ಸರಕಾರ ನಿದ್ರಿಸುತ್ತಿದೆಯೇ?: ಐಪಿಎಲ್ ಬಗ್ಗೆ ಪ್ರತಿಪಕ್ಷಗಳ ಪ್ರಶ್ನೆ
ನವದೆಹಲಿ, ಶುಕ್ರವಾರ, 23 ಏಪ್ರಿಲ್ 2010( 13:42 IST )
ಇಂಡಿಯನ್ ಪ್ರೀಮಿಯರ್ ಲೀಗ್ ಭ್ರಷ್ಟಾಚಾರದಲ್ಲಿ ಯುಪಿಎ ಸರಕಾರದ ಸಚಿವರುಗಳು ಪಾಲ್ಗೊಂಡಿರುವುದು ದಿನಕ್ಕೊಬ್ಬರಂತೆ ಬೆಳಕಿಗೆ ಬರುತ್ತಿದ್ದು, ಸರಕಾರ ನಿದ್ದೆ ಮಾಡುತ್ತಿದೆಯೇ ಎಂದು ವಿರೋಧ ಪಕ್ಷಗಳು ಲೋಕಸಭೆಯಲ್ಲಿ ಶುಕ್ರವಾರ ಪ್ರಶ್ನಿಸಿ ಕೋಲಾಹಲ ಎಬ್ಬಿಸಿವೆ.
ಅಲ್ಲದೆ ಸಂಪೂರ್ಣ ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಬೇಕೆಂದು ಆಗ್ರಹಿಸಿವೆ. ಇದಕ್ಕೆ ಉತ್ತರಿಸಿರುವ ಸರಕಾರ, ಜೆಪಿಸಿ ತನಿಖೆಯ ಕುರಿತು ಯೋಚನೆ ಮಾಡುವುದಾಗಿ ಭರವಸೆ ನೀಡಿದೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ತನ್ನ ಮಿತ್ರ ಪಕ್ಷ ಎನ್‌ಸಿಪಿಯ ನಾಯಕರುಗಳನ್ನು ರಕ್ಷಣೆ ಮಾಡುವಲ್ಲಿ ವ್ಯಸ್ತವಾಗಿದೆ ಎಂದು ಆರೋಪಿಸಿರುವ ಬಿಜೆಪಿ ಸಂಸದೆ ಹಾಗೂ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಉನ್ನತ ಮಟ್ಟದಲ್ಲಿ ಪ್ರಕರಣದ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಐಪಿಎಲ್‌ನಲ್ಲಿ ಭ್ರಷ್ಟಾಚಾರ ಮುಳುಗೇಳುತ್ತಿದ್ದು, ಇಲ್ಲಿ ಜಂಟಿ ಸಂಸದೀಯ ಸಮಿತಿ ತನಿಖೆ ಅಗತ್ಯವಿದೆ. ನಾವು ಕ್ರಿಕೆಟ್ ಅಥವಾ ಐಪಿಎಲ್ ವಿರೋಧಿಗಳಲ್ಲ. ಆದರೆ ಇಲ್ಲಿ ಹೂಡಲಾಗುತ್ತಿರುವ ಹಣದ ಮೂಲ ಮತ್ತು ಅಲ್ಲಿ ನಡೆಯುತ್ತಿರುವ ವಿದೇಶಿ ಬಂಡವಾಳ ಸೇರಿದಂತೆ ಭ್ರಷ್ಟಾಚಾರಗಳ ಬಗ್ಗೆ ನಾವು ಸಹಿಸಲು ಸಾಧ್ಯವಿಲ್ಲ ಎಂದರು.
ಕೇಂದ್ರ ವಾಯುಯಾನ ಸಚಿವ ಪ್ರಫುಲ್ ಪಟೇಲ್ ಮತ್ತು ಕೃಷಿ ಸಚಿವ ಶರದ್ ಪವಾರ್ ಅವರು ತಮ್ಮ ತಪ್ಪುಗಳಿಗೆ ತಾವೇ ಜವಾಬ್ದಾರರು ಎಂಬ ಸಂಯುಕ್ತ ಜನತಾದದಳ ಶರದ್ ಯಾದವ್ ಪ್ರಹಾರಕ್ಕೆ ಸುಷ್ಮಾ ಬೆಂಬಲ ಸೂಚಿಸಿದರು.
ಐಪಿಎಲ್ ಎನ್ನುವುದು ಕಳ್ಳರ ಸಂತೆಯಾಗಿದೆ ಎಂದು ಗಂಭೀರವಾಗಿ ಆರೋಪಿಸಿದ ಯಾದವ್, ಇದೊಂದು ಗಂಭೀರ ವಿಚಾರ; ಈಗಾಗಲೇ ಐಪಿಎಲ್ ಹಗರಣದಲ್ಲಿ ಮತ್ತೆ ಇಬ್ಬರು ಸಚಿವರುಗಳ ಹೆಸರುಗಳು ಬಂದಿವೆ. ಹಾಗಾಗಿ ಇದರ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿಯನ್ನು ರಚಿಸುವ ಅಗತ್ಯವಿದೆ ಎಂದು ಅವರು ಬೇಡಿಕೆ ಮುಂದಿಟ್ಟರು.
ಅದೇ ಹೊತ್ತಿಗೆ ಐಪಿಎಲ್ ಆಯುಕ್ತ ಲಲಿತ್ ಮೋದಿ ವಿರುದ್ಧ ಟೀಕಾ ಪ್ರಹಾರ ಮಾಡಿದ ಶರದ್ ಯಾದವ್, ಅವರಿಗೆ ರಾಜಸ್ತಾನದಿಂದ ಮಾರಿಷಸ್ ತನಕ ಸಂಬಂಧಗಳಿವೆ ಎಂದರು.
ಐಪಿಎಲ್ ವಿವಾದದ ಕುರಿತ ಚರ್ಚೆಗೆ ಉತ್ತರಿಸಿದ ವಿತ್ತ ಸಚಿವ ಪ್ರಣಬ್ ಮುಖರ್ಜಿ, ಸಂಸದರ ಬೇಡಿಕೆಯಂತೆ ಜಂಟಿ ಸಂಸದೀಯ ಸಮಿತಿಯನ್ನು ರಚಿಸುವ ಕುರಿತು ಪರಿಗಣನೆ ಮಾಡಲಾಗುತ್ತದೆ ಎಂದರು.
ಸಂಸದರ ಅಭಿಪ್ರಾಯಗಳನ್ನು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಗಮನಕ್ಕೆ ತರುವುದಾಗಿ ಹೇಳಿದ ಮುಖರ್ಜಿ, ಎಲ್ಲವನ್ನೂ ಆತುರಾತುರವಾಗಿ ಮಾಡಲು ಸಾಧ್ಯವಿಲ್ಲ ಎಂದರು.
ಮುಖರ್ಜಿ ಭರವಸೆಗಳ ಹೊರತಾಗಿಯೂ ಸಂಸದರು ಐಪಿಎಲ್ ವಿವಾದದ ಕುರಿತು ಘೋಷಣೆಗಳನ್ನು ಕೂಗುತ್ತಾ ಗದ್ದಲ ಮುಂದುವರಿಸಿದ್ದರಿಂದ ಕಲಾಪನ್ನು ಸ್ಪೀಕರ್ ಮೀರಾ ಕುಮಾರ್ ಅಪರಾಹ್ನಕ್ಕೆ ಮುಂದೂಡಿದ್ದಾರೆ.
ಬಳಿಕ ಐಪಿಎಲ್ ವಿವಾದಕ್ಕೆ ಕುರಿತಂತೆ ಜಂಟಿ ಸಂಸದೀಯ ಸಮಿತಿ ರಚನೆ ಕುರಿತು ಸಂಸದೀಯ ವ್ಯವಹಾರಗಳ ಸಚಿವ ಪವನ್ ಭನ್ಸಾಲ್ ಮತ್ತು ಇದೇ ಖಾತೆಯ ರಾಜ್ಯ ಸಚಿವ ವಿ. ನಾರಾಯಣಸ್ವಾಮಿಯವರೊಂದಿಗೆ ಮುಖರ್ಜಿ ಮಾತುಕತೆ ನಡೆಸಿದರು.