ ಭೂಮಿಯನ್ನು ಬರಡುಗೊಳಿಸುತ್ತಿರುವ ಇವರ ಬಗ್ಗೆ ಇಷ್ಟಾದರೂ ಬಿಜೆಪಿ ಚಕಾರವೆತ್ತುತ್ತಿಲ್ಲವೇಕೆ ಎಂದಿರುವ ಸಿಂಘ್ವಿ, ತರೂರ್ ವಿರುದ್ಧ ಆರೋಪಗಳು ಬಂದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಹೇಗೆ ನಡೆದುಕೊಂಡಿದೆ ಎಂಬುದನ್ನು ಒತ್ತಿ ಹೇಳಿದ್ದಾರೆ.

'The Independent Republic of Reddys' ಎಂಬ ಶೀರ್ಷಿಕೆಯಡಿಯಲ್ಲಿ 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯು 2010ರ ಮಾರ್ಚ್ 17ರಿಂದ ನಾಲ್ಕು ಕಂತುಗಳಲ್ಲಿ ರೆಡ್ಡಿ ಸಹೋದರರ ಅಕ್ರಮ ಗಣಿಗಾರಿಕೆ ಕುರಿತು ವರದಿಗಳನ್ನು ಪ್ರಕಟಿಸಿತ್ತು. ರೆಡ್ಡಿ ಸಹೋದರರು ಯಾವ ರೀತಿ ನಿಯಮಗಳನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಂಡಿದ್ದಾರೆ, ಕಾನೂನನ್ನು ಉಲ್ಲಂಘಿಸಿದ್ದಾರೆ ಎಂದು ವರದಿ ವಿವರಣೆ ನೀಡಿತ್ತು.

ಸಮರ್ಥಿಸಿಕೊಂಡ ಬಿಜೆಪಿ...
ಕಾಂಗ್ರೆಸ್ ವಕ್ತಾರ ಸಿಂಘ್ವಿ ಪ್ರಶ್ನೆಗಳಿಗೆ ಉತ್ತರಿಸಿರುವ ಬಿಜೆಪಿ ವಕ್ತಾರ ರವಿ ಶಂಕರ್ ಪ್ರಸಾದ್, ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿರುವುದರಿಂದ ರೆಡ್ಡಿ ಸಹೋದರರ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ತರೂರ್ ವಿರುದ್ಧ ಕ್ರಮ ಕೈಗೊಳ್ಳಲು ಕಾಂಗ್ರೆಸ್ ನೇತೃತ್ವದ ಸರಕಾರವು ಒಂದು ಸಮಿತಿಯನ್ನು ರಚಿಸಿ, ಅದರ ವರದಿಗಾಗಿ ಕಾಯುತ್ತಿದ್ದರೆ ಹೇಗಿರುತ್ತದೆ, ಅದೇ ರೀತಿ ನ್ಯಾಯಾಲಯದ ತೀರ್ಪಿಗಾಗಿ ನಾವು ಕಾಯುತ್ತಿದ್ದೇವೆ. ಆದರೆ ಇಂದು ತರೂರ್ ವಿರುದ್ಧ ಕಾಂಗ್ರೆಸ್ ಕೈಗೊಂಡಿರುವ ಕ್ರಮದಿಂದ ಆ ಪಕ್ಷದ ವಿಶ್ವಾಸಾರ್ಹತೆ ಹೆಚ್ಚಿದೆ ಎಂದು ಇದೇ ಸಂದರ್ಭದಲ್ಲಿ ಪ್ರಸಾದ್ ಶ್ಲಾಘಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ