ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಗ ಐಪಿಎಲ್ ಸೇವೆ ಮಾಡ್ತಿರೋದನ್ನು ನೋಡಕಾಗ್ತಿಲ್ಲ: ಲಾಲೂ
(Lalu Prasad Yadav | IPL | Tejaswi Yadav | Delhi Daredevils)
ತನ್ನ ಮಗ ಆಡಲು ಅವಕಾಶ ಸಿಗದೆ ಮೈದಾನದಲ್ಲಿರುವ ಆಟಗಾರರಿಗೆ ನೀರು ಮತ್ತು ಬೆವರು ಒರೆಸಿಕೊಳ್ಳಲು ಕರವಸ್ತ್ರ ಸರಬರಾಜು ಮಾಡುತ್ತಿರುವುದನ್ನು ನನ್ನಿಂದ ನೋಡಲು ಸಾಧ್ಯವಾಗುತ್ತಿಲ್ಲ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಹೇಳುವ ಮೂಲಕ ಲೋಕಸಭೆಯಲ್ಲಿ ನಗುವಿನ ಅಲೆಯನ್ನು ಉಕ್ಕಿಸಿದ್ದಾರೆ.
ಐಪಿಎಲ್ ಮತ್ತು ಬಿಸಿಸಿಐಗಳನ್ನು ಮುಟ್ಟುಗೋಲು ಹಾಕಿಕೊಂಡು ಸರಕಾರವೇ ನಡೆಸಬೇಕು ಎಂದು ನಿನ್ನೆ ಲೋಕಸಭೆಯಲ್ಲಿ ಲಾಲೂ ಪ್ರಸಾದ್ ಯಾದವ್ ಹೇಳಿದ ಹೊತ್ತಿಗೆ ತನ್ನ ಮಗ ಆಡಲು ಅವಕಾಶ ಸಿಗದೆ ಪರದಾಡುತ್ತಿರುವುದನ್ನೂ ವಿವರಿಸಿದ್ದರು.
ಐಪಿಎಲ್ ತಂಡ ಡೆಲ್ಲಿ ಡೇರ್‌ಡೆವಿಲ್ಸ್‌ನಲ್ಲಿರುವ ನನ್ನ ಮಗ ಮೈದಾನಕ್ಕೆ ಆಡಲು ಇಳಿಯಲು ಅವಕಾಶ ಸಿಗುತ್ತಿಲ್ಲ. ಆತ ಯಾದವರ ಪುತ್ರನೆಂಬ ಕಾರಣಕ್ಕೆ ಅವಕಾಶ ಸಿಗುತ್ತಿಲ್ಲವೇ? ಆತ ಅಂಗಣದಲ್ಲಿ ಆಡುತ್ತಿರುವ ಆಟಗಾರರಿಗೆ ನೀಡು ಕೊಡೋದು ಮತ್ತು ಬೆವರು ಒರೆಸಲು ಟವೆಲ್ ಕೊಂಡು ಹೋಗುವುದನ್ನು ನಾನು ನೋಡುತ್ತಿದ್ದೇನೆ. ಕರವಸ್ತ್ರ ಪೂರೈಸುವುದು ಯಾದವ ಕುಟುಂಬದ ಹುಡುಗನಿಗೆ ಹೇಳಿ ಮಾಡಿಸಿದ ಕೆಲಸವಲ್ಲ ಎಂದು ಲಾಲೂ ಹೇಳಿದ್ದರು.
ಲಾಲೂ ಅವರ ಮಗ ತೇಜಸ್ವಿ ಯಾದವ್ ಡೆಲ್ಲಿ ಡೇರ್‌ಡೆವಿಲ್ಸ್ ತಂಡದಲ್ಲಿದ್ದರೂ, ಅವರಿಗೆ ಅಂತಿಮ 11ರ ಬಳಗದಲ್ಲಿ ಇದುವರೆಗೂ ಆಡಲು ಅವಕಾಶ ಸಿಕ್ಕಿಲ್ಲ. ಈ ಹಿಂದೆ ಹಲವು ರಣಜಿ ಪಂದ್ಯಗಳಲ್ಲಿ ಅವರು ಆಡಿದ ಅನುಭವ ಹೊಂದಿದ್ದಾರೆ.
ಐಪಿಎಲ್ ವಿವಾದದ ಕುರಿತು ಚರ್ಚೆ ನಡೆಯುತ್ತಿರುವಾಗ ತನ್ನ ಮಗನ ದುರವಸ್ಥೆಯನ್ನು ಉಲ್ಲೇಖಿಸಿದ ಲಾಲೂ ನಿಜಕ್ಕೂ ಪ್ರಸ್ತಾಪಿಸಿದ್ದು ತನ್ನ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂಬ ರಾಜಕೀಯ ಟ್ರಂಪ್ ಕಾರ್ಡ್ ಎನ್ನುವುದು ವಿಶ್ಲೇಷಕರ ಅಭಿಪ್ರಾಯ.
ಇದೇ ವರ್ಷಾಂತ್ಯದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮರಳಿ ಅಧಿಕಾರ ಪಡೆದುಕೊಳ್ಳುವ ಭರವಸೆಯಿಂದಿರುವ ಅವರು, ಅದಕ್ಕಾಗಿ ತನ್ನ ವೈಯಕ್ತಿಕ ವ್ಯಥೆಯನ್ನು ತೋಡಿಕೊಳ್ಳುತ್ತಾ ಯಾದವ ಸಮಾಜಕ್ಕೊಂದು ಸಂದೇಶ ರವಾನಿಸುವ ಪರೋಕ್ಷ ಕೆಲಸವನ್ನು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.