ಮೊನ್ನೆಯವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ಕೊಚ್ಚಿ ಫ್ರಾಂಚೈಸಿಯ ಭಾಗವಾಗಿದ್ದ ಸುನಂದಾ ಪುಷ್ಕರ್ ಹೇಳಿರುವ ಮಾತಿದು. ಕ್ರಿಕೆಟ್ ಎಂದರೆ ಹಣ ಮತ್ತು ಹುಡುಗಿಯರು ಎಂದು ಎಲ್ಲವೂ ಕೈ ಮೀರಿ ಹೋದ ನಂತರ ಅವರು ತಿಳಿಸಿದ್ದಾರೆ.
ಇದಕ್ಕವರು ಬಳಸಿಕೊಂಡಿರುವುದು ಮಾಜಿ ಸಚಿವ ಹಾಗೂ ತನ್ನ ಗೆಳೆಯ ಶಶಿ ತರೂರ್ ಮಾರ್ಗವನ್ನು. ತರೂರ್ ಟ್ವಿಟ್ಟರ್‌ನಲ್ಲಿ ವಿವಾದಿತ ಹೇಳಿಕೆ ನೀಡಿದ್ದರೆ, ಇದೀಗ ಪುಷ್ಕರ್ ಫೇಸ್‌ಬುಕ್‌ನಲ್ಲಿ ಕ್ರಿಕೆಟ್ ಕುರಿತು ವ್ಯಂಗ್ಯವಾಡಿದ್ದಾರೆ.
PTI
ಕೊಚ್ಚಿ ತಂಡದ ಶೇರನ್ನು ವಾಪಸ್ ಪಡೆದ ಮರುದಿನ ಅಂದರೆ ಸೋಮವಾರ ರಾತ್ರಿ 11.40ಕ್ಕೆ ಪೋಸ್ಟ್ ಮಾಡಲಾದ ವಿವರ ಹೀಗಿದೆ. 'ಪ್ರಸಕ್ತ ನಾನು ಈ ಉದ್ಯಮದಲ್ಲಿ ಯಾವುದೇ ಆಸಕ್ತಿ ಹೊಂದಿಲ್ಲ. ಅದು ಈಗಾಗಲೇ ಕೈಮೀರಿ ಹೋಗಿದೆ ಅಂದರೆ ಎಲ್ಲವೂ ತಪ್ಪಾಗಿದೆ' ಎಂದು ಸುನಂದಾ ಹೇಳಿದ್ದರು.
ಅದಕ್ಕೂ ಹತ್ತು ನಿಮಿಷಗಳ ಮುಂಚೆ ಮಾಡಿದ್ದ ಪೋಸ್ಟ್‌ನಲ್ಲಿ, 'ಕ್ರಿಕೆಟ್ ಮತ್ತು ವ್ಯಾಪಾರದ ನಡುವಿನ ವಾಸ್ತವತೆ ಏನು... ಹಣ (ಜೂಜಾಟ) ಮತ್ತು ಹುಡುಗಿಯರ ಕುರಿತ ಆಸಕ್ತಿಯೇ ನಿಜವಾಗಿರಬಹುದು..! ಹಾಗಾಗಿ ಪ್ರತಿಯೊಬ್ಬರಿಗೂ ಇಲ್ಲಿ ಪ್ರಶ್ನೆಗಳಿರುತ್ತವೆ..' ಎಂದಿದ್ದರು.
ಅದರ ಹಿಂದಿನ ದಿನ ಅಂದರೆ ಭಾನುವಾರ, 'ಇದು ಕೇವಲ ನಾಟಕವಲ್ಲ. ನಿಜವಾದ ಯುದ್ಧ ಕ್ರಿಕೆಟ್‌ನೊಂದಿಗೆ ಭೂಗತ ಜಗತ್ತಿನ ಭಯೋತ್ಪಾದನೆಯದ್ದು. ಶಾಂತವಾಗಿರಿ, ಯಾರದ್ದಾದರೂ ತಲೆ ಶೀಘ್ರದಲ್ಲೇ ಉರುಳಲಿದೆ.. ಈಗಷ್ಟೇ ಆರಂಭವಾಗಿದೆ.. ಯಾರು ಗೆಲ್ಲುತ್ತಾರೆ?..' ಎಂದು ಬರೆದುಕೊಂಡಿದ್ದರು.
ಇದು ಸುನಂದಾ ಪುಷ್ಕರ್ ಅವರದ್ದೇ ಖಾತೆ ಎಂದು ನಂಬಲಾಗುತ್ತಿದೆ. ಆದರೂ ಸ್ವತಃ ಪುಷ್ಕರ್ ಇದರ ಬಗ್ಗೆ ಎಲ್ಲೂ ಬಹಿರಂಗವಾಗಿ ಹೇಳಿಕೊಂಡಿಲ್ಲ. ಅದರ ಪ್ರಕಾರ ಆಕೆಯ ವಾಸಸ್ಥಳ ದೆಹಲಿ, ಜೀವನ ಸ್ಥಿತಿ ವಿಧವೆ, ಫೇಸ್‌ಬುಕ್‌ನಲ್ಲಿರುವುದು ಗೆಳೆಯರಿಗಾಗಿ, ತಾನು ಓದಿದ್ದು ಜಮ್ಮುವಿನಲ್ಲಿ, ಕೆಲಸ ದುಬೈನಲ್ಲಿ ಮತ್ತು ತಾನು ಸೀನಿಯರ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಆಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಅಂದ ಹಾಗೆ ಸುನಂದಾ ಬಂದ ಎಲ್ಲಾ ಗೆಳೆತನದ ಆಹ್ವಾನಗಳನ್ನೂ ಸ್ವೀಕರಿಸುತ್ತಿಲ್ಲ. ತನಗೆ ಬೇಕಾದ ಉದ್ಯಮದ ಮಂದಿಯ ರಿಕ್ವೆಸ್ಟ್‌ಗಳನ್ನು ಮಾತ್ರ ಅಪ್ರೂವ್ ಮಾಡುತ್ತಾರೆ. 'ದಯವಿಟ್ಟು ಎಲ್ಲರೂ ನನ್ನನ್ನು ಕ್ಷಮಿಸಬೇಕು... ದಿನಂಪ್ರತಿ ನಾನು ಸಾವಿರಾರು ಗೆಳೆತನದ ಆಹ್ವಾನಗಳನ್ನು ಸ್ವೀಕರಿಸುತ್ತಿದ್ದೇನೆ. ಆದರೆ ನಾನು ಉದ್ಯಮ ಸಂಬಂಧಿ ವ್ಯಕ್ತಿಗಳನ್ನು ಅದರಲ್ಲೂ ವಿವರವಾದ ಮಾಹಿತಿಗಳನ್ನು ಹೊಂದಿರುವವರನ್ನು ಮಾತ್ರ ಪರಿಗಣಿಸುತ್ತೇನೆ.. ಹಾಗಾಗಿ ಪ್ಲೀಸ್..' ಎಂದು ಸುನಂದಾ ತಿಳಿಸಿದ್ದಾರೆ.
ಕೊಚ್ಚಿ ತಂಡ, ಕ್ರಿಕೆಟ್, ಕೇರಳ ಅಥವಾ ರೆಂಡೆಜ್ವಾಸ್ ಸ್ಪೋರ್ಸ್ಟ್ ವರ್ಲ್ಡ್ ಜತೆ ಯಾವುದೇ ರೀತಿಯ ಸಂಬಂಧ ಹೊಂದಿಲ್ಲದ ಕಾಶ್ಮೀರ ಮೂಲದ ಪ್ರಸಕ್ತ ದುಬೈಯಲ್ಲಿ ನೆಲೆಸಿರುವ ಬ್ಯೂಟೀಷಿಯನ್ ಸುನಂದಾ ಪುಷ್ಕರ್‌ಗೆ ಕೊಚ್ಚಿ ತಂಡದ ಮಾಲಕ ರೆಂಡೆಜ್ವಾಸ್ ಸ್ಪೋರ್ಸ್ಟ್ ವರ್ಲ್ಡ್ ತನ್ನ ಫ್ರೀ ಶೇರು ವಿಭಾಗದಿಂದ ಶೇ.19 ಅಂದರೆ ಸುಮಾರು 70 ಕೋಟಿ ರೂಪಾಯಿಗಳ ಉಚಿತ ಶೇರುಗಳನ್ನು ಕೊಡುಗೆಯಾಗಿ ನೀಡಿತ್ತು. ಇದರ ಹಿಂದೆ ಸುನಂದಾ ಅವರ ಗೆಳೆಯ ತರೂರ್ ಇದ್ದಾರೆ ಎಂದು ಐಪಿಎಲ್ ಆಯುಕ್ತ ಲಲಿತ್ ಮೋದಿ ಟ್ವಿಟ್ಟರ್ ಮೂಲಕ ಬಹಿರಂಗಪಡಿಸಿದ್ದರು. ಪರಿಣಾಮ ಪುಷ್ಕರ್ ತನ್ನ ಶೇರನ್ನು ತ್ಯಜಿಸಿದರೆ, ತರೂರ್ ಸಚಿವ ಸ್ಥಾನವನ್ನೇ ತ್ಯಜಿಸಬೇಕಾಯಿತು. ಅದೇ ರೀತಿಯ ಸಂಕಷ್ಟವನ್ನು ಇದೀಗ ಮೋದಿ ಕೂಡ ಎದುರಿಸುತ್ತಿದ್ದಾರೆ.