ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕರ್ನಾಟಕ-ತಮಿಳುನಾಡು ವಿದ್ಯುತ್ ವಿವಾದ ಸುಪ್ರೀಂ ಕೋರ್ಟ್‌ಗೆ (Karnataka | Tamil Nadu | Power dispute | Supreme Court)
Bookmark and Share Feedback Print
 
ಕರ್ನಾಟಕ ಮತ್ತು ತಮಿಳುನಾಡುಗಳ ಉಚ್ಚ ನ್ಯಾಯಾಲಯಗಳು ವಿದ್ಯುತ್ ವಿವಾದಕ್ಕೆ ಸಂಬಂಧಪಟ್ಟಂತೆ ವೈರುಧ್ಯಮಯ ಆದೇಶಗಳನ್ನು ನೀಡಿರುವ ಪ್ರಕರಣವೀಗ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ.

ಏಪ್ರಿಲ್-ಮೇ ತಿಂಗಳಲ್ಲಿ ಕರ್ನಾಟಕವು ತಮಿಳುನಾಡಿಗೆ ನಿರಂತರ 300 ಮೆಗಾವ್ಯಾಟ್ ವಿದ್ಯುತ್ ಪೂರೈಸುವ ವಿಚಾರದಲ್ಲಿ ಈ ವಿವಾದ ತಲೆದೋರಿತ್ತು. ಇದೀಗ ಎರಡೂ ಸರಕಾರಗಳು ತಮ್ಮ ಪ್ರತಿಕ್ರಿಯೆಯನ್ನು ಏಪ್ರಿಲ್ 22ರೊಳಗೆ ನೀಡುವಂತೆ ಸುಪ್ರೀಂ ನಿರ್ದೇಶನ ನೀಡಿದೆ.

ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಗಂಭೀರವಾಗಿರುವ ಕಾರಣ ತಮಿಳುನಾಡಿಗೆ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಬೇಕು ಎಂದು ಅಂತಾರಾಜ್ಯ ವಿದ್ಯುತ್ ಪೂರೈಕಾ ಸಂಸ್ಥೆ 'ಜೆಎಸ್‌ಡಬ್ಲ್ಯೂ ಪವರ್ ಟ್ರೇಡಿಂಗ್ ಕಂಪನಿ'ಗೆ ಕರ್ನಾಟಕ ಸರಕಾರವು ಆದೇಶ ನೀಡಿತ್ತು. ಆದರೆ ಇದನ್ನು ತಮಿಳುನಾಡು ಸರಕಾರವು ತೀವ್ರವಾಗಿ ವಿರೋಧಿಸಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಾಲಯವು ವಿದ್ಯುತ್ ಪೂರೈಕೆಯನ್ನು ನಿಗದಿಯಂತೆ ಯಥಾ ಪ್ರಕಾರವಾಗಿ ಮುಂದುವರಿಸಬೇಕೆಂದು ಆದೇಶ ನೀಡಿತ್ತು.

ಎರಡು ಪ್ರತ್ಯೇಕ ಹೈಕೋರ್ಟ್‌ಗಳು ವೈರುಧ್ಯಮಯ ತೀರ್ಪುಗಳನ್ನು ನೀಡಿರುವುದರಿಂದ ಈ ಪ್ರಕರಣವನ್ನು ತ್ವರಿತವಾಗಿ ಬಗೆಹರಿಸುವ ಅಗತ್ಯವಿದೆ ಎಂದು ತಮಿಳುನಾಡು ಮತ್ತು ಕರ್ನಾಟಕ ಸರಕಾರಗಳು ಹೈಕೋರ್ಟ್‌ಗಳಲ್ಲಿ ಸಲ್ಲಿಸಿರುವ ಮನವಿಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ಜಿ.ಎಸ್. ಸಿಂಘ್ವಿ ಮತ್ತು ಎ.ಕೆ. ಗಂಗೂಲಿಯವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ತಿಳಿಸಿದೆ.

ಈ ವಿಚಾರದಲ್ಲಿ ಸಾಕಷ್ಟು ಸಾರ್ವಜನಿಕ ಹಿತಾಸಕ್ತಿ ಅಡಗಿದೆ. ಸಾರ್ವಜನಿಕ ನೀತಿ ಮತ್ತು ಎರಡೂ ರಾಜ್ಯಗಳ ರೈತರ ಹಿತಾಸಕ್ತಿಗಳನ್ನೂ ಇದು ಒಳಗೊಂಡಿದೆ ಎಂದು ಪೀಠವು ಅಭಿಪ್ರಾಯಪಟ್ಟಿದ್ದು, ನಾವು ಈ ಪ್ರಕರಣವನ್ನು ಸಾಧ್ಯವಾದಷ್ಟು ಬೇಗ ವಿಚಾರಣೆ ನಡೆಸುತ್ತೇವೆ. ಮನವಿ ಸಲ್ಲಿಸುವ ಸಾಮಾನ್ಯ ನಿಯಮವನ್ನು ಕೂಡ ನಾವು ಪರಿಗಣಿಸದೆ ಮುಂದುವರಿಯುತ್ತೇವೆ. ಈ ಸಂಬಂಧ ಏಪ್ರಿಲ್ 22ರಂದು ಅಂತಿಮ ವಿಚಾರಣೆ ಆರಂಭವಾಗಲಿದ್ದು, ಎರಡೂ ರಾಜ್ಯಗಳು ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸಬೇಕು ಎಂದು ಆದೇಶ ನೀಡಿದೆ.

ಅದೇ ಹೊತ್ತಿಗೆ ಪ್ರಕರಣವು ತನ್ನ ಮುಂದಿರುವುದರಿಂದ ರಾಜ್ಯ ಸರಕಾರಗಳು ಹೈಕೋರ್ಟ್‌ಗಳಲ್ಲಿ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಸಲ್ಲಿಸಬಾರದು ಎಂದೂ ಪೀಠವು ತಿಳಿಸಿದೆ.

ತಮಿಳುನಾಡಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಬೇಕೆಂದು ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶ ಮತ್ತು ವಿದ್ಯುತ್ ಪೂರೈಕೆಯನ್ನು ಮುಂದುವರಿಸಬೇಕೆಂದು ಮದ್ರಾಸ್ ಹೈಕೋರ್ಟ್ ನೀಡಿರುವ ಆದೇಶವನ್ನು ಪಾಲಿಸಲು ಸಾಧ್ಯವಾಗುತ್ತಿಲ್ಲ ಎಂದು ಅಂತಾರಾಜ್ಯ ವಿದ್ಯುತ್ ಮೇಲ್ವಿಚಾರಣೆಯ ಸರಕಾರಿ ಸಂಸ್ಥೆಯಾಗಿರುವ ದಕ್ಷಿಣ ಪ್ರಾದೇಶಿಕ ವಿದ್ಯುತ್ ವಿತರಣಾ ಕೇಂದ್ರವು (ಎಸ್ಆರ್ಎಲ್‌ಡಿಸಿ) ಏಪ್ರಿಲ್ 16ರಂದು ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿತ್ತು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ