ಭಾರತದಲ್ಲಿ ಸುಮಾರು 28,000 ಲೈಂಗಿಕ ಕಾರ್ಯಕರ್ತೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಲ್ಲಿ ಶೇ.36ರಷ್ಟು ಅಂದರೆ 10,080 ಅಪ್ರಾಪ್ತ ವಯಸ್ಸಿನವರೂ ಸೇರಿದ್ದಾರೆ ಎಂದು ರಾಜ್ಯಸಭೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.
ಆರ್ಥಿಕ ದುಸ್ಥಿತಿ, ಹೆಚ್ಚಾಗಿರುವ ಗ್ರಾಹಕರು, ಅನಕ್ಷರತೆ, ಉದ್ಯೋಗ ಜ್ಞಾನದ ಕೊರತೆ, ವಲಸೆ, ಹೆತ್ತವರ ನಿರ್ಲಕ್ಷ್ಯ ಮತ್ತು ಗಂಡನಿಂದ ಬೇರ್ಪಟ್ಟಿರುವುದು ಮುಂತಾದ ಸಾಮಾನ್ಯ ಅಂಶಗಳಿಂದಾಗಿ ಅಪ್ರಾಪ್ತ ಬಾಲಕಿಯರು ಮತ್ತು ಮಹಿಳೆಯರು ವೇಶ್ಯಾವೃತ್ತಿಗೆ ತಳ್ಳಲ್ಪಡುತ್ತಾರೆ ಎಂದು 2003-04ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ನಡೆಸಿದ ಅಧ್ಯಯನ ತಿಳಿಸಿದೆ.
ಮಾನವ ಕಳ್ಳಸಾಗಾಟವನ್ನು ತಡೆಯಲು ಗ್ರಾಮ ಪಂಚಾಯತ್‌ಗಳಿಗೆ ಯಾವುದೇ ನೇರ ಪಾತ್ರಗಳನ್ನು ನೀಡಲಾಗಿಲ್ಲ. ಆದರೆ ಇಂತಹ ಕಳ್ಳಸಾಗಣೆಯನ್ನು ತಡೆಯಲು ಸಮುದಾಯ ವಿಚಕ್ಷಣಾ ಗುಂಪುಗಳನ್ನು ಅಸ್ತಿತ್ವಕ್ಕೆ ತರಲು 'ಉಜ್ವಲ' ಎಂದು ಹೆಸರಿಸಲಾಗಿರುವ ವಿಶೇಷ ಯೋಜನೆಯಡಿ ಆರ್ಥಿಕ ಸಹಕಾರವನ್ನು ನೀಡಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಕೃಷ್ಣಾ ತಿರಾತ್ ಲಿಖಿತ ಉತ್ತರ ನೀಡಿದ್ದಾರೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗದ ಪ್ರಕಾರ 2007-08ರ ಸಾಲಿನಲ್ಲಿ ಅಕ್ರಮ ಕಳ್ಳಸಾಗಾಟ ತಡೆ ಕಾಯ್ದೆಯಡಿಯಲ್ಲಿ 2,884 ಮಂದಿ ತಪ್ಪಿತಸ್ಥರು ಎಂಬುದು ಸಾಬೀತಾಗಿದೆ ಎಂದು ಆಕೆ ತಿಳಿಸಿದ್ದಾರೆ.
ಇದನ್ನು ತಡೆಯಲು ಪ್ರತ್ಯೇಕ ಪೊಲೀಸ್ ಪಡೆಯನ್ನು ರಚಿಸುವ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದಿರುವ ಸಚಿವೆ, ಬಿಹಾರ, ಆಂಧ್ರಪ್ರದೇಶ, ಗೋವಾ ಮತ್ತು ಪಶ್ಚಿಮ ಬಂಗಾಲಗಳಲ್ಲಿ ಮಾದಕ ದ್ರವ್ಯ ಮತ್ತು ಅಪರಾಧ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಕಚೇರಿ ಮತ್ತು ಕೇಂದ್ರ ಗೃಹ ಸಚಿವಾಲಯಗಳ ಕಾನೂನು ಜಾರಿ ನಿರ್ದೇಶನಾಲಯಗಳ ಜಂಟಿ ಯೋಜನೆಯಡಿಯಲ್ಲಿ ಒಂಬತ್ತು ಏಕೀಕೃತ ಮಾನವ ಕಳ್ಳಸಾಗಣೆ ತಡೆ ಘಟಕಗಳು ಕಾರ್ಯಾಚರಿಸುತ್ತಿವೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ತಮಿಳುನಾಡು ಮತ್ತು ಬಿಹಾರ ಸರಕಾರಗಳು ಕ್ರಮವಾಗಿ 38 ಮತ್ತು 21 ಮಾನವ ಕಳ್ಳಸಾಗಣೆ ತಡೆ ಘಟಕಗಳನ್ನು ಸ್ಥಾಪಿಸಿವೆ.