ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಜೆಪಿ ಐತಿಹಾಸಿಕ ರ‌್ಯಾಲಿಗೆ ಬರದ ಮೋದಿ, ಯಡಿಯೂರಪ್ಪ
(Narendra Modi | BS Yeddyurappa | BJP price rally | New Delhi)
ಕೇಂದ್ರದ ಆರ್ಥಿಕ ನೀತಿಗಳು ಮತ್ತು ಅದರಿಂದಾಗಿ ಆಗಿರುವ ಬೆಲೆಯೇರಿಕೆ ವಿರುದ್ಧ ನಿನ್ನೆ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ನಡೆಸಿದ ಐತಿಹಾಸಿಕ ಪ್ರತಿಭಟನಾ ರ‌್ಯಾಲಿಯಲ್ಲಿ ಬಿಜೆಪಿ ಇಬ್ಬರು ಪ್ರಮುಖ ಮುಖ್ಯಮಂತ್ರಿಗಳಾದ ನರೇಂದ್ರ ಮೋದಿ ಮತ್ತು ಬಿ.ಎಸ್. ಯಡಿಯೂರಪ್ಪ ಗೈರು ಹಾಜರಾಗಿದ್ದರು.
ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿನ ಎಲ್ಲಾ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಇತರ ಅಗ್ರ ನಾಯಕರು ರ‌್ಯಾಲಿಯಲ್ಲಿ ಭಾಗವಹಿಸಬೇಕೆಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಸೂಚನೆ ನೀಡಿದ್ದರೂ, ಗುಜರಾತ್ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿರಲಿಲ್ಲ.
ಯಡಿಯೂರಪ್ಪನವರು ಸಿಂಗಾಪುರ ಪ್ರವಾಸದಲ್ಲಿದ್ದಾರೆ. ಆದರೆ ನರೇಂದ್ರ ಮೋದಿಯವರು ಯಾವ ಕಾರಣಕ್ಕಾಗಿ ಮಹತ್ವದ ರ‌್ಯಾಲಿಯಿಂದ ದೂರ ಉಳಿದಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಕಳೆದ ಹಲವು ಸಮಯದಿಂದ ಬೆಲೆಯೇರಿಕೆ ಕುರಿತು ಮೋದಿ ಕೇಂದ್ರದ ವಿರುದ್ಧ ಕಠಿಣ ಶಬ್ದಗಳಿಂದ ಟೀಕಿಸುತ್ತಿರುವುದನ್ನು ಸ್ಮರಿಸಿಕೊಳ್ಳಬಹುದಾಗಿದೆ.
ಉಳಿದಂತೆ ಛತ್ತೀಸ್‌ಗಢ ಮುಖ್ಯಮಂತ್ರಿ ರಮಣ್ ಸಿಂಗ್, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್, ಉತ್ತರಾಖಂಡ ಮುಖ್ಯಮಂತ್ರಿ ರಮೇಶ್ ಪೋಕ್ರಿಯಾಲ್, ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್ ಮೋದಿ ಮತ್ತು ಜಾರ್ಖಂಡ್ ಉಪ ಮುಖ್ಯಮಂತ್ರಿ ರಘುಬಾರ್ ದಾಸ್ ಪ್ರತಿಭಟನಾ ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ.
ಕೆ.ಎಸ್. ಈಶ್ವರಪ್ಪ, ಅನಂತ ಕುಮಾರ್, ಡಿ.ವಿ. ಸದಾನಂದ ಗೌಡ ಮುಂತಾದ ಹಲವು ಕರ್ನಾಟಕದ ನಾಯಕರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಡೆಲ್ಲಿಗರ ವಾಸಿಗಳ ಕ್ಷಮೆಯಾಚಿಸಿದ ಗಡ್ಕರಿ ಈ ನಡುವೆ ನಿನ್ನೆಯ ಪ್ರತಿಭಟನಾ ರ‌್ಯಾಲಿಯಿಂದಾಗಿ ಟ್ರಾಫಿಕ್ ಜಾಮ್ ಸಂಭವಿಸಿದ್ದರಿಂದ ಲಕ್ಷಾಂತರ ಮಂದಿ ತೊಂದರೆಗೀಡಾಗಿರುವುದಕ್ಕೆ ಪಕ್ಷದ ಅಧ್ಯಕ್ಷ ಕ್ಷಮೆಯಾಚಿಸಿದ್ದಾರೆ.
ರ‌್ಯಾಲಿಯ ಸಂದರ್ಭದಲ್ಲಿ ನಡೆದ ಟ್ರಾಫಿಕ್ ಸಮಸ್ಯೆಗಳಿಂದಾಗಿ ಸಾರ್ವಜನಿಕರಿಗೆ ಆದ ತೊಂದರೆಗೆ ಬಿಜೆಪಿ ಪರವಾಗಿ ನಾನು ಕ್ಷಮೆ ಯಾಚಿಸುತ್ತಿದ್ದೇನೆ ಎಂದು ಗಡ್ಕರಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.