ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಶಶಿ ತರೂರ್ ರಾಜೀನಾಮೆ ಪಡೆದುಕೊಂಡ ನಂತರ ಕರ್ನಾಟಕದ ಗಣಿ ರೆಡ್ಡಿ ಸಚಿವರುಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದ ಕಾಂಗ್ರೆಸ್ ಪಕ್ಷ ಬಿಜೆಪಿಯ ಬೆನ್ನು ಬಿಡುವಂತೆ ಕಾಣುತ್ತಿಲ್ಲ.
ಕಾಂಗ್ರೆಸ್ ಯಾವತ್ತೂ ಗರಿಷ್ಠ ನೈತಿಕ ನೆಲೆಯನ್ನು ಉಳಿಸಿಕೊಂಡು ಬಂದಿದೆ. ಆದರೆ ಬಿಜೆಪಿಗೆ ಅದು ಏನೆಂದೇ ಗೊತ್ತಿಲ್ಲ. ಬಂಗಾರು ಲಕ್ಷ್ಮಣ್ ಕಾರ್ಯಾಚರಣೆ, ಟೆಹೆಲ್ಕಾ ಬಯಲು ಮಾಡಿದ ಜಾರ್ಜ್ ಫೆರ್ನಾಂಡಿಸ್‌ರ ಹಗರಣ ಅಥವಾ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳ ವಿರುದ್ಧ ಅದು ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂದು ಕಾಂಗ್ರೆಸ್ ವಕ್ತಾರೆ ಜಯಂತಿ ನಟರಾಜನ್ ಪ್ರಶ್ನಿಸಿದ್ದಾರೆ.
ಸೋಮವಾರ ಸಂಸತ್ ಭವನದ ಹೊರಗಡೆ ಮಾತನಾಡುತ್ತಿದ್ದ ಅವರು, ಬಿಜೆಪಿ ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ನಡೆದ ಬರಾಕ್ ಕ್ಷಿಪಣಿ ಹಗರಣದ ಕುರಿತು ತನ್ನ ಮೈತ್ರಿಕೂಟದ ಸಚಿವರ ವಿರುದ್ಧ ಯಾವ ಕ್ರಮ ಕೈಗೊಂಡಿತ್ತು?; ಬಿಜೆಪಿಯ ಹಲವು ನಾಯಕರು ಭಾಗವಹಿಸಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಹೇಗೆ ನಡೆದುಕೊಂಡಿದೆ ಎಂದು ಕುಟುಕಿದರು.
ಐಪಿಎಲ್ ಫ್ರಾಂಚೈಸಿಯಲ್ಲಿನ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಪಟ್ಟಂತೆ ಸಚಿವ ತರೂರ್ ಅವರ ರಾಜೀನಾಮೆಯನ್ನು ಕಾಂಗ್ರೆಸ್ ಪಡೆದುಕೊಂಡಿರುವುದರಿಂದ ಬಿಜೆಪಿ ತನ್ನ ವಾದವನ್ನು ಸಮರ್ಥಿಸಿಕೊಳ್ಳಬಹುದೇ ಎಂದಾಗ ಮತ್ತೆ ಬಿಜೆಪಿ ಮೇಲೆ ದಾಳಿ ನಡೆಸಿದ ನಟರಾಜನ್, 'ಟೀಕೆ ಮಾಡುವುದರಲ್ಲಿ ಬಿಜೆಪಿ ಮುಂದು. ಆದರೆ ಯಾವತ್ತೂ ಅದು ಕ್ರಮ ಕೈಗೊಳ್ಳುವುದಿಲ್ಲ' ಎಂದರು.
ಇದಕ್ಕೆ ಅತ್ಯುತ್ತಮ ಉದಾಹರಣೆ ಕರ್ನಾಟಕ ಸರಕಾರದಲ್ಲಿ ಸಚಿವ ಸ್ಥಾನವನ್ನು ಅಲಂಕರಿಸಿರುವ ರೆಡ್ಡಿ ಸಹೋದರರು. ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬುದು ಖಚಿತವಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಪುರಸ್ಕರಿಸಲಾಗುತ್ತಿದೆ ಎಂದು ಪ್ರತಿಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.