ಚಂಡೀಗಢ: ನಿರ್ದಿಷ್ಟ ಸಮುದಾಯವೊಂದು ದಲಿತರ ಕೇರಿಗೆ ದಾಳಿ ಮಾಡಿ 15ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಿದ್ದು, ಘಟನೆಯಲ್ಲಿ ಅಂಗವಿಕಲ ದಲಿತ ಯುವತಿ ಮತ್ತು ಆಕೆಯ ತಂದೆ ಜೀವಂತವಾಗಿ ಸುಟ್ಟು ಹೋಗಿದ್ದಾರೆ.
ಇದು ನಡೆದಿರುವುದು ಹರ್ಯಾಣದ ಹಿಸಾರ್ ಜಿಲ್ಲೆಯ ಮಿರ್ಚಾಪುರ್ ಗ್ರಾಮದಲ್ಲಿ. ಬುಧವಾರ ಕೆಲವು ವ್ಯಕ್ತಿಗಳು ಸೇರಿಕೊಂಡು ಈ ಕೃತ್ಯವನ್ನೆಸಗಿದ್ದು, 18ರ ಹರೆಯದ ಯುವತಿ ಸುಮನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಆಕೆಯ ತಂದೆ 70ರ ಹರೆಯದ ತಾರಾ ಚಾಂದ್ ಶೇ.90ರಷ್ಟು ಸುಟ್ಟ ಗಾಯಕ್ಕೊಳಗಾಗಿ ನಂತರ ಆಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಎರಡು ಸಮುದಾಯಗಳ ನಡುವಿನ ಹಳೆ ದ್ವೇಷವೇ ಮತ್ತೆ ಭುಗಿಳೆದ್ದ ಪರಿಣಾಮ ಈ ಘಟನೆ ನಡೆದಿದೆ.
ಕೆಲವು ದಿನಗಳ ಹಿಂದಷ್ಟೇ ಮತ್ತೊಂದು ಸಮುದಾಯದ ಕೆಲವು ಸದಸ್ಯರು ದಲಿತ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ್ದರು. ಇದರಿಂದ ಆಕ್ರೋಶಗೊಂಡಿದ್ದ ದಲಿತರು ಎದುರಾಳಿ ಸಮುದಾಯದ ಕೆಲವು ಯುವಕರ ಮೇಲೆ ಹಲ್ಲೆ ನಡೆಸಿದ್ದರು.
ಈ ಸಂಬಂಧ ವಿವರಣೆ ನೀಡಿರುವ ಹಿಸಾರ್ ಉಪ ಆಯುಕ್ತ ಒ.ಪಿ. ಶೆರಾನ್, ಅಂಗವಿಕಲ ದಲಿತ ಯುವತಿಯೊಬ್ಬಳು ಸಜೀವ ದಹನವಾಗಿರುವುದನ್ನು ಖಚಿತಪಡಿಸಿದ್ದಾರೆ. ಆದರೆ ಎಷ್ಟು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂಬ ಸ್ಪಷ್ಟ ವಿವರಗಳು ಅವರಲ್ಲಿಲ್ಲ. ಸುಮಾರು 12ರಿಂದ 15ರಷ್ಟು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಇನ್ನಷ್ಟೇ ಹೆಚ್ಚಿನ ಮಾಹಿತಿಗಳನ್ನು ಪಡೆಯಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಿರ್ಚಾಪುರ್ ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿರುವುದರಿಂದ ಸ್ಥಳದಲ್ಲಿ ಭಾರೀ ಪ್ರಮಾಣದ ಪೊಲೀಸರನ್ನು ನಿಯೋಜಿಸಲಾಗಿದೆ. ಯಾವುದೇ ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸಲು ಅವರು ಸಿದ್ಧರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.