ನಾನೇನೂ ತಪ್ಪು ಮಾಡಿರಲಿಲ್ಲ, ಆದರೆ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ ಎಂದು ಲೋಕಸಭೆಯಲ್ಲಿ ಸ್ಪಷ್ಟನೆ ನೀಡಿರುವ ಶಶಿ ತರೂರ್, ದೇಶದ ರಾಜಕೀಯಕ್ಕೆ ನಾನು ಹೊಸಬ ಎನ್ನುವ ಮೂಲಕ ಮತ್ತಷ್ಟು ತಿಳಿದುಕೊಳ್ಳಬೇಕಿದೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ನನ್ನ ಆತ್ಮಸಾಕ್ಷಿ ಪರಿಶುದ್ಧವಾಗಿದೆ. ನಾನು ಯಾವುದೇ ರೀತಿಯಲ್ಲಿ ಅನುಚಿತ ಅಥವಾ ಅನೈತಿಕವಾಗಿ ನಡೆದುಕೊಂಡಿಲ್ಲ, ಅಂತಹಾ ಯಾವುದೇ ಕೆಲಸಗಳನ್ನೂ ನಾನು ಮಾಡಿಲ್ಲ. ಸರಕಾರಕ್ಕೆ ಮುಜುಗರ ಹುಟ್ಟಿಸಬೇಕೆಂಬ ಅಭಿಲಾಷೆಯೂ ನನಗಿಲ್ಲ. ನನ್ನ ನಿರ್ಗಮನದಿಂದಾಗಿ ಪ್ರಧಾನ ಮಂತ್ರಿ ಮತ್ತು ಸಂಪುಟವು ದೇಶ ಎದುರಿಸುತ್ತಿರುವ ಮಹತ್ವದ ಸವಾಲುಗಳ ಬಗ್ಗೆ ಗಮನ ಹರಿಸಲು ಸಾಧ್ಯವಾಗುತ್ತದೆ ಎಂದು ಇತ್ತೀಚೆಗಷ್ಟೇ ಐಪಿಎಲ್ ವಿವಾದಕ್ಕೆ ಸಂಬಂಧಪಟ್ಟಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ತರೂರ್ ಹೇಳಿಕೆ ನೀಡಿದ್ದಾರೆ.
ನಾನು ಭಾರತದ ರಾಜಕಾರಣಕ್ಕೆ ಹೊಸ ವ್ಯಕ್ತಿ. ಆದರೆ ಹಲವಾರು ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿರುವ ನಾನು ಇಂತಹ ಭ್ರಷ್ಟಾಚಾರ ಆರೋಪಗಳಿಂದ ನಿಷ್ಕಳಂಕನಾಗಿದ್ದೆ. ನನ್ನ ವಿರುದ್ಧ ಮಾಡಲಾಗಿರುವ ದುರುದ್ದೇಶಪೂರಿತ ಆರೋಪಗಳಿಂದ ತೀವ್ರವಾಗಿ ನೋವಾಗಿದೆ ಎಂದು ಹೇಳಿರುವ ತರೂರ್, ನನ್ನ ವಿರುದ್ಧ ಮಾಡಿರುವ ಆರೋಪಗಳ ಸಂಪೂರ್ಣ ತನಿಖೆ ನಡೆಸುವಂತೆ ಪ್ರಧಾನ ಮಂತ್ರಿಯವರಲ್ಲಿ ಕೇಳಿಕೊಂಡಿದ್ದೇನೆ. ನನ್ನ ವ್ಯಕ್ತಿತ್ವ ಸ್ಪಷ್ಟವಾಗಿರಬೇಕಾಗಿರುವುದು ನನಗೆ ಮುಖ್ಯ ಎಂದಿದ್ದಾರೆ.
ತನ್ನ ಗೆಳತಿ ಸುನಂದಾ ಪುಷ್ಕರ್ ಅವರಿಗೆ 70 ಕೋಟಿ ರೂಪಾಯಿ ಮೊತ್ತದ ಉಚಿತ ಶೇರುಗಳನ್ನು ಕೊಚ್ಚಿ ತಂಡದ ಮಾಲಕರು ನೀಡುವುದಕ್ಕಾಗಿ ಕೊಚ್ಚಿ ಐಪಿಎಲ್ ತಂಡ ಗೆಲ್ಲುವಲ್ಲಿ ತರೂರ್ ಭಾರೀ ಪ್ರಮಾಣದ ವಶೀಲಿಬಾಜಿ ನಡೆಸಿದ್ದರು ಎಂದು ಐಪಿಎಲ್ ಆಯುಕ್ತ ಲಲಿತ್ ಮೋದಿ ಆರೋಪಿಸಿದ್ದರು. ಇದರ ನಂತರ ತೀವ್ರ ವಿವಾದಕ್ಕೆ ಸಿಲುಕಿದ್ದ ತರೂರ್ ಭಾನುವಾರ ರಾತ್ರಿ ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ನಾನೇನೂ ತಪ್ಪು ಮಾಡಿಲ್ಲ, ನನ್ನ ಉದ್ದೇಶ ಕ್ರಿಕೆಟ್ ತಂಡವನ್ನು ತವರು ರಾಜ್ಯಕ್ಕೆ ತರುವುದು ಮಾತ್ರವಾಗಿತ್ತು. ಇದು ಕೇರಳದ ಗೆಲುವು ಎಂದು ನಾನು ಪರಿಗಣಿಸಿದ್ದೆ. ಇದಕ್ಕಾಗಿ ಸಚಿವಾಲಯವನ್ನು ನಾನು ಬಳಸಿಕೊಂಡಿರಲಿಲ್ಲ ಎಂದು ಈ ಹಿಂದೆ ತರೂರ್ ಸ್ಪಷ್ಟನೆ ನೀಡಿದ್ದರು.
ಆದರೆ ತರೂರ್ ಸ್ಪಷ್ಟನೆಗೆ ವಿರೋಧ ಪಕ್ಷಗಳು ಕಿಮ್ಮತ್ತಿನ ಬೆಲೆ ನೀಡಿರಲಿಲ್ಲ. ಇದೇ ಪರಿಸ್ಥಿತಿ ಕಾಂಗ್ರೆಸ್‌ನಲ್ಲೂ ಕಂಡು ಬಂದಿತ್ತು. ಪರಿಣಾಮ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಮಾತುಕತೆ ನಡೆಸಿ ರಾಜೀನಾಮೆ ಪಡೆದುಕೊಳ್ಳಲು ನಿರ್ಧರಿಸಿದ್ದರು.