ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಂಗ್ರೆಸ್ 'ಚೇತನಾ ಯಾತ್ರೆ'ಯಲ್ಲಿ ಬಾರ್ ಬಾಲೆಯರ ನಂಗಾನಾಚ್!
(Rahu Gandhi | Chetna Yatra | Congress | Bar girls dance)
ಕಾಂಗ್ರೆಸ್ 'ಚೇತನಾ ಯಾತ್ರೆ'ಯಲ್ಲಿ ಬಾರ್ ಬಾಲೆಯರ ನಂಗಾನಾಚ್!
ಲಕ್ನೋ, ಬುಧವಾರ, 21 ಏಪ್ರಿಲ್ 2010( 11:20 IST )
ಉತ್ತರ ಪ್ರದೇಶದಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಸಭಾ ಚುನಾವಣೆಗೆ ಎರಡು ವರ್ಷ ಮೊದಲೇ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್‌ನ ಮಹತ್ವಾಕಾಂಕ್ಷೆಯ 'ಚೇತನಾ ಯಾತ್ರೆ'ಗಳಿಗೆ ಅದರ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಚಾಲನೆ ನೀಡಿರುವುದು ಹಳೆ ವಿಚಾರ. ಆದರೆ ಅಂತಹ ಯಾತ್ರೆಗಳಲ್ಲಿ ಬಾರ್ ಬಾಲೆಯರನ್ನೂ ತಂದು ಕುಣಿಸಲಾಗುತ್ತಿರುವುದು ಮಾತ್ರ ಹಾಟ್ ಸುದ್ದಿ!
ರಾಜ್ಯ ಹತ್ತಾರು ಕಡೆಗಳಲ್ಲಿ ದಲಿತರನ್ನು ಪಕ್ಷದತ್ತ ಸೆಳೆಯುವ 'ಚೇತನಾ ಯಾತ್ರೆ'ಗಳಿಗೆ ರಾಹುಲ್ ಗಾಂಧಿ ಇತ್ತೀಚೆಗಷ್ಟೇ ಚಾಲನೆ ನೀಡಿದ್ದರು. ಅದರ ಪ್ರಕಾರ ಬುಲಾಂದಶಹರ್ ಜಿಲ್ಲೆಯ ಸರವಾ ಎಂಬಲ್ಲಿ ಕೂಡ ಈ ಯಾತ್ರೆಯನ್ನು ಆಯೋಜಿಸಲಾಗಿತ್ತು. ಆದರೆ ಜನರನ್ನು ಆಕರ್ಷಿಸಲು ಅವರಿಗೆ 'ಚೈತನ್ಯ' ನೀಡಲು ಅಲ್ಲಿನ ಕಾರ್ಯಕರ್ತರು ಬಳಸಿಕೊಂಡದ್ದು ಬಾರ್ ಬಾಲೆಯರನ್ನು.
PTI
ಬುಲಾಂದಶಹರ್‌ನಲ್ಲಿನ ಕಿಸಾನ್ ಇಂಟರ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಫರ್ವೇಜ್ ಹಶ್ಮಿ ಕೂಡ ಭಾಗವಹಿಸಲಿದ್ದರು. ಆದರೆ ಭಾರೀ ಪ್ರಮಾಣದ ಜನರನ್ನು ಆಕರ್ಷಿಸುವುದು ಕಷ್ಟ ಎಂಬುದನ್ನು ಅರಿತ ಸ್ಥಳೀಯ ಕಾಂಗ್ರೆಸ್ ಮುಖಂಡರು, ಹರ್ಯಾಣದ ಇಬ್ಬರು ಬಾರ್ ಡ್ಯಾನ್ಸರುಗಳನ್ನು ಎರಡು ಲಕ್ಷ ರೂಪಾಯಿ ತೆತ್ತು ನೃತ್ಯಕ್ಕಾಗಿ ಕರೆಸಿದ್ದರು.
ಹಶ್ಮಿ ಅವರು ವೇದಿಕೆಯನ್ನೇರುವ ಮೊದಲು ಮೂರು ಗಂಟೆಗಳ ಕಾಲ ಈ ಬಾಲೆಯರು ವೇದಿಕೆಯಲ್ಲಿ ಕುಣಿದು ನೆರೆದಿದ್ದವರ ಮನ ತಣಿಸಿದ್ದರು. ಈ ಸಂದರ್ಭದಲ್ಲಿ ಪಾನಮತ್ತರಾಗಿದ್ದ ಹಲವು ಪ್ರೇಕ್ಷಕರು ಕೂಡ ವೇದಿಕೆಯನ್ನೇರಿ ನರ್ತಕಿಯರ ಜತೆ ಕುಣಿದಿದ್ದರು. ಒಟ್ಟಾರೆ ಕಾರ್ಯಕ್ರಮ ಅಶ್ಲೀಲವಾಗಿ ಮಾರ್ಪಟ್ಟಿತ್ತು.
ಕಾರ್ಯಕ್ರಮದ ಅತಿಥಿ ಹಶ್ಮಿ ಬರುತ್ತಿದ್ದಂತೆ ಡ್ಯಾನ್ಸರುಗಳು ವೇದಿಕೆಯಿಂದ ಇಳಿದಿದ್ದಾರೆ. ನಂತರ ಸ್ವಲ್ಪ ಹೊತ್ತು ಹಶ್ಮಿ ಮತ್ತಿತರ ಕಾಂಗ್ರೆಸ್ ಮುಖಂಡರ ಭಾಷಣ ಕಾರ್ಯಕ್ರಮಗಳು ನಡೆದವು ಎಂದು ವರದಿಗಳು ಹೇಳಿವೆ.
ಇದು ಬಹಿರಂಗವಾಗುತ್ತಿದ್ದಂತೆ ಮುಖ್ಯಮಂತ್ರಿ ಮಾಯಾವತಿಯವರ ಬಿಎಸ್‌ಪಿ ಪಕ್ಷವು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದೆ. ಜನರನ್ನು ಆಕರ್ಷಿಸಲು ಸಾಧ್ಯವಾಗದ ಕಾಂಗ್ರೆಸ್ ಪಕ್ಷವು ಅರೆನಗ್ನ ನೃತ್ಯಗಳನ್ನು ಆಯೋಜಿಸುವ ಮೂಲಕ ದಲಿತರನ್ನು ತನ್ನತ್ತ ಸೆಳೆಯಲು ಯತ್ನಿಸುತ್ತಿದೆ. ಆದರೆ ದಲಿತ ವಿರೋಧಿ ಕಾಂಗ್ರೆಸ್ ಇದರಲ್ಲಿ ಯಾವುದೇ ಸಫಲತೆಯನ್ನು ಕಾಣದು ಎಂದು ಟೀಕಿಸಿದೆ.
ಬಾರ್ ಬಾಲೆಯರ ಡ್ಯಾನ್ಸ್ ವಿವಾದಕ್ಕೀಡಾಗುತ್ತಿದ್ದಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಹಶ್ಮಿ ಮತ್ತು ಮಥುರಾ ಶಾಸಕ ಪ್ರದೀಫ್ ಮಧುರ್ ತೀವ್ರ ಮುಜುಗರಕ್ಕೀಡಾಗಿದ್ದು, ಇದರಲ್ಲಿ ತಮ್ಮ ಪಾತ್ರ ಏನೂ ಇಲ್ಲ ಎಂದು ಹೇಳಿದ್ದಾರೆ. ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ರೀಟಾ ಬಹುಗುಣಾ ಜೋಷಿಯವರು 'ನನಗೇನೂ ಗೊತ್ತಿಲ್ಲ' ಎಂದು ಕೈ ತೊಳೆದುಕೊಂಡಿದ್ದಾರೆ.
ಆದರೆ ಬಾರ್ ಬಾಲೆಯರನ್ನು ಕರೆಸಿದ ಸ್ಥಳೀಯ ಕಾಂಗ್ರೆಸ್ ಮುಖಂಡರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ತಾವು ನಡೆಸಿರುವುದು ಸಾಂಸ್ಕೃತಿಕ ಕಾರ್ಯಕ್ರಮ. ಈ ಸಂದರ್ಭದಲ್ಲಿ ಸ್ವಲ್ಪ ಕುಡಿದಿದ್ದ ಕೆಲವು ಮಂದಿ ಗ್ರಾಮಸ್ಥರು ವೇದಿಕೆಯನ್ನೇರಿರುವುದು ನಿಜ. ಆದರೆ ಇಲ್ಲಿ ಅಶ್ಲೀಲ ನೃತ್ಯ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.