ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೇಲ್ವರ್ಗದ ಹಿಂದೂಗಳಿಗೆ ಮೀಸಲಾತಿ; ಮುಸ್ಲಿಮರಿಂದ ಆಕ್ಷೇಪ (Muslim | upper caste quota | Kerala government | forward caste)
Bookmark and Share Feedback Print
 
ಹಿಂದೂ ಸಮಾಜದ ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮೀಸಲಾತಿ ನೀಡಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮುಸ್ಲಿಂ ಸಂಘಟನೆಯೊಂದು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ.

ಇತರ ಹಿಂದುಳಿದ ವರ್ಗಗಳ (ಒಬಿಸಿ) ವಿದ್ಯಾರ್ಥಿಗಳಿಗೆ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಶೇ.27ರ ಮೀಸಲಾತಿ ನೀಡಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಎರಡು ವರ್ಷಗಳ ಹಿಂದೆ ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟ್, ಇದೀಗ ಕೇರಳ ಸರಕಾರವು ಮೇಲ್ವರ್ಗಗಳಿಗೆ ಸೇರಿದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಶೇ.10 ಮೀಸಲಾತಿ ನೀಡಿರುವ ಪ್ರಕರಣದ ವಿರುದ್ಧದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

ಮುಖ್ಯಮಂತ್ರಿ ಅಚ್ಯುತಾನಂದನ್‌ರವರ ಕೇರಳ ಸರಕಾರವು ಹಿಂದೂ ಧರ್ಮದ ಮೇಲ್ಜಾತಿಗಳನ್ನು ಓಲೈಸುತ್ತಿದೆ ಎಂದು ಆರೋಪಿಸಿರುವ ಕೇರಳ ಮುಸ್ಲಿಂ ಜಮಾತ್ ಕೌನ್ಸಿಲ್ ಸರಕಾರದ ನಿಲುವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದೆ.

ಆರ್ಥಿಕವಾಗಿ ಹಿಂದುಳಿದಿರುವ ಬಡತನ ರೇಖೆಗಿಂತ ಕೆಳಗಿರುವ ಮೇಲ್ವರ್ಗದ ವಿದ್ಯಾರ್ಥಿಗಳಿಗೆ ಪದವಿ ಮತ್ತು ಸ್ನಾತಕೋತ್ತರ ವಿಭಾಗದ ಎಲ್ಲಾ ಕೋರ್ಸ್‌ಗಳಲ್ಲಿ ಶೇ.10ರ ಮೀಸಲಾತಿ ಸೀಟುಗಳು ಹಾಗೂ ವಿಶ್ವ ವಿದ್ಯಾಲಯಗಳಲ್ಲಿ ಶೇ.7.5ರ ಮೀಸಲಾತಿ ಸೀಟುಗಳನ್ನು ನೀಡಬೇಕೆಂದು ಕೇರಳ ಸರಕಾರವು 2008ರ ಸೆಪ್ಟೆಂಬರ್ 4ರಂದು ಆದೇಶ ಹೊರಡಿಸಿತ್ತು.

ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಪ್ರಜೆಗಳಿಗೆ ಅಥವಾ ಪರಿಶಿಷ್ಟ ಜಾತಿ-ವರ್ಗಗಳವರನ್ನು ಮೇಲೆತ್ತಲು ರಾಜ್ಯಗಳು ವಿಶೇಷ ಸವಲತ್ತು ಒದಗಿಸಬಹುದೆಂಬ ಸಂವಿಧಾನದ 15(4)ನೇ ಪರಿಚ್ಛೇದವನ್ನು ಕೇರಳ ಸರಕಾರ ಉಲ್ಲಂಘಿಸಿದೆ ಎಂಬುದು ಅರ್ಜಿದಾರರ ಆರೋಪ.

ಸಂವಿಧಾನವು 'ಸಾಮಾಜಿಕ ಮತ್ತು ಶೈಕ್ಷಣಿಕವಾಗಿ' ಹಿಂದುಳಿದವರ ಏಳಿಗೆಯನ್ನು ಮಾತ್ರವೇ ಪ್ರಸ್ತಾಪಿಸಿದ್ದು, ಕೇರಳ ಸರಕಾರವು 'ಆರ್ಥಿಕವಾಗಿ ಹಿಂದುಳಿದವರನ್ನು' ಗುರುತಿಸಲು ಆರಿಸಿದ ವಿಧಾನವನ್ನಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.

ಮೇಲ್ವರ್ಗದ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಿದರೆ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯದವರಿಗೆ ದೊರೆಯುವ ಸೌಲಭ್ಯವನ್ನು ಕುಂಠಿತಗೊಳಿಸುತ್ತದೆ ಎಂದು ಈ ಮುಸ್ಲಿಂ ಸಂಘಟನೆ ಹೇಳಿದ್ದು, 'ಇದು ಬಹುಸಂಖ್ಯಾತ ಮೇಲ್ವರ್ಗದವರ ಓಲೈಕೆ' ಎಂದು ದೂರಿದೆ.
ಸಂಬಂಧಿತ ಮಾಹಿತಿ ಹುಡುಕಿ