ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪತಿ ನಿರ್ಲಕ್ಷ್ಯ; ಮಾಜಿ ಪ್ರೇಯಸಿಯನ್ನೇ ಅಪಹರಿಸಿದ ಮಹಿಳೆ! (Woman kidnaps hubby's ex-girlfriend | Deepika Kale | Shraddha | Avdhut Kale)
Bookmark and Share Feedback Print
 
ಗಂಡ ತನ್ನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿರುವುದಕ್ಕೆ ಆತನ ಮಾಜಿ ಪ್ರೇಯಸಿಯೇ ಕಾರಣ ಎಂದುಕೊಂಡ ಮಹಿಳೆಯೊಬ್ಬಳು ಮುಂಬೈಯಿಂದ ಯುವತಿಯೊಬ್ಬಳನ್ನು ಪುಣೆಗೆ ಅಪಹರಿಸಿದ ಪ್ರಸಂಗ ವರದಿಯಾಗಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ತನ್ನನ್ನು ಮದುವೆಯಾದ ನಂತರವೂ ಮಾಜಿ ಪ್ರೇಯಸಿಯೊಂದಿಗೆ ಆಗಾಗ ದೂರವಾಣಿ ಮಾತುಕತೆ ನಡೆಸುತ್ತಿರುವುದನ್ನು ಗಮನಿಸಿದ ಪತ್ನಿ, ತನ್ನನ್ನು ಗಂಡ ನಿರ್ಲಕ್ಷಿಸುತ್ತಿರುವುದಕ್ಕೆ ಆಕೆಯೇ ಕಾರಣ ಎಂದುಕೊಂಡು ಈ ಕೃತ್ಯ ನಡೆಸಿದ್ದಾಳೆ.

ಅಪಹರಿಸಿದ ಮಹಿಳೆಯನ್ನು ಅವಧೂತ್ ಕಾಳೆ ಪತ್ನಿ ದೀಪಿಕಾ ಕಾಳೆ (23) ಎಂದು ಗುರುತಿಸಲಾಗಿದೆ. ಇದಕ್ಕಾಗಿ ತನ್ನ ಸಂಬಂಧಿ ಕೌಸ್ತುಮ್ ದೌಂಡ್ಕರ್ (20) ಜತೆ ದೀಪಿಕಾ ಮುಂಬೈಗೆ ತೆರಳಿದ್ದಳು.

ಅವರು ಅಮರ ಪ್ರೇಮಿಗಳು...
ದೀಪಿಕಾಳ ಗಂಡ ಅವಧೂತ್ ಮತ್ತು ಶ್ರದ್ಧಾ ಎಂಬ ಯುವತಿ ಕೆಲವು ವರ್ಷಗಳ ಹಿಂದೆ ಫೌಂಟೈನ್‌ನಲ್ಲಿನ ಸಿದ್ಧಾರ್ಥ್ ಕಾಲೇಜಿನಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ನಂತರ ಅವರಿಬ್ಬರ ನಡುವೆ ಪ್ರೇಮ ಮೊಳೆತಿತ್ತು. ಆದರೆ ಇದಕ್ಕೆ ಅವಧೂತ್ ಕುಟುಂಬ ಒಪ್ಪಿಗೆ ಸೂಚಿಸದೇ ಇದ್ದ ಕಾರಣ ಆತ ದೀಪಿಕಾಳನ್ನು ಮದುವೆಯಾಗಿದ್ದ.

ಆದರೆ ಮದುವೆಯ ನಂತರವೂ ತನ್ನ ಮಗಳು ಶ್ರದ್ಧಾ ಆತನೊಂದಿಗೆ ಸಂಪರ್ಕದಲ್ಲಿದ್ದಳು. ಅವರಿಬ್ಬರೂ ದೂರವಾಣಿ ಮುಖಾಂತರ ಮಾತುಕತೆ ನಡೆಸುತ್ತಿದ್ದರು ಎಂದು ಯುವತಿಯ ತಾಯಿ ಅರ್ಚನಾ ತಿಳಿಸಿದ್ದಾರೆ.

ಪಾರ್ಟಿ ಆರ್ಡರ್ ನೀಡಲು ಬಂದಿದ್ದರು...
ಮುಂಬೈಯಲ್ಲಿನ ನನ್ನ ಮನೆಗೆ ಬಂದಿದ್ದ ದೀಪಿಕಾ ಮತ್ತು ಕೌಸ್ತುಮ್, ಮನೆಯ ಹೊರಗಡೆ ನಿಂತು ಕರೆದಿದ್ದರು. ಹುಟ್ಟು ಹಬ್ಬದ ಪಾರ್ಟಿ ಆರ್ಡರ್ ನೀಡಲು ಅವರು ಬಂದಿದ್ದಾರೆ ಎಂದು ನನಗೆ ಹೇಳಲಾಯಿತು. ನಾನು ಅದೇ ಕ್ಷೇತ್ರವನ್ನು ನನ್ನ ವೃತ್ತಿಯನ್ನಾಗಿ ಆರಿಸಿಕೊಂಡಿರುವುದರಿಂದ ಈ ಕುರಿತು ಮಾತನಾಡಲೆಂದು ನನ್ನ ಆಂಟಿ ನಿರ್ಮಳಾ ಜತೆ ಹೊರಗಡೆ ಹೋದೆ ಎಂದು ಶ್ರದ್ಧಾ ಘಟನೆಯನ್ನು ವಿವರಿಸಿದ್ದಾರೆ.

ಹೋಗುತ್ತಿದ್ದಂತೆ ಕಾರಿನಲ್ಲಿ ಕುಳಿತುಕೊಳ್ಳಿ, ಮಾತನಾಡೋಣ ಎಂದು ಅವರು ಹೇಳಿದಾಗ, ನಾನು ಮತ್ತು ನಿರ್ಮಳಾ ಕಾರಿನಲ್ಲಿ ಕುಳಿತುಕೊಂಡೆವು. ಅಷ್ಟರಲ್ಲಿ ಡ್ರೈವರ್ ಕಾರಿನ ಬಾಗಿಲನ್ನು ಮುಚ್ಚಿದ್ದಲ್ಲದೆ, ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋದ. ನಂತರವಷ್ಟೇ ನನಗೆ ಕಾರಿನಲ್ಲಿದ್ದ ಓರ್ವ ಮಹಿಳೆ ಅವಧೂತ್ ಪತ್ನಿ ಎಂಬುದು ತಿಳಿದು ಬಂತು. ಅವರಿಬ್ಬರೂ ನನ್ನ ತಲೆಯನ್ನು ಹಿಡಿದು, ಥಳಿಸಲಾರಂಭಿಸಿದರು. ನಿರ್ಮಳಾ ತೀವ್ರ ಪ್ರತಿರೋಧ ತೋರಿಸಿದ್ದರಿಂದ ಅವರನ್ನು ನವಿ ಮುಂಬೈ ಬಳಿ ಇಳಿಸಿ ನನ್ನನ್ನು ಪುಣೆಗೆ ಕರೆದುಕೊಂಡು ಹೋಗಲಾಯಿತು ಎಂದು ಶ್ರದ್ಧಾ ಹೇಳಿದ್ದಾರೆ.

ನವಿ ಮುಂಬೈಯಲ್ಲಿ ಇಳಿದುಕೊಂಡ ನಿರ್ಮಳಾ ಮುಂಬೈಯ ತನ್ನ ಮನೆಗೆ ತಲುಪಿದ ನಂತರ ಪೊಲೀಸರಿಗೆ ದೂರು ನೀಡಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಮುಂಬೈ ಪೊಲೀಸರು ಪುಣೆಗೆ ತೆರಳಿದ್ದಾರೆ. ಕೇವಲ 24 ಗಂಟೆಗಳೊಳಗೆ ಪ್ರಕರಣವನ್ನು ಭೇದಿಸಿ ಯುವತಿ ಶ್ರದ್ಧಾಳನ್ನು ರಕ್ಷಿಸಿದ್ದಾರೆ.

ದೀಪಿಕಾ, ಆಕೆಗೆ ಸಹಕರಿಸಿದ ಕೌಸ್ತುಮ್ ಹಾಗೂ ಅಪಹರಣಕ್ಕೆ ಸಾಥ್ ನೀಡಿದ ಕಾರು ಚಾಲಕನನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ