ಬೆಲೆಯೇರಿಕೆ ನಿಯಂತ್ರಿಸದ ಕೇಂದ್ರ; ಬಿಜೆಪಿಯಿಂದ ಬೃಹತ್ ರ‌್ಯಾಲಿ
ನವದೆಹಲಿ, ಬುಧವಾರ, 21 ಏಪ್ರಿಲ್ 2010( 13:54 IST )
ಕಳೆದೆರಡು ವರ್ಷಗಳಿಂದ ಹತೋಟಿಯಿಲ್ಲದೆ ಗಗನಕ್ಕೇರುತ್ತಿರುವ ಅಗತ್ಯ ವಸ್ತುಗಳ ಬೆಲೆಯೇರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಪ್ರಮುಖ ವಿರೋಧಪಕ್ಷ ಬಿಜೆಪಿ ರಾಜಧಾನಿಯಲ್ಲಿ ಬೃಹತ್ ಪ್ರತಿಭಟನಾ ರ‌್ಯಾಲಿಯನ್ನು ಆಯೋಜಿಸಿದ್ದು, ಲಕ್ಷಾಂತರ ಮಂದಿ ಕಾರ್ಯಕರ್ತರು ಭಾಗವಹಿದ್ದಾರೆ.
ದಿನಬಳಕೆ ವಸ್ತುಗಳ ಬೆಲೆಯೇರಿಕೆಯನ್ನು ನಿಯಂತ್ರಿಸಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ಇದಕ್ಕೆ ಸರಕಾರದ ಆರ್ಥಿಕ ನೀತಿಯೇ ಕಾರಣ ಎಂದು ಬಿಜೆಪಿ ಆರೋಪಿಸಿದ್ದು, ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ನಡೆಸುತ್ತಿದೆ.
ಇದರಲ್ಲಿ ಬಿಜೆಪಿಯ ಲಕ್ಷಾಂತರ ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ. ಕರ್ನಾಟಕದಿಂದಲೂ ಸಾವಿರಾರು ಮಂದಿ ಕಾರ್ಯಕರ್ತರು ದೆಹಲಿಗೆ ತೆರಳಿದ್ದಾರೆ. ಕಾರ್ಯಕ್ರಮದಲ್ಲಿ ಬಿಜೆಪಿಯ ಅಗ್ರ ನಾಯಕರಾದ ಎಲ್.ಕೆ. ಅಡ್ವಾಣಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ರಾಜನಾಥ್ ಸಿಂಗ್ ಮುಂತಾದವರು ಪಾಲ್ಗೊಂಡಿದ್ದಾರೆ.
ನಿತಿನ್ ಗಡ್ಕರಿ ಬಿಜೆಪಿ ಅಧ್ಯಕ್ಷರಾದ ನಂತರ ನಡೆಯುತ್ತಿರುವ ಮೊದಲನೇ ಬೃಹತ್ ಪ್ರತಿಭಟನಾ ಸಮಾವೇಶ ಇದಾಗಿದ್ದು, ಸುಮಾರು ಐದು ಲಕ್ಷ ಕಾರ್ಯಕರ್ತರು ಇದಕ್ಕಾಗಿ ಆಗಮಿಸಿದ್ದಾರೆ. ಜನಸ್ತೋಮ ಮೈದಾನದತ್ತ ಬರುತ್ತಿರುವುದರಿಂದ ಮತ್ತು ರ‌್ಯಾಲಿ ನಗದಾದ್ಯಂತ ನಡೆಯುವುದರಿಂದ ಹಲವು ಕಡೆ ಟ್ರಾಫಿಕ್ ಜಾಮ್ ಸಮಸ್ಯೆಗಳು ಉದ್ಭವಿಸಿವೆ ಎಂದು ಇತ್ತೀಚಿನ ವರದಿಗಳು ಹೇಳಿವೆ.
ಪ್ರತಿಭಟನಾಕಾರರು ರಾಮಲೀಲಾ ಮೈದಾನದಲ್ಲಿ ಸಮಾವೇಶ ನಡೆಸಿದ ನಂತರ ತಮ್ಮ ರ‌್ಯಾಲಿಯನ್ನು ಆರಂಭಿಸಲಿದ್ದು, ಜಂತರ್ ಮಂತರ್‌ನಲ್ಲಿ ಕೊನೆಗೊಳ್ಳಲಿದೆ. ನಂತರ ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿಗಳಿಗೆ ಮನವಿಯನ್ನು ಸಲ್ಲಿಸಲಾಗುತ್ತದೆ.
ರಿಂಗ್ ರೋಡ್, ಮಥುರಾ ರಸ್ತೆ, ಸಿ-ಹೆಕ್ಸಾಗನ್, ತಿಲಕ್ ಮಾರ್ಗ್, ಬಹದ್ದೂರ್ ಶಾ ಜಾಫರ್ ಮಾರ್ಗ್, ಜೆಎಲ್ಎನ್ ಮಾರ್ಗ್, ಅಸಾಫ್ ಆಲಿ ರಸ್ತೆ, ನೇತಾಜಿ ಸುಭಾಷ್ ಮಾರ್ಗ್, ರಂಜಿತ್ ಸಿಂಗ್ ಮಾರ್ಗ್, ತಲ್‌ಸ್ಟೋಯ್ ಮಾರ್ಗ್, ಸಿಕಂದರಾ ರೋಡ್, ಬಾರಾ ಖಂಬಾ ರೋಡ್, ಸಂಸತ್ ಬೀದಿ ಮತ್ತು ಅಶೋಕಾ ರಸ್ತೆ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಲ್ಲಿ ರ‌್ಯಾಲಿ ಸಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ರಾಜ್ಯದಿಂದ ಸಾವಿರಾರು ಮಂದಿ... ದೆಹಲಿಯಲ್ಲಿ ನಡೆಯುತ್ತಿರುವ ರ‌್ಯಾಲಿಗೆ ಕರ್ನಾಟಕದಿಂದ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ತಿಳಿಸಿದ್ದಾರೆ.
ಈಶ್ವರಪ್ಪ, ಅನಂತ್ ಕುಮಾರ್, ಸಂಸದ ಡಿ.ವಿ. ಸದಾನಂದ ಗೌಡ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು, ಸಚಿವರುಗಳು, ಶಾಸಕರು ಈ ಪ್ರತಿಭಟನಾ ಕಾರ್ಯಕ್ರಮಕ್ಕಾಗಿ ದೆಹಲಿಗೆ ಬಂದಿದ್ದಾರೆ.