ಇತ್ತೀಚೆಗೆ ಖಾಸಗಿ ಚಾನೆಲ್‌ವೊಂದರ ಸ್ವಯಂವರ ರಿಯಾಲಿಟಿ ಶೋ ಮೂಲಕ ಭಾರೀ ಪ್ರಚಾರ ಗಿಟ್ಟಿಸಿಕೊಂಡಿದ್ದ ಬಿಜೆಪಿಯ ದಿವಂಗತ ನೇತಾರ ಪ್ರಮೋದ್ ಮಹಾಜನ್ ಪುತ್ರ ರಾಹುಲ್ ಮಹಾಜನ್ ತಮ್ಮ ರಾಜಕೀಯ ಪ್ರವೇಶವನ್ನು ಖಾತ್ರಿಪಡಿಸಿದ್ದಾರೆ.
ಬಿಜೆಪಿ ನನ್ನ ರಕ್ತದಲ್ಲೇ ಇದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಾರ್ಟಿ ಟಿಕೆಟ್‌ನಲ್ಲೇ ಸ್ಪರ್ಧಿಸಲಿದ್ದೇನೆ ಎಂದು ಅವರು ಹೇಳಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ನಾನು ಸ್ಪರ್ಧೆಗಳಿಯಲಿದ್ದೇನೆ ಎಂದು ರಿಯಾಲಿಟಿ ಶೋದಲ್ಲಿ ಸೌಮಶ್ರೀ (ಡಿಂಪಿ ಗಂಗೂಲಿ)ರನ್ನು ವಿವಾಹವಾದ ಮಹಾಜನ್ ತಿಳಿಸಿದರು.
ಬಿಜೆಪಿ ನಾಯಕರಾಗಿದ್ದ ಪ್ರಮೋದ್ ಮಹಾಜನ್‌ರನ್ನು ಅವರ ಸಹೋದರ ಪ್ರವೀಣ್ ಮಹಾಜನ್ ವೈಯಕ್ತಿಕ ಕಾರಣಗಳಿಂದಾಗಿ ಗುಂಡಿಕ್ಕಿ ಕೊಲೆ ಮಾಡಿದ್ದರು. ಇತ್ತೀಚೆಗಷ್ಟೇ ಪ್ರವೀಣ್ ಕೂಡ ಬ್ರೈನ್ ಹ್ಯಾಮರೇಜ್‌ನಿಂದ ನಿಧನರಾಗಿದ್ದಾರೆ.
ವಿವಾಹ ದಾಖಲೆ ಪತ್ರವನ್ನು ಪಡೆದುಕೊಳ್ಳಲು ಜಿ-ಸೌತ್ ವಾರ್ಡ್ ಕಚೇರಿಗೆ ತನ್ನ ಪತ್ನಿಯೊಂದಿಗೆ ಬಂದಿದ್ದ ರಾಹುಲ್ ಪತ್ರಕರ್ತರೊಂದಿಗೆ ಮಾತನಾಡುತ್ತಾ ತಂದೆ ಸಕ್ರಿಯರಾಗಿದ್ದ ಪಕ್ಷದ ಮೂಲಕ ರಾಜಕೀಯ ಪ್ರವೇಶ ಮಾಡುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ವಿವಾಹ ದಾಖಲೆಯ ಸಾಕ್ಷ್ಯ ಪತ್ರಕ್ಕೆ ಎನ್‌ಡಿಟಿವಿ ಇಮ್ಯಾಜಿನ್ ಸಿಇಒ ಸಮೀರ್ ನಾಯರ್, ಸೋಲ್ ಪ್ರೊಡಕ್ಷನ್‌ನ ಸಾಜಿಲಾ ಅಲಾನಾ ಮತ್ತು ರಾಹುಲ್ ಅವರ ಮ್ಯಾನೇಜರ್ ಆಸುಜಾ ಸಯೀದ್ ಮೊಹಮ್ಮದ್ ಸಹಿ ಹಾಕಿದರು.
ಎನ್‌ಡಿಟಿವಿ ಇಮಾಜಿನ್ ನಡೆಸಿದ 'ರಾಹುಲ್ ದುಲ್ಹಾನಿಯಾ ಲೇ ಜಾಯೆಗಾ' ರಿಯಾಲಿಟಿ ಶೋದ ಮುಖಾಂತರ ರಾಹುಲ್ ಅವರು ಡಿಂಪಿಯವರನ್ನು ಮಾರ್ಚ್ 6ರಂದು ವಿವಾಹವಾಗಿದ್ದರು.