ಎರಡು ವರ್ಷಗಳ ಹಿಂದೆ ಇಂಡಿಯನ್ ಮುಜಾಹಿದೀನ್ ನಡೆಸಿದ್ದ ದೆಹಲಿ ಸರಣಿ ಸ್ಫೋಟಕ್ಕೆ ಬಾಂಬ್ ತಯಾರಿಸಲು ಸ್ಫೋಟಕಗಳನ್ನು ಒದಗಿಸಿದ್ದಾನೆ ಎಂದು ಹೇಳಲಾಗಿರುವ ಉಡುಪಿಯ ಶಾರೂಖ್ ಕುರಿತು ಮಾಹಿತಿ ನೀಡಿದವರಿಗೆ ಮೂರು ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಲಾಗಿದೆ.
2008ರ ಸೆಪ್ಟೆಂಬರ್ 13ರಂದು ದೆಹಲಿಯಲ್ಲಿ ನಡೆದಿದ್ದ ಬಾಂಬ್ ಸ್ಫೋಟಗಳಲ್ಲಿ ಶಾರೂಖ್ ಎಂಬ ಹೆಸರಿನ ವ್ಯಕ್ತಿ ಪಾಲ್ಗೊಂಡಿದ್ದು, ಈತ ಕರ್ನಾಟಕದ ಉಡುಪಿ ಜಿಲ್ಲೆಯವನಾಗಿದ್ದಾನೆ ಎಂದು ದೆಹಲಿ ಪೊಲೀಸ್ ಆಯುಕ್ತ ವೈ.ಎಸ್. ದದ್ವಾಲ್ ಗುರುವಾರ ತಿಳಿಸಿದ್ದಾರೆ.
ಈತನ ಜತೆಗೆ ಉಳಿದ ಆರೋಪಿಗಳಾದ ಮೊಹಮ್ಮದ್ ಸಾಜಿದ್ (22), ಮಿರ್ಜಾ ಸಾಬಾದ್ ಬೇಗ್ (25) ಮತ್ತು ಮೊಹಮ್ಮದ್ ಖಾಲಿದ್ (25) ಅವರ ಮೇಲೆ ಘೋಷಿಸಿದ್ದ ಒಂದು ಲಕ್ಷ ರೂಪಾಯಿ ಬಹುಮಾನವನ್ನು ಕೂಡ ಮೂರು ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ.
ಬಾಟ್ಲಾ ಹೌಸ್ ಎನ್‌ಕೌಂಟರ್ ಬಳಿಕ ಪರಾರಿಯಾಗಿ ರಾಜಕಾರಣಿಗಳಿಂದ ಸಹಕಾರ ಪಡೆದುಕೊಂಡಿದ್ದ ಶಾಹ್ಜಾದ್ ಎಂಬಾತ ಇದೇ ವರ್ಷದ ಫೆಬ್ರವರಿಯಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದ. ಈತನೂ ಶಾರೂಖ್ ಎಂಬ ವ್ಯಕ್ತಿಯ ಕುರಿತು ಮಾಹಿತಿ ನೀಡಿದ್ದ.
ಯಾಸಿನ್ ಭಟ್ಕಳ್ ಮತ್ತೊಂದು ಹೆಸರಿದು... ಸರಣಿ ಸ್ಫೋಟಕ್ಕೆ ಸಂಬಂಧಪಟ್ಟಂತೆ ಬಂಧಿತನಾಗಿರುವ ಮೊಹಮ್ಮದ್ ಸೈಫ್ ಎಂಬಾತ, ತಾನು ಮಣಿಪಾಲದ ಶಾರೂಖ್ ಎಂಬ ವ್ಯಕ್ತಿಯಿಂದ ಎಂಟು ಸಿದ್ಧ ಬಾಂಬುಗಳನ್ನು ಪಡೆದುಕೊಂಡಿರುವುದಾಗಿ ಹೇಳಿದ್ದ. ಆದರೆ ಬಾಂಬ್ ನೀಡಿರುವ ವ್ಯಕ್ತಿ ಶಾರೂಖ್ ಎಂದು ಪರಿಚಯಿಸಿಕೊಂಡಿದ್ದನೇ ಹೊರತು, ಯಾಸಿನ್ ಭಟ್ಕಳ್ ಅಥವಾ ಬೇರೆ ಹೆಸರುಗಳಿಂದಲ್ಲ. ನನಗೆ ಭಟ್ಕಳ್ ಹೆಸರಿನ ಯಾವ ವ್ಯಕ್ತಿಗಳ ಪರಿಚಯವೂ ಇಲ್ಲ ಎಂದು ಹೇಳಿದ್ದ.
ಈ ಸಂಬಂಧ ಉಡುಪಿ, ಮಣಿಪಾಲ ಮತ್ತು ಮಂಗಳೂರಿನಲ್ಲಿ ಎರಡು ವರ್ಷಗಳ ಹಿಂದೆಯೇ ದೆಹಲಿ ಪೊಲೀಸರು ತನಿಖೆ ನಡೆಸಿದ್ದರು. ಪೊಲೀಸರ ಪ್ರಕಾರ ಶಾರೂಖ್ ಎಂಬ ವ್ಯಕ್ತಿ ಬೇರೆ ಯಾರೂ ಅಲ್ಲ, ಕುಖ್ಯಾತ ಭಯೋತ್ಪಾದಕ ಯಾಸಿನ್ ಭಟ್ಕಳ್.
ಇಂಡಿಯನ್ ಮುಜಾಹಿದೀನ್ ಸಂಸ್ಥಾಪಕ ಸದಸ್ಯರಾದ ಉತ್ತರ ಕನ್ನಡ ಜಿಲ್ಲೆಯ ರಿಯಾಜ್ ಅಹ್ಮದ್ ಭಟ್ಕಳ್ ಮತ್ತು ಇಕ್ಬಾಲ್ ಭಟ್ಕಳ್ ಅವರ ಆಪ್ತ ಸಹಚರ ಎಂದು ಹೇಳಲಾಗಿರುವ ಯಾಸಿನ್ ಭಟ್ಕಳ್ ಬಾಂಬು ತಯಾರಿಕಾ ನಿಪುಣ. ಈತನೇ ಶಾರೂಖ್ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಅಭಿಪ್ರಾಯಪಡುತ್ತಾರೆ.
ಯಾಸಿನ್ ಭಟ್ಕಳ್ ಆಲಿಯಾಸ್ ಮೊಹಮ್ಮದ್ ಯಾಸಿನ್ ಆಲಿಯಾಸ್ ಅಹ್ಮದ್ ಆಲಿಯಾಸ್ ಶಾರೂಖ್ ಎಂದು ಗುರುತಿಸಿಕೊಂಡಿರುವ 27ರ ಹರೆಯದ ಈತ ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯಲ್ಲಿದ್ದುಕೊಂಡು ದೇಶದ ಹಲವೆಡೆ ಕುಕೃತ್ಯಗಳನ್ನು ನಡೆಸಿದ್ದು, ಪ್ರಸಕ್ತ ಪಾಕಿಸ್ತಾನದ ಕರಾಚಿಯಲ್ಲಿದ್ದಾನೆ ಎಂದು ಹೇಳಲಾಗುತ್ತಿದೆ.