ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಂಧಮಾಲ್ ಹಿಂಸಾಚಾರ; ಇಬ್ಬರಿಗೆ ಜೈಲು, 20 ಮಂದಿ ಬಿಡುಗಡೆ
(Kandhamal riot case | Orissa | Vishwa Hindu Parishad | Swami Laxmanananda Saraswati)
ಕಂಧಮಾಲ್ ಕೋಮು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭುವನೇಶ್ವರದ ತ್ವರಿತ ನ್ಯಾಯಾಲಯವೊಂದು ಇಬ್ಬರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದರೆ, ಇತರ ಮೂವರನ್ನು ದೋಷಮುಕ್ತಗೊಳಿಸಿದೆ. ಶನಿವಾರವಷ್ಟೇ 17 ಆರೋಪಿಗಳನ್ನು ಇದೇ ನ್ಯಾಯಾಲಯವು ಖುಲಾಸೆಗೊಳಿಸಿತ್ತು.
2008ರ ಸೆಪ್ಟೆಂಬರ್ 30ರಂದು ರೈಕಾಲಾ ಗ್ರಾಮದ ಬಾರಿಕ್ ದಿಗಾಲ್ ಎಂಬವರ ಮನೆಗೆ ಬೆಂಕಿ ಹಚ್ಚಿದ ಆರೋಪದ ಬಂಧಿತರಾಗಿದ್ದ ನಾಗಾ ಪ್ರಧಾನ್ ಮತ್ತು ಭೀಮ್‌ಸೇನ್ ಪ್ರಧಾನ್ ಅವರು ತಪ್ಪಿತಸ್ಥರು ಎಂದು ಸಾಬೀತಾಗಿದ್ದು, ಇತರ ಮೂವರಾದ ಎನ್. ಪ್ರಧಾನ್, ನಾತಬಾರ್ ಪಂಡಾ ಮತ್ತು ಗೋವಿಂದ ಪ್ರಧಾನ್ ಅವರನ್ನು ದೋಷಮುಕ್ತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರ ಅಪರಾಧಗಳು ಸಾಬೀತಾಗಿದ್ದು, ಅವರು ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಲಿದ್ದಾರೆ. ಪುರಾವೆಗಳ ಕೊರತೆಯಿಂದಾಗಿ ಮೂವರ ಮೇಲಿನ ಆರೋಪಗಳು ಸಾಬೀತುಗೊಂಡಿಲ್ಲ ಎಂದು ಸರಕಾರಿ ವಕೀಲ ಪಿ.ಕೆ. ಪತ್ರ ತಿಳಿಸಿದ್ದಾರೆ.
ಜೈಲು ಶಿಕ್ಷೆ ಅನುಭವಿಸಲಿರುವ ಇಬ್ಬರಿಗೆ ತಲಾ 7,500 ರೂಪಾಯಿಗಳಂತೆ ದಂಡವನ್ನೂ ನ್ಯಾಯಾಲಯ ವಿಧಿಸಿದೆ.
2008ರ ಆಗಸ್ಟ್ 26ರಂದು ಶಶಿಪದರಾ ಗ್ರಾಮದಲ್ಲಿ ಹಲವು ಮನೆಗಳಿಗೆ ಬೆಂಕಿ ಹಚ್ಚಿದ ಆರೋಪದ ಮೇಲೆ 17 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಅವರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವ ಸಾಕ್ಷ್ಯಗಳ ಕೊರತೆಯಿಂದ ಎಲ್ಲಾ ಆರೋಪಿಗಳನ್ನು ದೋಷಮುಕ್ತರನ್ನಾಗಿಸಲಾಗಿದೆ ಎಂದು ನ್ಯಾಯಾಲಯ ಶನಿವಾರ ತಿಳಿಸಿತ್ತು.
ಭುವನೇಶ್ವರದಿಂದ 200 ಕಿಲೋ ಮೀಟರ್ ದೂರದಲ್ಲಿರುವ ಕಂಧಮಾಲ್ ಜಿಲ್ಲೆಯಲ್ಲಿನ ವಿಶ್ವ ಹಿಂದೂ ಪರಿಷತ್ ನಾಯಕ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಮತ್ತು ಅವರ ನಾಲ್ವರು ಸಹಚರರನ್ನು 2008ರ ಆಗಸ್ಟ್ 23ರಂದು ಜೀವಂತ ಸುಟ್ಟು ಹಾಕಿದ ಘಟನೆಯ ನಂತರ ಹಿಂಸಾಚಾರ ಭುಗಿಲೆದ್ದಿತ್ತು.
ಪರಿಣಾಮ 25,000ಕ್ಕೂ ಹೆಚ್ಚು ಕ್ರಿಶ್ಚಿಯನ್ನರು ತಮ್ಮ ಮನೆಯನ್ನು ಬಿಟ್ಟು ಇತರೆಡೆಗೆ ವಲಸೆ ಹೋಗಬೇಕಾಯಿತು. ಈ ಸಂದರ್ಭದಲ್ಲಿ ಕನಿಷ್ಠ 38 ಮಂದಿ ಗಲಭೆಗಳಿಗೆ ಬಲಿಯಾಗಿದ್ದರು.