ಮಂಗಳವಾರ ಬೆಳಿಗ್ಗೆ ಆರು ಗಂಟೆ ಹೊತ್ತಿಗೆ ಕಾರಾಗೃಹದ ಸೂಪರಿಂಟೆಂಡೆಂಟ್ ಮತ್ತು ಜೈಲಿನ ಅಧಿಕಾರಿಗಳು ನನ್ನನ್ನು ಇಟ್ಟಿರುವ ಕೋಣೆಗೆ ಬಂದು ಮೊಬೈಲನ್ನು ಇಟ್ಟು ಹೋಗಿದ್ದರು. ನನಗೂ ಮೊಬೈಲಿಗೂ ಯಾವುದೇ ಸಂಬಂಧವಿಲ್ಲ ಎಂದು ವೆಲ್ಲೋರ್ ಜೈಲಿನಲ್ಲಿರುವ ನಳಿನಿ ಶ್ರೀಹರನ್ ಸ್ಪಷ್ಟಪಡಿಸಿದ್ದಾಳೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭಾರೀ ಭದ್ರತೆಯ ವೆಲ್ಲೋರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಬ್ಯಾಗಿನಿಂದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಈ ಹಿಂದೆ ಹೇಳಿದ್ದರು.
ಆದರೆ ಇದನ್ನು ನಿರಾಕರಿಸಿರುವ ನಳಿನಿ, ನನ್ನನ್ನು ಸಿಕ್ಕಿಸಿ ಹಾಕುವ ಉದ್ದೇಶದಿಂದ ಜೈಲಿನ ಅಧಿಕಾರಿಗಳು ಮತ್ತು ಪೊಲೀಸರು ರೂಪಿಸಿರುವ ಸಂಚು ಇದು. ಇದರಲ್ಲಿ ನನ್ನ ಪಾತ್ರವೇನಿಲ್ಲ. ಮೊದಲು ಮೊಬೈಲನ್ನು ನನ್ನ ಸೆಲ್‌ನಲ್ಲಿ ಇಟ್ಟು ಹೋದ ಅಧಿಕಾರಿಗಳು, ನಂತರ ನಾವು ಆಕೆಯ ಕೋಣೆಯಲ್ಲಿ ಪತ್ತೆ ಹಚ್ಚಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾಳೆಂದು ಆಕೆಯ ವಕೀಲ ಪಿ. ಪುಗಲೆಂತಿ ತಿಳಿಸಿದ್ದಾರೆ.
ಟಾಯ್ಲೆಟ್‌ಗೆ ಎಸೆದಿದ್ದಳು... ಮಂಗಳವಾರ ಬೆಳಗ್ಗೆ ದೈನಂದಿನ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ನಳಿನಿಯ ಬಟ್ಟೆಗಳಿದ್ದ ಬ್ಯಾಗಿನಲ್ಲಿ ಮೊಬೈಲ್ ಫೋನ್ ಪತ್ತೆಯಾಗಿತ್ತು.
ಮಂಗಳವಾರ ಬೆಳಗ್ಗೆ ದೈನಂದಿನ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ನಳಿನಿಯ ಬಟ್ಟೆಗಳಿದ್ದ ಬ್ಯಾಗಿನಲ್ಲಿ ಮೊಬೈಲ್ ಫೋನ್ ಪತ್ತೆಯಾಗಿತ್ತು. ಇದನ್ನು ವಶಕ್ಕೆ ಪಡೆಯುತ್ತಿದ್ದಂತೆ ಅಧಿಕಾರಿಗಳ ಕೈಯಿಂದ ಮೊಬೈಲನ್ನು ಕಸಿದುಕೊಂಡ ನಳಿನಿ ಅದನ್ನು ಹತ್ತಿರದ ಟಾಯ್ಲೆಟ್‌ಗೆ ಎಸೆದಿದ್ದಳು. ಬಳಿಕ ನೀರು ಫ್ಲಶ್ ಮಾಡಿದ್ದಳು. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಶೌಚಾಲಯದಿಂದ ಮೊಬೈಲನ್ನು ವಶಕ್ಕೆ ಪಡೆದುಕೊಂಡಿದ್ದರು. ಅದನ್ನೀಗ ಪರಿಶೀಲನೆ ನಡೆಸಲಾಗುತ್ತಿದೆ. ಆಕೆ ಯಾರಿಂದೆಲ್ಲ ಕರೆಗಳನ್ನು ಸ್ವೀಕರಿಸಿದ್ದಳು ಮತ್ತು ಯಾರಿಗೆಲ್ಲ ಕರೆ ಮಾಡಲಾಗಿತ್ತು ಎಂಬ ಕುರಿತು ತನಿಖೆ ನಡೆಯುತ್ತಿದೆ ಎಂದು ತಮಿಳುನಾಡು ಕಾನೂನು ಸಚಿವ ದುರೈಮುರುಗನ್ ವಿಧಾನಸಭೆಗೆ ತಿಳಿಸಿದ್ದಾರೆ.
ವಿದೇಶಗಳಿಗೂ ಕರೆ ಮಾಡಲಾಗಿತ್ತು... ಮೂಲಗಳ ಪ್ರಕಾರ ನಳಿನಿ ಮೊಬೈಲಿನಿಂದ ಲಂಡನ್, ಕೆನಡಾ ಸೇರಿದಂತೆ ಹಲವು ದೇಶಗಳಿಗೆ ಕರೆ ಮಾಡಲಾಗಿತ್ತು. ಲಂಡನ್ ಮತ್ತು ಕೆನಡಾಗಳಲ್ಲಿ ಕೆಲವು ತಮಿಳು ಸಂಘಟನೆಗಳು ಎಲ್‌ಟಿಟಿಇಗೆ ಪುನಶ್ಚೇತನ ನೀಡಲು ಯತ್ನಿಸುತ್ತಿರುವ ವರದಿಗಳು ಆಗಾಗ ಬರುತ್ತಿರುವುದರಿಂದ, ನಳಿನಿ ಅವರ ಜತೆ ಸಂಪರ್ಕದಲ್ಲಿದ್ದಳೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ನಳಿನಿಯ ಪುತ್ರಿ ಮೇಘರಾ ಲಂಡನ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ತನ್ನ ಗಂಡನ ಸಂಬಂಧಿಕರ ವಶದಲ್ಲಿರುವ ಆಕೆಯ ಜತೆ ಮಾತುಕತೆ ನಡೆಸಲು ಕೂಡ ಮೊಬೈಲ್ ಬಳಸಿರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ನಳಿನಿಯ ಮೊಬೈಲ್‌ನಲ್ಲಿದ್ದ ಸಿಮ್ ಚೆನ್ನೈಯಲ್ಲೇ ಖರೀದಿಸಿದ್ದು ಎಂದು ಹೆಸರು ಹೇಳಲಿಚ್ಛಿಸದ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.