ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇನ್ನು ಆಹಾರ ಕಲಬೆರಕೆ ಮಾಡುವವರಿಗೆ ಜೀವಾವಧಿ ಶಿಕ್ಷೆ! (Health and Family Welfare Minister | Ghulam Nabi Azad | Food Safety and Standards Act | Govt)
ಆಹಾರ ವಸ್ತುಗಳಲ್ಲಿ ಕಲಬೆರಕೆ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರಕಾರ ನೂತನ ಕಾನೂನನ್ನು ಜಾರಿಗೆ ತರುತ್ತಿದ್ದು, ಕಲಬೆರಕೆ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ಹಾಗೂ ಉತ್ಪಾದಕರಿಗೆ ಹತ್ತು ಲಕ್ಷ ರೂಪಾಯಿವರೆಗೆ ದಂಡ ಹೇರಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಂ ನಬಿ ಅಜಾದ್ ತಿಳಿಸಿದ್ದಾರೆ.
ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಅವರು, 2006ರಲ್ಲಿ ಅನುಮೋದನೆ ಪಡೆದುಕೊಂಡಿದ್ದ ಆಹಾರ ಸಂರಕ್ಷಣೆ ಮತ್ತು ಗುಣಮಟ್ಟ ಕಾಯ್ದೆ ಮುಂದಿನ 3-4 ತಿಂಗಳಲ್ಲಿ ಜಾರಿಗೆ ಬರಲಿದೆಯೆಂದು ತಿಳಿಸಿದರು.
ಆಹಾರಕ್ಕೆ ಸಂಬಂಧಿಸಿದ ಹಲವು ನಿಯಮಗಳು ಈ ಕಾನೂನಿನಲ್ಲಿದೆ. ಆಹಾರ ಸಂರಕ್ಷಣೆ ಗುಣಮಟ್ಟ ನಿಯಂತ್ರಣ ಮತ್ತು ದೇಶದಾದ್ಯಂತ ಏಕರೂಪದ ಪರವಾನಗಿ ವ್ಯವಸ್ಥೆ ಇದರಲ್ಲಿ ಒಳಗೊಂಡಿದೆ.
ಆಹಾರ ಕಾಯ್ದೆಯ 101ರ ಅಧಿನಿಯಮದಲ್ಲಿ 43ನ್ನು ಪ್ರಕಟಿಸಲಾಗಿದ್ದು, ಉಳಿದಿರುವುದನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಸಚಿವ ಅಜಾದ್ ತಿಳಿಸಿದರು.
ಕಾಯ್ದೆಗೆ ಸಂಬಂಧಪಟ್ಟ ಹಲವು ವಿಚಾರಗಳು ಆರೋಗ್ಯ ಸಚಿವಾಲಯದ ವ್ಯಾಪ್ತಿಯಲ್ಲಿ ಇರದೇ ಇದ್ದ ಕಾರಣ ಜಾರಿಗೊಳಿಸುವುದು ತಡವಾಗಿದೆ, ಆದರೆ ಈಗ ಬಹುತೇಕ ಅಂಶಗಳನ್ನು ಸರಿಪಡಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಕಲಬೆರಕೆ ಆಹಾರ ವಸ್ತುಗಳ ತಯಾರಕರಿಗೆ ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್ ಸಮಾನ ದರ್ಜೆಯ ಅಧಿಕಾರಿ ಒಂದು ಲಕ್ಷ ರೂಪಾಯಿಗಳಿಂದ 10 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸುವ ಅಂಶವೂ ಈ ನೂತನ ಕಾಯ್ದೆಯಲ್ಲಿದೆ. ಈ ಹಿಂದೆ ದಂಡವನ್ನು ನ್ಯಾಯಾಲಯ ನಿರ್ಧರಿಸಬೇಕಿತ್ತು. ಆದರೆ ಪ್ರಸಕ್ತ ಶಿಕ್ಷೆಯನ್ನು ಮಾತ್ರ ನ್ಯಾಯಾಲಯ ನಿರ್ಣಯಿಸಲಿದೆ. ಕಲಬೆರಕೆದಾರರು ಕನಿಷ್ಠ ಆರು ತಿಂಗಳಿನಿಂದ ಜೀವಾವಧಿ ಶಿಕ್ಷೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ಸಚಿವರು ವಿವರಣೆ ನೀಡಿದ್ದಾರೆ.