ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಐಪಿಎಲ್, ಬಿಸಿಸಿಐ ಸರಕಾರದ ವಶಕ್ಕೆ: ಸಂಸದರ ಆಗ್ರಹ (IPL | BCCI | Lalu Prasad Yadav | Lalit Modi)
Bookmark and Share Feedback Print
 
ಐಪಿಎಲ್‌ನಲ್ಲಿ ಭಾರೀ ಪ್ರಮಾಣದ ಕಪ್ಪು ಹಣ ಹರಿದಾಡುತ್ತಿದೆ. ಐಪಿಎಲ್ ಮತ್ತು ಬಿಸಿಸಿಐಗಳಿಂದಾಗಿ ದೇಶೀಯ ಕ್ರೀಡೆಗಳು ನಾಶವಾಗುತ್ತಿದ್ದು, ಇವುಗಳ ಮೇಲೆ ನಿಷೇಧ ಹೇರಿ ಸರಕಾರದ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಎಡರಂಗ, ಸಮಾಜವಾದಿ ಮತ್ತು ಆರ್‌ಜೆಡಿ ಪಕ್ಷಗಳು ಲೋಕಸಭೆಯಲ್ಲಿಂದು ಕೇಂದ್ರ ಸರಕಾರವನ್ನು ಆಗ್ರಹಿಸಿವೆ.

ಅಧಿವೇಶನ ಆರಂಭವಾದಾಗಿನಿಂದ ಕಲಾಪದ ಸಮಯವನ್ನು ನುಂಗಿ ಹಾಕುತ್ತಿರುವ ಐಪಿಎಲ್ ವಿವಾದ ಶಶಿ ತರೂರ್ ರಾಜೀನಾಮೆಯ ನಂತರವೂ ಕೊನೆಗೊಳ್ಳದೆ, ಇಂದೂ ಮುಂದುವರಿದಿದ್ದು ಐಪಿಎಲ್ ಅಕ್ರಮಗಳು ಮತ್ತು ಜೂಜಾಟದ ಕುರಿತು ಸಿಬಿಐ ತನಿಖೆ ನಡೆಸುವಂತೆ ಪ್ರತಿಪಕ್ಷಗಳು ಒತ್ತಾಯಿಸಿ ಲೋಕಸಭೆಯಲ್ಲಿ ಕೋಲಾಹಲ ಎಬ್ಬಿಸಿವೆ.

ಐಪಿಎಲ್ ಟೂರ್ನಮೆಂಟನ್ನೇ ರದ್ದುಗೊಳಿಸಬೇಕೆಂದು ಆಗ್ರಹಿಸಿದ್ದು ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್. ಇದೇ ವಿಚಾರದ ಕುರಿತು ಸರಕಾರದ ಮೇಲೆ ವಾಗ್ದಾಳಿ ನಡೆಸುವಾಗ ಲಾಲೂ ಅವರಿಗೆ ಎಡಪಕ್ಷಗಳೂ ಬೆಂಬಲ ನೀಡಿದವು. ಅದೇ ಹೊತ್ತಿಗೆ ಜೂಜಾಟವನ್ನು ವೈಭವೀಕರಿಸುವಲ್ಲಿ ಬಿಜೆಪಿ ನಾಯಕರು ಐಪಿಎಲ್ ಮುಖ್ಯಸ್ಥ ಲಲಿತ್ ಮೋದಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಅತ್ತ ಕಾಂಗ್ರೆಸ್ ಆರೋಪಿಸಿತು.

ಲೀಗ್‌ನಲ್ಲಿ ಕಪ್ಪು ಹಣ ಹರಿದಾಡುತ್ತಿದೆ ಎಂದು ಕೆಳಮನೆಯಲ್ಲಿ ಆರೋಪಿಸಿದ ಮಾಜಿ ರೈಲ್ವೇ ಸಚಿವರು, ಬಿಸಿಸಿಐ ಮತ್ತು ಐಪಿಎಲ್‌ಗಳೆರಡನ್ನೂ ಕ್ರೀಡಾ ಸಚಿವಾಲಯವು ತನ್ನ ವಶಕ್ಕೆ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಕ್ರಿಕೆಟ್‌ನಲ್ಲಿ ಅದರಲ್ಲೂ ಐಪಿಎಲ್‌ನಲ್ಲಿ ಭಾರೀ ಪ್ರಮಾಣದ ಬೆಟ್ಟಿಂಗ್ ನಡೆಯುತ್ತಿದೆ. ಹಾಗಾಗಿ ಸರಕಾರವು ಐಪಿಎಲ್ ಮತ್ತು ಬಿಸಿಸಿಐಗಳನ್ನು ವಜಾಗೊಳಿಸಿ, ಎರಡೂ ಸಂಸ್ಥೆಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಬೇಕು ಎಂಬ ಲಾಲೂ ಒತ್ತಾಯಕ್ಕೆ ಸಿಪಿಎಂ ನಾಯಕಿ ಬೃಂದಾ ಕಾರಟ್ ದನಿಗೂಡಿಸುತ್ತಾ, ಐಪಿಎಲ್ ವಿವಾದಕ್ಕೆ ಸಂಬಂಧಪಟ್ಟಂತೆ ತರೂರ್ ರಾಜೀನಾಮೆ ಮಾತ್ರ ಸಾಲದು; ಈ ಕುರಿತು ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸುವಂತೆ ಒತ್ತಾಯಿಸಿದರು.

ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಕೂಡ ಐಪಿಎಲ್ ವಿರುದ್ಧ ಕಠಿಣ ಪದಗಳನ್ನು ಬಳಸಿದರು. ವಿದೇಶಿ ಕ್ರೀಡೆಯಾದ ಕ್ರಿಕೆಟನ್ನು ದೇಶದಲ್ಲಿ ನಿಷೇಧಿಸಬೇಕು ಎಂದು ಒತ್ತಾಯಿಸಿರುವ ಅವರು, ಕ್ರಿಕೆಟ್‌ನಿಂದಾಗಿ ದೇಶದ ಕ್ರೀಡೆಗಳು ನಾಶವಾಗುತ್ತಿವೆ. ಅವುಗಳ ರಕ್ಷಣೆಗಾಗಿ ಮತ್ತು ದೇಶದ ಸುಭಿಕ್ಷೆಗಾಗಿ ಐಪಿಎಲ್ ನಿಷೇಧಿಸಬೇಕು ಎಂದರು.

ಐಪಿಎಲ್ ವಿರುದ್ಧದ ವಾಗ್ದಾಳಿ ಕೇವಲ ವಿರೋಧ ಪಕ್ಷಗಳಿಗೆ ಸೀಮಿತವಾಗಿರಲಿಲ್ಲ. ಸ್ವತಃ ಆಡಳಿತ ಪಕ್ಷ ಕಾಂಗ್ರೆಸ್‌ನ ಹಿರಿಯ ನಾಯಕ ವಯಲಾರ್ ರವಿ ಕೂಡ ಟೀಕಾ ಪ್ರಹಾರ ನಡೆಸಿದ್ದಾರೆ. ಐಪಿಎಲ್ ಜೂಜಾಟವನ್ನು ಪ್ರೋತ್ಸಾಹಿಸುತ್ತಿದೆ ಎನ್ನುವುದು ಅವರ ಆರೋಪ. ಅಲ್ಲದೆ ಬಿಜೆಪಿ ನಾಯಕರು ಲಲಿತ್ ಮೋದಿ ಜತೆ ಸಂಬಂಧ ಹೊಂದಿದ್ದು, ಈ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ