ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭಾರೀ ಭದ್ರತೆಯ ವೆಲ್ಲೋರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್ ಬ್ಯಾಗಿನಿಂದ ಪೊಲೀಸರು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
ಇಂದು ಬೆಳಗ್ಗೆ ದೈನಂದಿನ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಆಕೆಯ ಬಟ್ಟೆಗಳಿದ್ದ ಬ್ಯಾಗಿನಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ. ಜೈಲು ಸೂಪರಿಂಡೆಂಟ್ ರಾಜಲಕ್ಷ್ಮಿ ಮತ್ತು ಅಧಿಕಾರಿಗಳು ಮೊಬೈಲನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಕಾರಾಗೃಹ ಎಡಿಜಿಪಿ ಕೆ.ಆರ್. ಶ್ಯಾಮ್ ಸುಂದರ್ ತಿಳಿಸಿದ್ದಾರೆ.
PTI
ಮೊಬೈಲನ್ನು ವಶಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಅದು ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿತ್ತು. ಸಂಬಂಧಪಟ್ಟವರು ಮೊಬೈಲ್ ದಾಖಲೆಗಳನ್ನು ಪರಿಶೀಲನೆ ನಡೆಸಲು ವಶಕ್ಕೆ ಪಡೆದುಕೊಂಡಿದ್ದು, ಕರೆ ಮಾಡಿದ ಮತ್ತು ಸ್ವೀಕರಿಸಿದ ವಿವರಗಳನ್ನು ಪಡೆದುಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಜೈಲು ಅಧಿಕಾರಿಗಳು ತನಿಖೆ ನಡೆಸಿದ ನಂತರ ಕಾರಾಗೃಹ ನಿಯಮಗಳನ್ನು ಉಲ್ಲಂಘಿಸಿದ ಆಕೆಯ ವಿರುದ್ಧ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ಎಡಿಜಿಪಿ ತಿಳಿಸಿದ್ದಾರೆ.
ಸಭ್ಯ ನಡತೆಯನ್ನು ಪರಿಗಣಿಸಿ ಜೀವಾವಧಿ ಶಿಕ್ಷೆಯನ್ನು ಕಡಿಮೆಗೊಳಿಸಿ ಅವಧಿಗಿಂತ ಮುಂಚೆಯೇ ಬಿಡುಗಡೆ ಮಾಡಬೇಕೆಂದು ನ್ಯಾಯಾಲಯ ಮತ್ತು ಸರಕಾರಗಳಲ್ಲಿ ಬೇಡಿಕೆ ಸಲ್ಲಿಸುತ್ತಿರುವ ನಳಿನಿಗೆ ಈ ಪ್ರಕರಣ ಹಿನ್ನಡೆಯಾಗಬಹುದು ಎಂದು ಭಾವಿಸಲಾಗಿದೆ.
ಸಿಬಿಐ ತನಿಖೆಗೆ ಆಗ್ರಹ... ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಇದನ್ನು ಸಿಬಿಐ ತನಿಖೆಗೊಳಪಡಿಸಬೇಕು ಎಂದು ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣ್ಯನ್ ಸ್ವಾಮಿ ಆಗ್ರಹಿಸಿದ್ದಾರೆ.
ಈ ನಿಗೂಢ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸಬೇಕು. ಆ ಮೊಬೈಲನಿಂದ ಯಾರಿಗೆಲ್ಲ ಕರೆ ಮಾಡಲಾಗಿದೆ ಮತ್ತು ಯಾರೆಲ್ಲ ಕರೆ ಮಾಡಿದ್ದಾರೆ ಎಂಬ ದಾಖಲೆಗಳನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು. ಅಲ್ಲದೆ ಮೊಬೈಲ್‌ನಲ್ಲಿರುವ ಸಿಮ್ ಮಾಲಕರು ಯಾರು, ಜೈಲು ಅಧಿಕಾರಿಗಳು ಇದಕ್ಕೆ ಸಮ್ಮತಿ ಸೂಚಿಸಿದ್ದರೇ ಮುಂತಾದ ವಿಚಾರಗಳು ಬಹಿರಂಗವಾಗಬೇಕು ಎಂದು ಸ್ವಾಮಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.