ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಿಜ್ಬುಲ್ ಮುಖಂಡನ ಕುಟುಂಬಕ್ಕೆ ಭಾರತೀಯ ಪಾಸ್‌ಪೋರ್ಟ್!
(Indian passports | Jammu and Kashmir | Hizb-ul-Mujahideen | Syed Salahuddin)
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದ್ದುಕೊಂಡು ಭಾರತದ ವಿರುದ್ಧ ಕಾರ್ಯಾಚರಣೆ ನಡೆಸುವ ಭಯೋತ್ಪಾದಕ ಸಂಘಟನೆ 'ಹಿಜ್ಬುಲ್ ಮುಜಾಹಿದೀನ್' ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಪತ್ನಿ ಮತ್ತು ಪುತ್ರನಿಗೆ ಭಾರತ ಪಾಸ್‌ಪೋರ್ಟ್ ನೀಡಿದೆ!
ಹಜ್ ಯಾತ್ರೆ ಕೈಗೊಳ್ಳಬೇಕೆಂಬ ಇರಾದೆಯಿಂದ ಪಾಸ್‌ಪೋರ್ಟ್‌ಗಳಿಗಾಗಿ ಸಲಾಹುದ್ದೀನ್ ಪತ್ನಿ ಮತ್ತು ಪುತ್ರ ಜಮ್ಮು-ಕಾಶ್ಮೀರ ಸರಕಾರಕ್ಕೆ ಅರ್ಜಿ ಗುಜರಾಯಿಸಿದ್ದರು. ಈ ವಿಚಾರದಲ್ಲಿ ಸ್ವತಃ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮಧ್ಯ ಪ್ರವೇಶಿಸಿದ್ದು, ಕುಟುಂಬಕ್ಕೆ ಪಾಸ್‌ಪೋರ್ಟ್‌ಗಳನ್ನು ನೀಡಲು ಆದೇಶ ನೀಡಿದ್ದಾರೆ.
PR
ವೈಯಕ್ತಿಕ ಅಥವಾ ಧಾರ್ಮಿಕ ಉದ್ದೇಶಗಳಿಗಾಗಿ ವಿದೇಶ ಪ್ರವಾಸ ಮಾಡುವ ಭಯೋತ್ಪಾದಕರ ಸಂಬಂಧಿಕರಿಗೆ ಪಾಸ್‌ಪೋರ್ಟ್ ನಿರಾಕರಿಸಬಾರದು ಎಂಬ ಜಮ್ಮು-ಕಾಶ್ಮೀರ ರಾಜ್ಯ ಸರಕಾರದ 2009ರ ಫೆಬ್ರವರಿಯಲ್ಲಿನ ನೀತಿಯಂತೆ ಈ ಬೆಳವಣಿಗೆ ನಡೆದಿದೆ.
ಉನ್ನತ ಮೂಲಗಳ ಪ್ರಕಾರ ಮುಖ್ಯಮಂತ್ರಿ ಅಬ್ದುಲ್ಲಾ ಅವರು ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ಹಾಗೂ ಯುನೈಟೆಡ್ ಜಿಹಾದ್ ಕೌನ್ಸಿಲ್ ಅಧ್ಯಕ್ಷನ ಕುಟುಂಬಿಕರು ಹಜ್ ಯಾತ್ರೆ ಕೈಗೊಳ್ಳಲು ಅಗತ್ಯವಿರುವ ಪಾಸ್‌ಪೋರ್ಟ್ ನೀಡುವ ವಿಚಾರದಲ್ಲಿ ಮಧ್ಯಪ್ರವೇಶಿಸಿದ್ದರು. ಅದರಂತೆ ಜಮ್ಮು-ಕಾಶ್ಮೀರ ಸಿಐಡಿ ಪೂರಕ ತನಿಖೆ ನಡೆಸಿ ಪಾಸ್‌ಪೋರ್ಟ್ ನೀಡಲು ಒಪ್ಪಿಗೆ ಸೂಚಿಸಿತ್ತು.
ಭಯೋತ್ಪಾದಕ ಮುಹಮ್ಮದ್ ಯೂಸುಫ್ ಶಾಹ್ ಆಲಿಯಾಸ್ ಸೈಯದ್ ಸಲಾಹುದ್ದೀನ್ ಪತ್ನಿ ತಾಜಾ ಬೇಗಂ ಮತ್ತು ಆತನ ಪುತ್ರ ಶೈದ್ ಯೂಸುಫ್ ಹಲವು ಸಮಯದ ಹಿಂದೆಯೇ ಹಜ್ ಯಾತ್ರೆಗೆಂದು ಪಾಸ್‌ಪೋರ್ಟ್‌ಗಳಿಗಾಗಿ ಅರ್ಜಿ ಸಲ್ಲಿಸಿದ್ದರೂ ಸರಕಾರ ಒಪ್ಪಿಗೆ ಸೂಚಿಸಿರಲಿಲ್ಲ.
ಈ ಇಬ್ಬರು ತಮ್ಮ ಧಾರ್ಮಿಕ ಕರ್ತವ್ಯಗಳನ್ನು ಪೂರೈಸಲು ಮಾತ್ರ ವಿದೇಶಕ್ಕೆ ತೆರಳುತ್ತಿದ್ದಾರೆ ಎಂಬುದು ಖಚಿತವಾದ ನಂತರ ಮುಖ್ಯಮಂತ್ರಿಯವರು ಪಾಸ್‌ಪೋರ್ಟ್ ನೀಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.