ಇಂಡಿಯನ್ ಪ್ರೀಮಿಯರ್ ಲೀಗ್ ವಿವಾದದಿಂದಾಗಿ ಶಶಿ ತರೂರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕವೂ ವಿವಾದ ಮುಂದುವರಿಯುತ್ತಿದ್ದು, ಈ ಸಾಲಿಗೆ ಎನ್‌ಸಿಪಿ ನಾಯಕ ಹಾಗೂ ಕೇಂದ್ರ ವಾಯುಯಾನ ಸಚಿವ ಪ್ರಫುಲ್ ಪಟೇಲ್ ಸೇರಿಕೊಂಡಿದ್ದಾರೆ. ಅತ್ತ ಕೇಂದ್ರ ಆಹಾರ ಮತ್ತು ಕೃಷಿ ಸಚಿವ ಹಾಗೂ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಪುತ್ರಿ-ಅಳಿಯನ ಇದೇ ಸಾಲಿನಲ್ಲಿ ಹೆಸರೂ ರಾರಾಜಿಸುತ್ತಿದೆ.
ಇದು ಪ್ರಫುಲ್ ಸ್ಟೋರಿ... ತನಗೂ, ಇಂಡಿಯನ್ ಪ್ರೀಮಿಯರ್ ಲೀಗ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಸಚಿವ ಪ್ರಫುಲ್ ಪಟೇಲ್ ಹೇಳಿಕೆ ನೀಡಿದ ಬೆನ್ನಿಗೆ, ಅವರ ಆಪ್ತ ಕಾರ್ಯದರ್ಶಿ ಕಳೆದ ತಿಂಗಳು ಶಶಿ ತರೂರ್ ಅವರಿಗೆ ಸರಕಾರಿ ಇಮೇಲ್ ವಿಳಾಸದಿಂದ ಐಪಿಎಲ್‌ಗೆ ಸಂಬಂಧಿಸಿದ ಫೈಲೊಂದನ್ನು ಫಾರ್ವರ್ಡ್ ಮಾಡಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
PTI
ಐಪಿಎಲ್ ಸಿಇಒ ಸುಂದರ್ ರಾಮನ್ ಅವರು ಪ್ರಫುಲ್ ಪಟೇಲ್ ಪುತ್ರಿ ಹಾಗೂ ಐಪಿಎಲ್ ಆತಿಥ್ಯ ವ್ಯವಸ್ಥಾಪಕಿ ಪೂರ್ಣಾ ಪಟೇಲ್ ಅವರಿಗೆ ಇಮೇಲ್ ಮಾಡಿದ ಐಪಿಎಲ್ ಫ್ರಾಂಚೈಸಿ ಬಿಡ್ಡಿಂಗ್ ಕುರಿತ ಮೈಕ್ರೋಸಾಫ್ಟ್ ಎಕ್ಸೆಲ್ ಡಾಕ್ಯುಮೆಂಟ್ ಫೈಲನ್ನು ಪಟೇಲ್ ಅವರ ಆಪ್ತ ಕಾರ್ಯದರ್ಶಿ ಚಂಪಾ ಭಾರತ್ವಾಜ್ ಅವರು ತನ್ನ ಸರಕಾರಿ ಇಮೇಲ್ ವಿಳಾಸದಿಂದ ಆಗಿನ ಸಚಿವ ಶಶಿ ತರೂರ್ ಅವರ ಖಾಸಗಿ ಇಮೇಲ್ ವಿಳಾಸಕ್ಕೆ ಕಳುಹಿಸಿದ್ದರು.
ಐಪಿಎಲ್ ಸಿಇಒ ಸುಂದರ್ ರಾಮನ್ ಅವರು ಕಳುಹಿಸಿದ್ದ ಇಮೇಲನ್ನು ತನ್ನ ತಂದೆ ಹಾಗೂ ಸಚಿವ ಪಟೇಲ್ ಆಪ್ತ ಕಾರ್ಯದರ್ಶಿಗೆ ಫಾರ್ವರ್ಡ್ ಮಾಡಿರುವುದನ್ನು ಇತ್ತ ಪೂರ್ಣಾ ಪಟೇಲ್ ಒಪ್ಪಿಕೊಂಡಿದ್ದಾರೆ. ಆದರೆ ಇದಕ್ಕೆ ಕಾರಣ ರಾಮನ್ ಎಂದು ಬೆಟ್ಟು ಮಾಡಿ ತೋರಿಸಿರುವ ಪೂರ್ಣಾ, ಅವರು ಹೇಳಿದ್ದನ್ನು ಚಾಚೂ ತಪ್ಪದೆ ನಾನು ಪಾಲಿಸಿದ್ದೇನೆ ಹೊರತು ಇದರಲ್ಲಿ ನನ್ನ ಪಾತ್ರವೇನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ ಇದಕ್ಕೆ ರಾಮನ್ ವ್ಯತಿರಿಕ್ತ ಪ್ರತಿಕ್ರಿಯೆ ನೀಡಿದ್ದಾರೆ. ಐಪಿಎಲ್‌ನ ಪ್ರಮುಖ ಸದಸ್ಯೆಯಾಗಿದ್ದ ಕಾರಣ ಪೂರ್ಣಾ ಪಟೇಲ್ ಅವರಿಗೆ ಇಮೇಲ್ ಮಾಡಿದ್ದೆ. ಆದರೆ ಅವರು ಸಚಿವಾಲಯಕ್ಕೆ ಫಾರ್ವರ್ಡ್ ಮಾಡುತ್ತಾರೆಂಬ ಅರಿವು ನನಗಿರಲಿಲ್ಲ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ್ದ ಸಚಿವ ಪಟೇಲ್, ನನಗೂ ಐಪಿಎಲ್‌ಗೂ ಯಾವುದೇ ಸಂಬಂಧವಿಲ್ಲ, ನನ್ನ 24ರ ಹರೆಯದ ಮಗಳು ಅದರಲ್ಲಿ ಕೆಲಸ ಮಾಡುತ್ತಿರುವುದು ನಿಜವಾದರೂ, ಅವರು ಜೂನಿಯರ್ ಎಂಪ್ಲಾಯ್. ಐಪಿಎಲ್ ಬಿಡ್ಡಿಂಗ್ ಬಗ್ಗೆ ನನಗೇನೂ ಗೊತ್ತಿಲ್ಲ. ನನ್ನ ವಿರುದ್ಧ ಮಾಡಲಾಗಿರುವ ಆರೋಪಗಳಿಗೆ ಆಧಾರವಿಲ್ಲ ಎಂದಿದ್ದರು.
ಆದರೆ ಬುಧವಾರಕ್ಕಾಗುವಾಗ ಪಟೇಲ್ ಹೇಳಿಕೆಯಲ್ಲಿ ಅಲ್ಪ ಬದಲಾವಣೆಯಾಗಿತ್ತು. ತರೂರ್ ಅವರು ಮನವಿ ಮಾಡಿಕೊಂಡಿದ್ದರಿಂದ ತನ್ನ ಕಾರ್ಯದರ್ಶಿ ಮಾಹಿತಿಯನ್ನು ರವಾನಿಸಿದ್ದರು ಎಂದು ಹೇಳಿದ್ದರು.
ನಾನು ಮತ್ತು ಶಶಿ ತರೂರ್ ಇಬ್ಬರೂ ಆಪ್ತ ಗೆಳೆಯರು. ಕೊಚ್ಚಿ ತಂಡದ ಜತೆ ಗುರುತಿಸಿಕೊಂಡು ಒಬ್ಬ ಗೆಳೆಯನಾಗಿ ನನಗೆ ಸಹಾಯ ಮಾಡಬಹುದೇ ಎಂದು ತರೂರ್ ಕೇಳಿಕೊಂಡಿದ್ದರು. ನಾನು ಲಲಿತ್ ಮೋದಿ ಜತೆ ಮಾತುಕತೆ ನಡೆಸಿ, ಶಶಿ ಕೆಲವು ಮಾಹಿತಿಗಳನ್ನು ಬಯಸುತ್ತಿದ್ದಾರೆ ಎಂದಿದ್ದೆ. ಇದನ್ನು ಹೊರತುಪಡಿಸಿ ಬೇರೇನು ನಡೆದಿದೆ ಎಂಬುದು ನನಗೆ ತಿಳಿದಿಲ್ಲ. ನಾನೂ ಒಬ್ಬ ಬಿಡ್ಡರ್ ಆಗಿದ್ದರೆ, ಮತ್ತೊಬ್ಬ ಬಿಡ್ಡರ್‌ಗೆ ನಾನು ಯಾಕೆ ಸಹಕಾರ ನೀಡುತ್ತಿದ್ದೆ ಎಂದು ಪ್ರಶ್ನಿಸಿದ್ದಾರೆ.
ಐಪಿಎಲ್ ಎರಡನೇ ಬಾರಿಯ ತಂಡಗಳ ಹರಾಜಿನಲ್ಲಿ ತರೂರ್ ಬೆಂಬಲಿತ ಕೊಚ್ಚಿ ತಂಡ ಎರಡನೇ ಗರಿಷ್ಠ ಬಿಡ್ಡರ್ (ಮೊದಲ ಗರಿಷ್ಠ ಬಿಡ್ಡರ್ ಪುಣೆ) ಆಗಿ ಫ್ರಾಂಚೈಸಿ ಪಡೆದುಕೊಳ್ಳುವ ಎರಡು ದಿನಗಳ ಮೊದಲು ಅಂದರೆ ಮಾರ್ಚ್ 19ರಂದು ರಾತ್ರಿ 10.06 ಗಂಟೆಗೆ ಪಟೇಲ್ ಅವರ ಕಾರ್ಯದರ್ಶಿ ತರೂರ್ ಅವರಿಗೆ ಇಮೇಲ್ ಕಳುಹಿಸಿದ್ದರು. ಅದೇ ದಿನ ಅದಕ್ಕಿಂತ ಎರಡು ಗಂಟೆ ಮೊದಲು ಅದೇ ಫೈಲನ್ನು ಐಪಿಎಲ್ ಸಿಇಒ ರಾಮನ್ ಅವರು ಪಟೇಲ್ ಪುತ್ರಿಗೆ ಕಳುಹಿಸಿದ್ದರು.
ಶರದ್ ಪವಾರ್ ಪುತ್ರಿ... ಐಪಿಎಲ್ ಪಂದ್ಯಗಳ ಪ್ರಸಾರ ಹಕ್ಕುಗಳನ್ನು ಹೊಂದಿರುವ ಕಂಪನಿಯೊಂದಿಗಿನ ಒಡನಾಟದಿಂದಾಗಿ ತನ್ನ ಗಂಡ ಸದಾನಂದ ಸುಳೆ ಅಥವಾ ಅವರ ತಂದೆ ಬಿ.ಆರ್. ಸುಳೆ ಆರ್ಥಿಕವಾಗಿ ಯಾವುದೇ ರೀತಿಯ ಪ್ರಯೋಜನ ಪಡೆದುಕೊಂಡಿಲ್ಲ ಎಂದು ಕೇಂದ್ರ ಸಚಿವ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಶರದ್ ಪವಾರ್ ಅವರ ಪುತ್ರಿ ಹಾಗೂ ಸಂಸದೆ ಸುಪ್ರಿಯಾ ಸುಳೆ ಸ್ಪಷ್ಟಪಡಿಸಿದ್ದಾರೆ.
ಪ್ರಸಕ್ತ ಮಲ್ಟಿ ಸ್ಕ್ರೀನ್ ಮೀಡಿಯಾ (ಎಂಎಸ್ಎಂ) ಎಂದು ಬದಲಾಗಿರುವ 'ಸೋನಿ ಎಂಟರ್ಟೈನ್‌ಮೆಂಟ್ ಟೆಲಿವಿಷನ್' ಎಂಬ ಕಂಪನಿಯ ಭಾಗವಾಗಿರುವ 'ಅಟ್ಲಾಸ್ ಇಕ್ವಿಫಿನ್' ಸಂಸ್ಥೆಯಲ್ಲಿ ಸುಪ್ರಿಯಾ ಸುಳೆಯವರ ಮಾವ ಬಿ.ಆರ್. ಸುಳೆ ಅಲ್ಪ ಪಾಲನ್ನು ಹೊಂದಿದ್ದಾರೆಂದು ಗುರುವಾರ ಮಾಧ್ಯಮಗಳು ವರದಿ ಮಾಡಿವೆ.
ಅದೇ ಹೊತ್ತಿಗೆ ಸ್ಪಷ್ಟನೆ ನೀಡಿರುವ ಸುಪ್ರಿಯಾ ಸುಳೆ, ತನ್ನ ಮಾವ 'ಸೋನಿ ಇಂಡಿಯಾ' ಕಂಪನಿಗೆ ಒಂದು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆದರೆ ಅವರು ಅನಾರೋಗ್ಯಕ್ಕೀಡಾದ ನಂತರ ತನ್ನ ಪುತ್ರ ಸದಾನಂದ ಸುಳೆಯವರಿಗೆ ಹಕ್ಕುಗಳನ್ನು ವರ್ಗಾಯಿಸಿದ್ದಾರೆ ಎಂದಿದ್ದಾರೆ.
ಆದರೆ ಅವರು ಐಪಿಎಲ್‌ಗೆ ಸಂಬಂಧಿಸಿದ ಇತರ ಯಾವುದೇ ವ್ಯವಹಾರಗಳಲ್ಲಿ ಭಾಗಿಯಲ್ಲ. ನನ್ನ ಗಂಡ ಕೇವಲ ಕ್ರಿಕೆಟ್ ಅಭಿಮಾನಿ ಮಾತ್ರ. ಐಪಿಎಲ್‌ನಲ್ಲಿ ನನ್ನ ಕುಟುಂಬ ಒಂದೇ ಒಂದು ಪೈಸೆ ಹಣವನ್ನೂ ಹೂಡಿಕೆ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.