ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲಾಲೂ ಪ್ರಸಾದ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್ ಅವರನ್ನು ನೋಡಿಕೊಂಡಂತೆ ನನ್ನನ್ನು ನೋಡಿಕೊಳ್ಳುವ ಬದಲು ಅವಿವಾಹಿತೆಯಾಗಿರುವ ನನ್ನ ವಿರುದ್ಧ ಕೇಂದ್ರವು ಸಿಬಿಐ ಮೂಲಕ ಕಿರುಕುಳ ನೀಡುತ್ತಿದ್ದು, ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಸುಪ್ರೀಂ ಕೋರ್ಟ್‌ನಲ್ಲಿ ಹೇಳಿಕೆ ನೀಡಿದ್ದಾರೆ.
ಅನಿರ್ದಿಷ್ಟಾವಧಿಯಿಂದ ಯಾವುದೇ ಸಮರ್ಥನೆಗಳಿಲ್ಲದೆ ನನ್ನ ವಿರುದ್ಧ ಸಿಬಿಐ ತನಿಖೆಗಳನ್ನು ಮುಂದುವರಿಸುತ್ತಿದ್ದು, ದುರದೃಷ್ಟಕರವಾಗಿದೆ. ಇಂತಹುದೇ ಪ್ರಕರಣಗಳನ್ನು ಎದುರಿಸಿದ್ದ ಇತರ ಇಬ್ಬರು ನಾಯಕರಾದ ಲಾಲೂ ಪ್ರಸಾದ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್ ಅವರಂತೆ ನನ್ನನ್ನು ಪರಿಗಣಿಸದೆ ಕಿರುಕುಳ ನೀಡುತ್ತಿದ್ದು, ಕೇಂದ್ರ ಸರಕಾರವು ಸಿಬಿಐ ಮೂಲಕ ತಾರತಮ್ಯ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ನನ್ನ ಸ್ವಂತ ಆದಾಯದಿಂದ ಜೀವನ ಸಾಗಿಸುತ್ತಿರುವ ಅವಿವಾಹಿತ ಸ್ತ್ರೀ, ನನಗೂ ನನ್ನ ಕುಟುಂಬಕ್ಕೂ ಯಾವುದೇ ಆರ್ಥಿಕ ಸಂಬಂಧವಿಲ್ಲ; ನನ್ನ ಕುಟುಂಬವು ಪ್ರತ್ಯೇಕ ಆದಾಯ ತೆರಿಗೆ ಸಲ್ಲಿಸುತ್ತಿದೆ ಎಂದು ಅಫಿದಾವಿತ್‌ನಲ್ಲಿ ಹೇಳಿಕೊಂಡಿರುವ ಮಾಯಾವತಿ, ತನ್ನ ಆಸ್ತಿಯ ಕುರಿತು ಸಿಬಿಐ ತನಿಖೆ ಮುಂದುವರಿಸುತ್ತಿರುವುದು ಕಾನೂನು ಬಾಹಿರ ಎಂದೂ ಹೇಳಿದ್ದಾರೆ. ಅಲ್ಲದೆ ಇದು ರಾಜಕೀಯ ಪ್ರೇರಿತವಾಗಿದೆ ಎನ್ನುವುದು ಅವರ ಆರೋಪ.
ತಾಜ್ ಹೆರಿಟೇಜ್ ಕಾರಿಡಾರ್ ಹಗರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ 2003ರ ಅಕ್ಟೋಬರ್ ಐದರಂದು ನೀಡಿದ ಆದೇಶದ ನಂತರ ಮಾಯಾವತಿಯವರ ಅಕ್ರಮ ಆಸ್ತಿಯ ಕುರಿತು ಸಿಬಿಐ ತನಿಖೆ ಆರಂಭಿಸಿತ್ತು.
ತಾಜ್ ಕಾರಿಡಾರ್ ಹಗರಣದಲ್ಲಿ 17 ಕೋಟಿ ರೂಪಾಯಿಗಳು ತನ್ನ ಖಾತೆಗೆ ತಲುಪಿವೆ ಎಂಬುದನ್ನು ರುಜುವಾತು ಪಡಿಸಲು ಸಿಬಿಐ ವಿಫಲವಾಗಿದ್ದು, ಪ್ರಕರಣದಲ್ಲಿ ನಾನು ದೋಷಮುಕ್ತಳಾಗಿರುವುದರಿಂದ ಸಿಬಿಐ ಪ್ರಕರಣವನ್ನು ಮುಕ್ತಾಯಗೊಳಿಸಬೇಕು ಎಂದೂ ಮಾಯಾವತಿ ಆಗ್ರಹಿಸಿದ್ದಾರೆ.
ಮಾಯಾವತಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಏಪ್ರಿಲ್ 23ರಂದು ವಿಚಾರಣೆಗೆ ಸ್ವೀಕರಿಸಲಿದೆ.